ಯುಡಿಎಫ್ ಮಹಿಳಾ ಅಭ್ಯರ್ಥಿ ಬಗ್ಗೆ ಕೀಳುಮಟ್ಟದ ಹೇಳಿಕೆ: ಎಲ್‍ಡಿಎಫ್ ನಾಯಕನ ವಿರುದ್ಧ ದೂರು

Update: 2019-04-03 11:30 GMT
ರಮ್ಯ ಹರಿದಾಸ್  

ತಿರುವನಂತಪುರಂ, ಎ.3: ಕೇರಳದ ಅಲತ್ತೂರ್ ಎಂಬಲ್ಲಿಂದ ಯುಪಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಮ್ಯ ಹರಿದಾಸ್  ಮಂಗಳವಾರ ಅಲತ್ತೂರ್ ಡಿವೈಎಸ್ಪಿಗೆ ದೂರು ನೀಡಿ ಎಲ್‍ ಡಿಎಫ್ ಸಂಚಾಲಕ ಎ. ವಿಜಯರಾಘವನ್ ತಮ್ಮನ್ನು ಸಾರ್ವಜನಿಕವಾಗಿ ಪೊನ್ನಾಣಿಯಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳಾ ವಿರೋಧಿ ಹೇಳಿಕೆ ನೀಡಿದ ವಿಜಯರಾಘವನ್ ವಿರುದ್ಧ ಆಡಳಿತ ಎಲ್‍ ಡಿಎಫ್ ಕ್ರಮ ಕೈಗೊಳ್ಳಲು ವಿಫಲವಾದ ನಂತರ  ತಾವು ಪೊಲೀಸ್ ದೂರು ದಾಖಲಿಸಿದ್ದಾಗಿ ರಮ್ಯ ಹೇಳಿಕೊಂಡಿದ್ದಾರೆ.

 “ಅಲತ್ತೂರಿನಿಂದ ಸ್ಪರ್ಧಿಸುತ್ತಿರುವ ಹುಡುಗಿ ನಾಮಪತ್ರ ಸಲ್ಲಿಸಿದ ಕೂಡಲೇ ಮೊದಲು ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ (ಐಯುಎಂಎಲ್ ಮುಖ್ಯಸ್ಥರು) ಬಳಿಗೆ ಧಾವಿಸಿ ನಂತರ ಪಿ.ಕೆ. ಕುಂಞಾಲಿ ಕುಟ್ಟಿ (ಐಯುಎಂಎಲ್ ನಾಯಕ ಹಾಗೂ ಮಲಪ್ಪುರಂ ಯುಡಿಎಫ್ ಅಭ್ಯರ್ಥಿ) ಅವರನ್ನು ಭೇಟಿಯಾಗಿದ್ದರು. ಆಕೆಗೆ ಈಗ ಏನಾಗುವುದೆಂದು ನನಗೆ ತಿಳಿದಿಲ್ಲ'' ಎಂದು ಮಲಪ್ಪುರಂ ಜಿಲ್ಲೆಯ ಪೊನ್ನಾಣಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಿಜಯರಾಘವನ್ ಹೇಳಿದ್ದರು.

ಕುಂಞಾಲಿ ಕುಟ್ಟಿ ಅವರು ಆರೋಪಿಯಾಗಿರುವ ಲೈಂಗಿಕ ಹಗರಣವೊಂದನ್ನು ವಿಜಯರಾಘವನ್ ಈ ಮೂಲಕ  ಉಲ್ಲೇಖಿಸಿದ್ದರು. ಆದರೆ ಕುಟ್ಟಿ ವಿರುದ್ಧ ಆರೋಪಗಳನ್ನು ನಂತರ ಕೈಬಿಡಲಾಗಿತ್ತು.

``ವಿಜಯರಾಘವನ್ ಅವರ ಹೇಳಿಕೆಗಳು ಸಂಘಟಿತ ಯತ್ನವೊಂದರ ಭಾಗವಾಗಿತ್ತು, ಅವರು ಈ ಹಿಂದೆಯೂ ನನ್ನ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು'' ಎಂದು ರಮ್ಯ ಹೇಳಿದ್ದಾರೆ.

``ನನ್ನಂತಹ ಪರಿಸ್ಥಿತಿ ಬೇರೆ ಯಾವ ಮಹಿಳೆಗೂ ಬರಬಾರದು, ಆದುದರಿಂದ ನಾನು ಪೊಲೀಸ್ ದೂರು ದಾಖಲಿಸಿದ್ದೇನೆ,'' ಎಂದು ದಿನಗೂಲಿ ಕಾರ್ಮಿಕರೊಬ್ಬರ ಪುತ್ರಿಯಾಗಿರುವ ರಮ್ಯ ಹೇಳಿದ್ದಾರೆ.

``ತಾವು ಆಕೆಗೆ ನೋವುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಅದು ಕೇವಲ ರಾಜಕೀಯ ಭಾಷಣವಾಗಿತ್ತು ಹಾಗೂ ಟೀಕೆ ಯುಡಿಎಫ್ ವಿರುದ್ಧವಾಗಿತ್ತು'' ಎಂದು ವಿಜಯರಾಘವನ್ ಸ್ಪಷ್ಟೀಕರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News