ಎಂದೂ ಬಿಜೆಪಿ ಟಿಕೆಟ್ ಕೇಳಿಲ್ಲ: ಸುಮಿತ್ರಾ ಮಹಾಜನ್

Update: 2019-04-03 07:53 GMT

ಇಂಧೋರ್: ಇಂಧೋರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಸಸ್ಪೆನ್ಸ್‌ಗೆ ಇನ್ನೂ ಉತ್ತರ ಸಿಕ್ಕಿಲ್ಲವಾದರೂ, ಸ್ಥಳೀಯ ಸಂಸದೆ ಮತ್ತು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, "ಕಳೆದ ಮೂರು ದಶಕಗಳಲ್ಲಿ ಎಂದೂ ಬಿಜೆಪಿ ಟಿಕೆಟ್ ಕೇಳಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಅವರ ಉಮೇದುವಾರಿಕೆಯನ್ನು ಘೋಷಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, "ಬಿಜೆಪಿ ಮುಖಂಡರ ಮನಸ್ಸಿನಲ್ಲಿ ಏನೋ ಇರಬಹುದು" ಎಂದಷ್ಟೇ ಉತ್ತರಿಸಿದರು.

ಎಂಟು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಸುಮಿತ್ರಾ ಅವರನ್ನು ಕೂಡಾ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿಯವರ ಸಾಲಿಗೆ ಸೇರಿಸಲಾಗುತ್ತದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ. ಎ. 12ರಂದು ಸುಮಿತ್ರಾ ಮಹಾಜನ್ 75 ವರ್ಷ ಪೂರ್ಣವಾಗುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ನಡೆ ಕುತೂಹಲ ಕೆರಳಿಸಿದೆ.

ಪಕ್ಷದ ಇಬ್ಬರು ಹಿರಿಯ ಮುಖಂಡರಾದ ಎಲ್.ಕೆ.ಆಡ್ವಾಣಿ (91) ಮತ್ತು ಮುರಳಿ ಮನೋರಹ ಜೋಶಿ (85) ಅವರಿಗೆ ಕ್ರಮವಾಗಿ ಗಾಂಧಿನಗರ ಮತ್ತು ಕಾನ್ಪುರ ಕ್ಷೇತ್ರಗಳಿಂದ ಪಕ್ಷ ಟಿಕೆಟ್ ನಿರಾಕರಿಸಿದೆ.

"1989ರಲ್ಲಿ ಮೊದಲ ಬಾರಿಗೆ ಇಂಧೋರ್‌ನಿಂದ ಸ್ಪರ್ಧಿಸಿದಾಗಿನಿಂದಲೂ ನಾನೆಂದೂ ಪಕ್ಷದ ಟಿಕೆಟ್ ಕೇಳಿರಲಿಲ್ಲ. ಪಕ್ಷವೇ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿತ್ತು. ನಾನೆಂದೂ ಟಿಕೆಟ್ ಆಗ್ರಹಿಸಿರಲಿಲ್ಲ. ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿಯಿಂದ ಯಾರು ಸ್ಪರ್ಧಿಸಬೇಕು ಎನ್ನುವುದನ್ನು ಪಕ್ಷವೇ ಹೇಳಬೇಕು" ಎಂದು ಅವರು ಸ್ಪಷ್ಟಪಡಿಸಿದರು.

ಇಂಧೋರ್ ಟಿಕೆಟ್ ಘೋಷಣೆಗೆ ವಿಳಂಬ ಮಾಡುತ್ತಿರುವ ಬಗ್ಗೆ ಯಾವ ಬಿಜೆಪಿ ಮುಖಂಡರಲ್ಲೂ ಇದುವರೆಗೆ ಮಾತನಾಡಿಲ್ಲ ಎಂದು ಅವರು ಹೇಳಿದರು. "ನಮ್ಮ ಪಕ್ಷದಲ್ಲಿ ಇಂಥ ಪ್ರಶ್ನೆ ಕೇಳುವುದಿಲ್ಲ. ಏಕೆಂದರೆ ಸಂಘಟನೆ ಅಭ್ಯರ್ಥಿಯನ್ನು ನಿರ್ಧರಿಸುತ್ತದೆ. ಇಂದೋರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೂಕ್ತ ಸಮಯದಲ್ಲಿ ಪಕ್ಷ ಸೂಕ್ತ ನಿರ್ಧಾರ ಪ್ರಕಟಿಸುತ್ತದೆ" ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News