ಕಾಂಗ್ರೆಸ್ ಪ್ರಣಾಳಿಕೆ ಬೂಟಾಟಿಕೆಯ ದಾಖಲೆ: ಪ್ರಧಾನಿ ಮೋದಿ

Update: 2019-04-03 16:08 GMT

ಪಾಸೀಘಾಟ್(ಅರುಣಾಚಲ ಪ್ರದೇಶ),ಎ.3: ಕಾಂಗ್ರೆಸ್ ಪಕ್ಷವು ಮಂಗಳವಾರ ಬಿಡುಗಡೆಗೊಳಿಸಿರುವ ಚುನಾವಣಾ ಪ್ರಣಾಳಿಕೆಯು ಸುಳ್ಳುಗಳ ಕಂತೆಯಾಗಿರುವುದಿಂದ ಅದನ್ನು ‘ಬೂಟಾಟಿಕೆಯ ದಾಖಲೆ’ಎಂದು ಕರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ಚುನಾವಣಾ ರ್ಯಾಲಿಯಲ್ಲಿ ಟೀಕಿಸಿದರು. ಅರುಣಾಚಲ ಪ್ರದೇಶದಲ್ಲಿ ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳು ಎ.11ರಂದು ಏಕಕಾಲದಲ್ಲಿ ನಡೆಯಲಿವೆ.

ಒಂದೆಡೆ ದೃಢನಿರ್ಧಾರದ ಸರಕಾರವಿದ್ದರೆ ಇನ್ನೊಂದೆಡೆ ಸುಳ್ಳು ಭರವಸೆಗಳನ್ನು ನೀಡುವ ಜನರಿದ್ದಾರೆ ಎಂದು ಹೇಳಿದ ಮೋದಿ, ಈ ಜನರಂತೆ(ಕಾಂಗ್ರೆಸ್) ಅವರ ಪ್ರಣಾಳಿಕೆಯು ಕೂಡ ಭ್ರಷ್ಟವಾಗಿದೆ ಮತ್ತು ಬೂಟಾಟಿಕೆಯಿಂದ ಕೂಡಿದೆ. ಅದನ್ನು ಬೂಟಾಟಿಕೆಯ ದಾಖಲೆ ಎಂದು ಕರೆಯಬೇಕೇ ವಿನಃ ಪ್ರಣಾಳಿಕೆ ಎಂದಲ್ಲ ಎಂದರು.

ಲೋಕಸಭಾ ಚುನಾವಣೆಯು ವಿಶ್ವಾಸ ಮತ್ತು ಭ್ರಷ್ಟಾಚಾರದ,ಸಂಕಲ್ಪ ಮತ್ತು ಷಡ್ಯಂತ್ರದ ನಡುವಿನ ಆಯ್ಕೆಯ ಕುರಿತಾಗಿದೆ. ಬಿಜೆಪಿಯು ಕೇವಲ ಒಂದು ಭರವಸೆಯನ್ನು ನೀಡಿ ಅದನ್ನು ದಶಕಗಳ ಕಾಲ ಎಳೆಯುವುದಿಲ್ಲ ಎಂದ ಅವರು,ನಾವು ನಿಮ್ಮ ಬದುಕುಗಳನ್ನು ಸುಲಭವಾಗಿಸಲು ಪ್ರಾಮಾಣಿಕವಾಗಿ ಶ್ರಮಿಸುವ ಜನರಾಗಿದ್ದೇವೆ ಎಂದರು.

ಕಾಂಗ್ರೆಸ್ ಎಂದೂ ಈಶಾನ್ಯ ಭಾರತದ ಕನಸುಗಳು,ಮಹತ್ವಾಕಾಂಕ್ಷೆಗಳು ಮತ್ತು ಅಗತ್ಯಗಳಿಗೆ ಸಂವೇದನಾಶೀಲವಾಗಿರಲಿಲ್ಲ. ಆದರೆ ಎಲ್ಲ ಜನರ ಅಗತ್ಯಗಳನ್ನು ಪೂರೈಸುವ ಮತ್ತು ಬದಲಾವಣೆಯನ್ನು ತರುವ ಭರವಸೆಯನ್ನು ಈ ಚೌಕಿದಾರ್ ನೀಡುತ್ತಿದ್ದಾನೆ ಎಂದರು.

 ಕಾಂಗ್ರೆಸ್‌ನ್ನು ತರಾಟೆಗೆತ್ತಿಕೊಂಡ ಅವರು,2009ರ ವೇಳೆಗೆ ದೇಶದ ಪ್ರತಿಯೊಂದೂ ಮನೆಯು ವಿದ್ಯುತ್ ಸಂಪರ್ಕವನ್ನು ಹೊಂದಿರುತ್ತದೆ ಎಂದು ಪ್ರತಿಪಕ್ಷವು ತನ್ನ 2004ರ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ 2014ರ ಸುಮಾರಿಗೆ ಸುಮಾರು 18,000 ಗ್ರಾಮಗಳು ವಿದ್ಯುತ್ ಸಂಪರ್ಕವನ್ನು ಹೊಂದಿರಲಿಲ್ಲ ಮತ್ತು ಕೋಟ್ಯಂತರ ಕುಟುಂಬಗಳು ವಿದ್ಯುಚ್ಛಕ್ತಿಯನ್ನೇ ನೋಡಿರಲಿಲ್ಲ ಎಂದರು.

ದೇಶದ್ರೋಹ ಕಾನೂನನ್ನು ರದ್ದುಗೊಳಿಸುವ ಕಾಂಗ್ರೆಸ್ ಭರವಸೆಯನ್ನು ಪ್ರಸ್ತಾಪಿಸಿದ ಮೋದಿ,ರಾಷ್ಟ್ರಧ್ವಜವನ್ನು ಅವಮಾನಿಸುವವರಿಗೆ ಮತ್ತು ‘ಭಾರತ್,ತೇರೆ ತುಕ್ಡೇ ಹೋಂಗೆ’ ಎಂದು ಕೂಗುವವರಿಗೆ ಸಹ ಕಾಂಗ್ರೆಸ್ ಪಕ್ಷವು ಭರವಸೆಗಳನ್ನು ನೀಡಿದೆ. ಅದು ಇಂತಹ ಜನರ ಬಗ್ಗೆಯೂ ಅನುಕಂಪ ಹೊಂದಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News