ಅಖಿಲೇಶ್, ಮುಲಾಯಂ ಬಿಜೆಪಿಯ ಏಜೆಂಟರು: ಭೀಮ್‌ಸೇನೆ ಅಧ್ಯಕ್ಷ ಆಝಾದ್ ಆರೋಪ

Update: 2019-04-03 15:08 GMT

ಹೊಸದಿಲ್ಲಿ, ಎ.3: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ತಂದೆ ಮುಲಾಯಂ ಸಿಂಗ್ ಯಾದವ್ ಬಿಜೆಪಿಯ ಏಜೆಂಟರಾಗಿದ್ದಾರೆ ಎಂದು ಭೀಮ್‌ಸೇನೆಯ ಸ್ಥಾಪಕ ಚಂದ್ರಶೇಖರ್ ಆಝಾದ್ ಆರೋಪಿಸಿದ್ದಾರೆ. ಅಲ್ಲದೆ, ವಾರಣಾಸಿಯಿಂದ ತನ್ನ ಸ್ಪರ್ಧೆ ಪ್ರಧಾನಿ ನರೇಂದ್ರ ಮೋದಿಗೆ ಲಾಭವಾಗುವುದಾದರೆ ಮತ್ತು ತನ್ನ ಸ್ಪರ್ಧೆಯಿಂದ ದಲಿತ ಚಳವಳಿಗೆ ತೊಂದರೆ ಆಗುವುದಾದರೆ ತಾನು ವಾರಣಾಸಿಯಿಂದ ಸ್ಪರ್ಧಿಸುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

“ಚಂದ್ರಶೇಖರ್ ಓರ್ವ ಬಿಜೆಪಿ ಏಜೆಂಟನಾಗಿದ್ದು, ದಲಿತರ ಮತ ಒಡೆಯುವ ಬಿಜೆಪಿ ಪಿತೂರಿಯನ್ವಯ ಅವರು ವಾರಾಣಸಿಯಿಂದ ಸ್ಪರ್ಧಿಸುತ್ತಿದ್ದಾರೆ” ಎಂದು ರವಿವಾರ ಬಿಎಸ್‌ಪಿ ನಾಯಕಿ ಮಾಯಾವತಿ ಟೀಕಿಸಿದ್ದರು. ಇದಕ್ಕೆ ಜೈಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಚಂದ್ರಶೇಖರ್ ಪ್ರತ್ರಿಕಿಯಿಸುತ್ತಿದ್ದರು. ಅಖಿಲೇಶ್ ಯಾದವ್ ಸರಕಾರ ದಲಿತರ ಮೇಲೆ ದೌರ್ಜನ್ಯ ನಡೆಸಿದ್ದ ಅಧಿಕಾರಿಗಳಿಗೆ ಭಡ್ತಿ ನೀಡಿದೆ. ಅವರ ತಂದೆ ಮುಲಾಯಂ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಕಾಣಲು ತಾನು ಬಯಸುವುದಾಗಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಇವರಿಬ್ಬರು ಬಿಜೆಪಿಯ ಏಜೆಂಟರು ಎಂದು ಆಝಾದ್ ಹೇಳಿದರು.

“ಅವರನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಏಜೆಂಟರೆಂದು ಕರೆದಿದ್ದಾರೆ. ಹೌದು, ನಾನು ಅಂಬೇಡ್ಕರ್ ಅವರ ಏಜೆಂಟ್. ನಮ್ಮದೇ ಜನರು ನಿಮ್ಮೊಂದಿಗೆ (ಅಖಿಲೇಶ್‌ರೊಂದಿಗೆ) ಇರದಿದ್ದರೆ ನಿಮಗೆ ನಾವ್ಯಾರೆಂದು ತೋರಿಸಿಕೊಡುತ್ತಿದ್ದೆ. ನಿಮಗೆ ಓಟು ಹಾಕಿ ಅಧಿಕಾರಕ್ಕೇರಿಸಿದ ನಮಗೆ ನಿಮ್ಮನ್ನು ಕೆಳಕ್ಕಿಳಿಸಲೂ ತಿಳಿದಿದೆ” ಎಂದು ಕಿಡಿಕಾರಿದರು.

ಉತ್ತರಪ್ರದೇಶದಲ್ಲಿ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಿಎಸ್ಪಿ ಪಕ್ಷ ಮೈತ್ರಿ ಮಾಡಿಕೊಂಡಿದೆ. ಬಿಎಸ್ಪಿಯ ಪ್ರಧಾನಕಾರ್ಯದರ್ಶಿ ಹಾಗೂ ಬ್ರಾಹ್ಮಣ ಮುಖವಾಗಿರುವ ಸತೀಶ್‌ಚಂದ್ರ ಅವರು ಮಾಯಾವತಿಯ ದಾರಿ ತಪ್ಪಿಸಿದ್ದಾರೆ ಎಂದು ಆಝಾದ್ ಆರೋಪಿಸಿದರು.

ಚಂದ್ರಶೇಖರ್‌ರನ್ನು ತನ್ನ ರಹಸ್ಯ ಗುಪ್ತಚರನ ರೂಪದಲ್ಲಿ ಬಿಎಸ್ಪಿಗೆ ಸೇರಿಸಲು ಬಿಜೆಪಿ ಹರಸಾಹಸ ಪಟ್ಟರೂ ವಿಫಲವಾಗಿದೆ. ರಾಷ್ಟ್ರ ಹಿತಾಸಕ್ತಿಗಾಗಿ ಸ್ವೇಚ್ಛಾಚಾರಿ, ದಲಿತ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಆದ್ದರಿಂದ ಯಾವುದೇ ಮತ ವ್ಯರ್ಥವಾಗದಂತೆ ಪ್ರಯತ್ನಿಸಬೇಕು ಎಂದು ರವಿವಾರ ಮಾಯಾವತಿ ಹೇಳಿಕೆ ನೀಡಿದ್ದರು. ಪ್ರಧಾನಿ ಮೋದಿಯ ವಿರುದ್ಧ ವಾರಾಣಸಿಯಲ್ಲಿ ತಾನು ಸ್ಪರ್ಧಿಸುತ್ತಿದ್ದು ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಬೆಂಬಲ ನೀಡಬೇಕು ಎಂದು ಕಳೆದ ತಿಂಗಳು ದಿಲ್ಲಿಯಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಚಂದ್ರಶೇಖರ್ ಆಝಾದ್ ಘೋಷಿಸಿದ್ದರು.

ವಾರಾಣಸಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಹೆಸರನ್ನು ಎಸ್ಪಿ-ಬಿಸ್ಪಿ-ಆರ್‌ಎಲ್‌ಡಿ ನೇತೃತ್ವ ಮೈತ್ರಿ ಕೂಟ ಇನ್ನೂ ಅಂತಿಮಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News