ಸಂಗಬೆಟ್ಟು: ಬಹುಗ್ರಾಮ ಕುಡಿಯುವ ನೀರಿನ ಯೋಜನೆ

Update: 2019-04-03 06:42 GMT

ಬಂಟ್ವಾಳ, ಮಾ.3: ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಮಹಾತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಾಪಿತವಾಗಿದ್ದರೂ, ಈ ಬಾರಿಯ ಉರಿ ಬಿಸಿಲಿನ ತಾಪಮಾನದ ಏರಿಕೆಗೆ ನೀರಿನ ಮೂಲವೆ ಬತ್ತಿ ಹೋಗುವ ಸಾಧ್ಯತೆ ಹೆಚ್ಚಿದ್ದು, ಈ ಯೋಜನೆ ಅವಲಂಬಿತ ಗ್ರಾಮಗಳು ನೀರಿನ ಬರ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಗಬೆಟ್ಟು ಮತ್ತಿತರ ಗ್ರಾಮ ಪಂಚಾಯತ್‌ಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಸಂಗಬೆಟ್ಟು ಗ್ರಾಮದ ಲ್ಗುಣಿ ನದಿ ತೀರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ.ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನದಿ ನೀರನ್ನೆ ನಂಬಿಕೊಂಡಿರುವ ಗ್ರಾಮಗಳ ಜನರು ಮತ್ತೆ ಕೊಳವೆ ಬಾವಿಯನ್ನೆ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಣೆಕಟ್ಟಿನಲ್ಲಿ ನೀರಿನ ಮಟ್ಟ ಇಳಿಕೆ:

ಫಲ್ಗುಣಿ ನದಿ ಪುಚ್ಚೆಮೊಗರು ಬಂಟ್ವಾಳ- ಮೂಡುಬಿದಿರೆ ತಾಲೂಕುಗಳ ಗಡಿಭಾಗದಲ್ಲಿ ಹಾದು ಹೋಗುತ್ತವೆ. ಈ ನಿಟ್ಟಿನಲ್ಲಿ ಪುಚ್ಚಮೊಗರು ಸೇತುವೆ ಬಳಿ ಲ್ಗುಣಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿಂದ ಮೂಡುಬಿದಿರೆಗೆ ನೀರು ಸರಬರಾಜುಗೊಳ್ಳುತ್ತದೆ. ಕಿಂಡಿ ಅಣೆಕಟ್ಟಿನ ಕೆಳ ಭಾಗದಲ್ಲಿ ಸಂಗಬೆಟ್ಟು ಯೋಜನೆಗೆ ರೇಚಕ ಸ್ಥಾವರ (ಜಾಕ್‌ವೆಲ್) ನಿರ್ಮಿಸಲಾಗಿದ್ದು,ಪಕ್ಕದ ಗುಡ್ಡದಲ್ಲಿ ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ. ಯೋಜನೆಯ ಲಾನುಭವಿ ಗ್ರಾಮಗಳಲ್ಲಿ ನಿರ್ಮಿಸಲಾದ ಓವರ್‌ಹೆಡ್ ಟ್ಯಾಂಕ್ ಮೂಲಕ ಇಲ್ಲಿಂದ ನೀರು ಸರಬರಾಜುಗೊಳ್ಳುವ ವ್ಯವಸ್ಥೆ ನಡೆಸಲಾಗಿತ್ತು. ಸಂಗಬೆಟ್ಟು ಗ್ರಾಪಂ ವ್ಯಾಪ್ತಿಯ ಕೆರೆಬಳಿ, ಸಿದ್ದಕಟ್ಟೆ, ಮಂಚಕಲ್ಲು, ಕಲ್ಕುರಿ, ಮುಗೇರು ಕಡೆಗಳಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಬೇಸಿಗೆಯಲ್ಲಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಟ್ಯಾಂಕ್‌ಗಳಲ್ಲಿ ನೀರಿನ ಕೊರತೆ ಉಂಟಾಗಿದೆ.

ಪರ್ಯಾಯ ವ್ಯವಸ್ಥೆ:

ಸಂಗಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ 9 ಸರಕಾರಿ ಕೊಳವೆ ಬಾವಿಗಳು, 4 ಸರಕಾರಿ ಬಾವಿಗಳಿದ್ದು ಎಲ್ಲವೂ ಸುಸ್ಥಿತಿಯಲ್ಲಿವೆ. ಈ ವ್ಯಾಪ್ತಿಯ 4 ಕಡೆ ಕಿಂಡಿಅಣೆಕಟ್ಟು ನಿರ್ಮಿಸಲಾಗಿದ್ದು, ಆ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಆದರೆ, ಈ ಭಾಗದಲ್ಲಿ ಯಾವುದೇ ಕೆರೆಗಳಿಲ್ಲ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ದೊರಕದ ಹಿನ್ನೆಲೆಯಲ್ಲಿ ಜನತೆ ಸದ್ಯ ಹಿಂದಿನಂತೆ ಖಾಸಗಿ ಬಾವಿ, ಕೊಳವೆ ಬಾವಿಯನ್ನು ಆಶ್ರಯಿಸಿದ್ದಾರೆ.

ಹೊಂಡಗಳ ಮೂಲಕ ನೀರು ಶೇಖರಣೆ:

ಇದೀಗ ಈ ಭಾಗದ ನದಿಯಲ್ಲಿ ಮರಳಿನ ಹೂಳು ತೆಗೆದು ಹೊಂಡ ಮಾಡಿ ನೀರು ತುಂಬುವ ಕಾರ್ಯ ಮಾಡಲಾಗುತ್ತಿದೆ. ಆದರೆ, ಇದರಿಂದ ಹೆಚ್ಚು ದಿನ ನೀರು ಲಭ್ಯವಾಗದು ಎಂಬ ಆತಂಕವಿದ್ದು, ಗ್ರಾಮಸ್ಥರಿಗೆ ನೀರಿನ ಬರದ ಭೀತಿ ಎದುರಾಗಿದೆ.

ಏನಿದು ಯೋಜನೆ?

ಸುಮಾರು 32.90ಕೋಟಿ ರೂ. ವೆಚ್ಚದಲ್ಲಿ ಅಂದಿನ ಸಚಿವ ಬಿ.ರಮಾನಾಥ ರೈ ಅವರ ಮುತುವರ್ಜಿಯಿಂದ ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಸಂಗಬೆಟ್ಟು, ಕರ್ಪೆ, ಕುಕ್ಕಿಪಾಡಿ, ಎಲಿಯ ನಡುಗೋಡು, ರಾಯಿ, ಕೊಯಿಲ, ಅರಳ, ಚೆನ್ನೆತ್ತೋಡಿ, ಅಜ್ಜಿಬೆಟ್ಟು, ಪಿಲಿಮೊಗರು, ಪಂಜಿಕಲ್ಲು, ಮೂಡುನಡುಗೋಡು, ಬುಡೋಳಿ, ಅಮ್ಟಾಡಿ, ಕುರಿಯಾಳ ಹೀಗೆ 15 ಗ್ರಾಮಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮಸ್ಥರಿಗೆ ಇದುವರೆಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ, ದಿನೇ ದಿನೇ ತಾಪಮಾನದ ಏರಿಕೆಯಿಂದ ನದಿಯಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿಂದ ನೀರಿನ ಸರಬರಾಜು ಅಸಾಧ್ಯವಾಗಬಹುದು. ಕಳೆದ ವರ್ಷ ಇಂತಹ ಯಾವುದೇ ಸಮಸ್ಯೆ ಬಂದಿರಲಿಲ್ಲ. 

-ಸಿಲ್ವಿಯಾ ಫೆರ್ನಾಂಡಿಸ್, ಸಂಗಬೆಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News