ಚುನಾವಣೆ ಬಳಿಕ ಬಿಎಸ್ಸೆನ್ನೆಲ್ ನ 54000 ಉದ್ಯೋಗಿಗಳು ಮನೆಗೆ !

Update: 2019-04-03 15:21 GMT

ಹೊಸದಿಲ್ಲಿ,ಎ.3: ಸುಮಾರು 54,000 ಸಿಬ್ಬಂದಿಗಳನ್ನು ಕಡಿತಗೊಳಿಸುವ ಪ್ರಸ್ತಾವವನ್ನು ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಆಡಳಿತ ಮಂಡಳಿಯು ಒಪ್ಪಿಕೊಂಡಿದೆ ಮತ್ತು ಚುನಾವಣೆಗಳು ಮುಗಿದ ಬಳಿಕ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಸರಕಾರವು ನೇಮಕಗೊಳಿಸಿದ್ದ ಪರಿಣಿತರ ಸಮಿತಿಯು ಮುಂದಿರಿಸಿದ್ದ 10 ಸಲಹೆಗಳ ಪೈಕಿ ಮೂರನ್ನು ಕಳೆದ ತಿಂಗಳು ನಡೆದಿದ್ದ ಬಿಎಸ್‌ಎನ್‌ಎಲ್ ಆಡಳಿತ ಮಂಡಳಿಯ ಸಭೆಯು ಒಪ್ಪಿಕೊಂಡಿದೆ ಎಂದು ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿವೆ.

ಆದರೆ ಚುನಾವಣೆಗಳು ಮುಗಿಯುವವರೆಗೆ ಕಡಿತ ಪ್ರಸ್ತಾವವನ್ನು ದೂರಸಂಪರ್ಕ ಇಲಾಖೆ(ಡಾಟ್)ಯು ಅನುಷ್ಠಾನಿಸುವ ಸಾಧ್ಯತೆ ಕಡಿಮೆ. ನೂತನ ಸರಕಾರವು ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವುದನ್ನು ಅಧಿಕಾರಿಗಳು ಕಾಯುತ್ತಿದ್ದಾರೆ. ಸ್ವಯಂ ನಿವೃತ್ತಿ ಪ್ಯಾಕೇಜ್ ಅಥವಾ ಉದ್ಯೋಗ ಕಡಿತ ಘೋಷಣೆ ಮತ್ತು ಸಂಸ್ಥೆಯ ವ್ಯವಹಾರಗಳನ್ನು ನಿಲ್ಲಿಸುವುದು ಇವೆಲ್ಲ ಉದ್ಯೋಗಿಗಳು ಮತ್ತು ಮುಂಬರುವ ಚುನಾವಣೆಗಳ ಮೇಲೆ ಬೃಹತ್ ಪರಿಣಾಮವನ್ನು ಬೀರುತ್ತದೆ. ಕಾದು ನೋಡಲು ಇಲಾಖೆಯು ನಿರ್ಧರಿಸಿದೆ ಎಂದು ಡಾಟ್‌ನಲ್ಲಿಯ ಮೂಲಗಳು ಹೇಳಿದವು.

ನಿವೃತ್ತಿ ವಯಸ್ಸನ್ನು ಈಗಿನ 60 ವರ್ಷಗಳಿಂದ 58 ವರ್ಷಗಳಿಗೆ ತಗ್ಗಿಸುವುದು ,50 ವರ್ಷ ಮತ್ತು ಹೆಚ್ಚಿನ ವಯೋಮಾನದ ಎಲ್ಲ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್) ಮತ್ತು ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರದ ಹಂಚಿಕೆಯನ್ನು ತ್ವರಿತಗೊಳಿಸುವುದು ಇವು ಮಂಡಳಿಯು ಒಪ್ಪಿಕೊಂಡಿರುವ ಶಿಫಾರಸುಗಳಲ್ಲಿ ಸೇರಿವೆ.

ನಿವೃತ್ತಿ ವಯಸ್ಸು ನಿರ್ಧಾರ ಮತ್ತು ವಿಆರ್‌ಎಸ್‌ನಿಂದಾಗಿ ಹಾಲಿ 1,74,312 ಸಿಬ್ಬಂದಿಗಳನ್ನು ಹೊಂದಿರುವ ಬಿಎಸ್‌ಎನ್‌ಎಲ್‌ನ ಸುಮಾರು 54,451 ಅಥವಾ ಶೇ.31ರಷ್ಟು ಸಿಬ್ಬಂದಿಗಳು ನಿರ್ಗಮಿಸಲಿದ್ದಾರೆ.

ನಿವೃತ್ತಿ ವಯಸ್ಸನ್ನು ತಗ್ಗಿಸುವ ನಿರ್ಧಾರವೊಂದೇ 33,568 ಉದ್ಯೋಗಿಗಳನ್ನು ಕಡಿಮೆ ಮಾಡಲಿದೆ ಮತ್ತು ಈ ಕ್ರಮದಿಂದಾಗಿ ಬಿಎಸ್‌ಎನ್‌ಎಲ್ ಮುಂದಿನ ಆರು ವರ್ಷಗಳಲ್ಲಿ ವೇತನ ಪಾವತಿಯಲ್ಲಿ ಒಟ್ಟು 13,895 ಕೋ.ರೂ.ಗಳನ್ನು ಉಳಿಸುವ ನಿರೀಕ್ಷೆಯಿದೆ. ಇನ್ನೊಂದೆಡೆ ವಿಆರ್‌ಎಸ್‌ನಿಂದಾಗಿ ವಾರ್ಷಿಕ 1,671 ಕೋ.ರೂ.ನಿಂದ 1,921.24 ಕೋ.ರೂ.ವರೆಗೆ ಉಳಿತಾಯವಾಗಲಿದೆ. ವಿಆರ್‌ಎಸ್‌ನಿಂದ ಕಂಪನಿಯ ಮೇಲೆ ಸುಮಾರು 13,049 ಕೋ.ರೂ.ಗಳ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಬಿಎಸ್‌ಎನ್‌ಎಲ್ ಸಿಬ್ಬಂದಿಗಳ ಸರಾಸರಿ ವಯಸ್ಸು 55 ವರ್ಷಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಎಂಟಿಎನ್‌ಎಲ್ ಮತ್ತು ಬಿಎಸ್‌ಎನ್‌ಎಲ್‌ಗೆ 4ಜಿ ತರಂಗಾಂತರ ಹಂಚಿಕೆ ವಿಷಯವನ್ನು ಪರಿಶೀಲಿಸುವಂತೆ ಡಾಟ್ ಈಗಾಗಲೇ ಟ್ರಾಯ್‌ಗೆ ಸೂಚಿಸಿದ್ದು, ಅದರ ನಿಲುವು ಈವೆರಡೂ ದೂರಸಂಪರ್ಕ ಸಂಸ್ಥೆಗಳ ಹಣೆಬರಹವನ್ನು ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿದವು.

ಬಿಎಸ್‌ಎನ್‌ಎಲ್‌ನ ನಷ್ಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಅದರ ಪುನಃಶ್ಚೇತನಕ್ಕಾಗಿ ಐಐಎಂ-ಅಹ್ಮದಾಬಾದ್‌ನ ಪ್ರೊಫೆಸರ್‌ಗಳಾದ ರೇಖಾ ಜೈನ್,ವಿಶಾಲ ಗುಪ್ತಾ ಮತ್ತು ಅಜಯ ಪಾಂಡೆ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ದೂರಸಂಪರ್ಕ ಕ್ಷೇತ್ರದಲ್ಲಿ ಮುಕೇಶ ಅಂಬಾನಿ ಒಡೆತನದ ಜಿಯೋ ಪ್ರವೇಶದ ಬಳಿಕ ಬಿಎಸ್‌ಎನ್‌ಎನ್ ಹಣಕಾಸು ಮುಗ್ಗಟ್ಟಿನಿಂದ ತತ್ತರಿಸುತ್ತಿದೆ. ಜಿಯೋ ದರಸಮರದಿಂದಾಗಿ 2017-18ರಲ್ಲಿ ಬಿಎಸ್‌ಎನ್‌ಎಲ್‌ನ ಆದಾಯವು ಶೇ.20ರಷ್ಟು ಕುಸಿದಿತ್ತು. 2017-18ನೇ ಸಾಲಿನಲ್ಲಿ ಅದು 7,993 ಕೋ.ರೂ.ಗಳ ನಷ್ಟವನ್ನು ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News