ಪ್ರಧಾನ ಮಂತ್ರಿ ಹುದ್ದೆ ಆಕಾಂಕ್ಷೆ ವ್ಯಕ್ತಪಡಿಸಿದ ಮಾಯಾವತಿ

Update: 2019-04-03 15:32 GMT

ವಿಶಾಖಪಟ್ಟಣಂ, ಎ. 3: ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷೆ ಬಗ್ಗೆ ಬುಧವಾರ ಸೂಚನೆ ನೀಡಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, ತನಗೆ ಅವಕಾಶ ನೀಡಿದರೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಪಡೆದುಕೊಂಡ ಅನುಭವದಿಂದ ಕೇಂದ್ರದಲ್ಲಿ ಉತ್ತಮ ಸರಕಾರ ನೀಡಬಲ್ಲೆ ಎಂದಿದ್ದಾರೆ.

ತಾನು ನಾಲ್ಕು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ‘‘ನನಗೆ ಸಾಕಷ್ಟು ಅನುಭವ ಇದೆ. ನಾನು ಈ ಅನುಭವವನ್ನು ಕೇಂದ್ರ ಸರಕಾರವನ್ನು ನಿರ್ವಹಿಸಲು ಹಾಗೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬಳಸಲಿದ್ದೇನೆ.’’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ‘‘ಕೇಂದ್ರದಲ್ಲಿ ಆಡಳಿತ ನಡೆಸುವ ಜವಾಬ್ದಾರಿ ನನಗೆ ಸಿಕ್ಕಿದರೆ, ನಾನು ನನ್ನ ಆಡಳಿತಾವಧಿಯ ಉತ್ತರ ಪ್ರದೇಶ ಮಾದರಿಯ ಆಡಳಿತ ಅನುಸರಿಸಲಿದ್ದೇನೆ. ಎಲ್ಲ ಹಂತದಲ್ಲೂ ಉತ್ತಮ ಆಡಳಿತ ನೀಡಲಿದ್ದೇನೆ’’ ಎಂದು ಪ್ರತಿಪಾದಿಸಿದರು. “ನೀವು ಪ್ರಧಾನ ಮಂತ್ರಿಯಾಗಲು ಬಯಸುತ್ತಿದ್ದೀರಾ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಮೇ 23ರಂದು ಘೋಷಿಸಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ ಎಂದರು. ಆಂಧ್ರಪ್ರದೇಶದಲ್ಲಿ ಬಿಎಸ್ಪಿ ಜನಸೇನಾ, ಸಿಪಿಐ ಹಾಗೂ ಸಿಪಿಎಂನೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ಮೈತ್ರಿಯ ಭಾಗವಾಗಿರುವ ಬಿಎಸ್ಪಿ ರಾಜ್ಯದಲ್ಲಿ 25 ಲೋಕಸಭಾ ಸ್ಥಾನಗಳಲ್ಲಿ 3ರಲ್ಲಿ ಸ್ಪರ್ಧಿಸಲಿದೆ. ವಿಧಾನ ಸಭೆ ಚುನಾವಣೆಯಲ್ಲಿ 175 ಸ್ಥಾನಗಳಲ್ಲಿ 21 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News