ರಾಷ್ಟ್ರೀಯ ಭದ್ರತೆಯ 2 ನಿರ್ಣಾಯಕ ಕಡತಗಳನ್ನು ಬಿಜೆಪಿ ಮೂಲೆಗುಂಪು ಮಾಡಿದ್ದೇಕೆ?: ಪಿ.ಚಿದಂಬರಂ

Update: 2019-04-03 16:12 GMT

 ಹೊಸದಿಲ್ಲಿ,ಎ.3: ಹಿಂದಿನ ಯುಪಿಎ ಸರಕಾರದ ಎರಡು ಪ್ರಮುಖ ಉಪಕ್ರಮಗಳಾಗಿದ್ದ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರ(ಎನ್‌ಸಿಟಿಸಿ) ಮತ್ತು ರಾಷ್ಟ್ರೀಯ ಗುಪ್ತಚರ ಜಾಲ(ನ್ಯಾಟ್‌ಗ್ರಿಡ್) ಪ್ರಸ್ತಾವಗಳನ್ನು ಮೂಲೆಗುಂಪು ಮಾಡುವ ಮೂಲಕ ಆಡಳಿತ ಬಿಜೆಪಿಯು ಭಾರತವನ್ನು ಭಯೋತ್ಪಾದಕ ದಾಳಿಗಳಿಗೆ ಸುಲಭಭೇದ್ಯವನ್ನಾಗಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಬುಧವಾರ ಆರೋಪಿಸಿದ್ದಾರೆ.

ಈ ಎರಡು ಉಪಕ್ರಮಗಳನ್ನು ರೂಪಿಸಿ ಅವುಗಳಿಗೆ ಚಾಲನೆ ನೀಡಿದ್ದು ಮನಮೋಹನ ಸಿಂಗ್ ಸರಕಾರ ಎಂಬ ಕಾರಣದಿಂದ ನರೇಂದ್ರ ಮೋದಿ ಸರಕಾರವು ಅವುಗಳನ್ನು ಮೂಲೆಗುಂಪು ಮಾಡಿದೆಯೇ ಎಂದು ಚಿದಂಬರಂ ಸರಣಿ ಟ್ವೀಟ್‌ಗಳಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

2008ರ ಮುಂಬೈ ಭಯೋತ್ಪಾದಕ ದಾಳಿಗಳ ಬಳಿಕ ಆಗಿನ ಗೃಹಸಚಿವರಾಗಿದ್ದ ಚಿದಂಬರಂ ಎನ್‌ಸಿಟಿಸಿಯನ್ನು ಏಕೀಕೃತ ಭಯೋತ್ಪಾದನೆ ನಿಗ್ರಹ ಏಜೆನ್ಸಿಯಾಗಿ ಸ್ಥಾಪಿಸುವ ಪರಿಕಲ್ಪನೆಯನ್ನು ಮಂಡಿಸಿದ್ದರು. ಆದರೆ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಸೇರಿದಂತೆ ಹಲವಾರು ಮುಖ್ಯಮಂತ್ರಿಗಳು ಇದನ್ನು ವಿರೋಧಿಸಿದ್ದರು. ಇಂತಹುದೊಂದು ವ್ಯವಸ್ಥೆಯು ರಾಜ್ಯದ ಭದ್ರತಾ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪವನ್ನು ಮಾಡುತ್ತದೆ ಮತ್ತು ದೇಶದ ಒಕ್ಕೂಟ ವ್ಯವಸ್ಥೆಗೆ ಬೆದರಿಕೆಯಾಗುತ್ತದೆ ಎಂದು ಅವರು ಆರೋಪಿಸಿದ್ದರು.

ರಾಜ್ಯ ಸರಕಾರಗಳೊಂದಿಗೆ ಮಾತುಕತೆಗಳನ್ನು ಆರಂಭಿಸುವ ಮೂಲಕ ಒಮ್ಮತವನ್ನು ಮೂಡಿಸಲು ಆಗಿನ ಕೇಂದ್ರ ಸರಕಾರವು ಹಲವಾರು ಬಾರಿ ವಿಫಲ ಪ್ರಯತ್ನಗಳನ್ನು ನಡೆಸಿತ್ತು.

3,400 ಕೋ.ರೂ.ವೆಚ್ಚದ ನ್ಯಾಟ್‌ಗ್ರಿಡ್‌ಗಾಗಿ ಭದ್ರತೆ ಕುರಿತ ಸಂಪುಟ ಸಮಿತಿಯು 2011ರಲ್ಲಿಯೇ ಹಸಿರು ನಿಶಾನೆಯನ್ನು ತೋರಿಸಿದ್ದರೂ,ಅದಿನ್ನೂ ಕಾರ್ಯಗತಗೊಳ್ಳಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News