ಈ ಗಾಯಕ ರಾಜಕಾರಣಿಯ ಹಾಡಿಗೆ ಚುನಾವಣಾ ಆಯೋಗ ಕತ್ತರಿ

Update: 2019-04-03 03:35 GMT

ಕೊಲ್ಕತ್ತಾ, ಎ. 3: ಬೆಂಗಾಲಿ ಗಾಯಕ ಮತ್ತು ಕೇಂದ್ರ ಸಚಿವ ಬಬುಲ್ ಸುಪ್ರಿಯೊ ಅವರು ಸಂಯೋಜಿಸಿರುವ ಚುನಾವಣಾ ಪ್ರಚಾರ ಗೀತೆಯನ್ನು ಬುಧವಾರ ನಡೆಯುವ ಎರಡು ಬಿಜೆಪಿ ರ್ಯಾಲಿಗಳಲ್ಲಿ ಹಾಡಲು ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಈ ಹಾಡಿಗೆ ಅನುಮತಿ ನೀಡಿಲ್ಲ. ಹಾಡಿನಲ್ಲಿ ಮಾರ್ಪಾಡುಗಳನ್ನು ಮಾಡಿ ಅದರ ಪ್ರತಿಯನ್ನು ಸಲ್ಲಿಸುವಂತೆ ಕೇಳಿದ್ದು, ಪಕ್ಷ ಇನ್ನೂ ಅದನ್ನು ಸಲ್ಲಿಸಿಲ್ಲ" ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಸಂಜಯ್ ಬಸು ಹೇಳಿದ್ದಾರೆ.

ಚುನಾವಣಾ ಆಯೋಗದ ಅನುಮತಿ ಪಡೆಯದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೀತೆಯ ವಿಡಿಯೊ ಬಿಡುಗಡೆ ಮಾಡಿದ್ದಕ್ಕಾಗಿ ಈ ಗಾಯಕ- ರಾಜಕಾರಣಿಗೆ ಆಯೋಗ ಈಗಾಗಲೇ ಶೋಕಾಸ್ ನೋಟಿಸ್ ನೀಡಿದೆ. ಬುಧವಾರ ಸಿಲಿಗುರಿ ಮತ್ತು ಕೊಲ್ಕತ್ತಾದಲ್ಲಿ ನಡೆಯುವ ಎರಡು ಪ್ರಚಾರ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದಾರೆ.

ಬುಧವಾರದ ರ್ಯಾಲಿಗಳಲ್ಲಿ ಮಾತ್ರವಲ್ಲ, ಸಮಿತಿ ಅನುಮತಿ ನೀಡುವವರೆಗೆ ಯಾವುದೇ ಕಡೆಗಳಲ್ಲಿ ಈ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ಬಸು ಸ್ಪಷ್ಟಪಡಿಸಿದ್ದಾರೆ. ಬುಧವಾರದ ರ್ಯಾಲಿಗಳಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆಯಾಗುತ್ತದೆಯೇ ಎಂಬ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News