ಶೇ.80ರಷ್ಟು ಭಾರತೀಯ ಉದ್ಯೋಗಾಕಾಂಕ್ಷಿಗಳಿಗೆ ರಾಜಕೀಯದಲ್ಲಿ ಆಸಕ್ತಿ:ವರದಿ
ಬೆಂಗಳೂರು,ಎ.3: ದೇಶಾದ್ಯಂತ ಸುಮಾರು ಶೇ.80ರಷ್ಟು ಉದ್ಯೋಗಾಕಾಂಕ್ಷಿಗಳು ರಾಜಕೀಯದಲ್ಲಿ ಆಸಕ್ತರಾಗಿದ್ದಾರೆ ಮತ್ತು ರಾಜಕೀಯ ವಿಶ್ಲೇಷಕರಾಗಿ,ಸಾಮಾಜಿಕ ಕಾರ್ಯಕರ್ತರಾಗಿ ಮತ್ತು ರಾಜಕೀಯ ಪತ್ರಕರ್ತರಾಗಿ ವೃತ್ತಿಜೀವನವನ್ನು ಹೊಂದಲು ಎದುರು ನೋಡುತ್ತಿದ್ದಾರೆ ಎಂದು ಪ್ರಮುಖ ಪ್ಲೇಸ್‌ಮೆಂಟ್ ಕಂಪನಿ ಇಂಡೀಡ್ ಇಂಡಿಯಾದ ಸಮೀಕ್ಷಾ ವರದಿಯು ತಿಳಿಸಿದೆ.
ಮಹಿಳೆಯರಿಗಿಂತ(ಶೇ.12) ಪುರುಷರು(ಶೇ.21) ರಾಜಕೀಯವನ್ನು ವೃತ್ತಿಜೀವನವನ್ನಾಗಿ ರೂಪಿಸಿಕೊಳ್ಳುವ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ ಎಂದು ಕಂಪನಿಯು ಬುಧವಾರ ಬೆಂಗಳೂರಿನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.
ಎ.11ರಿಂದ ಮೇ 19ರವರೆಗೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಸಲಾದ ಸಮೀಕ್ಷೆಯು,ರಾಜಕೀಯದಲ್ಲಿ ವೃತ್ತಿಜೀವನಕ್ಕಾಗಿ ಸಾರ್ವಜನಿಕ ಮಾತುಗಾರಿಕೆ ಮತ್ತು ವಾದಮಂಡನೆ ಕೌಶಲ್ಯಗಳು ಅಗತ್ಯವಾಗಿದೆ ಎನ್ನುವುದು ಶೇ.59ರಷ್ಟು ಜನರ ನಂಬಿಕೆಯಾಗಿದ್ದರೆ,ಪೂರ್ಣ ಪ್ರಮಾಣದ ರಾಜಕಾರಣಿಯಾಗಲು ನಾಯಕತ್ವ ಮತ್ತು ಬಿಕ್ಕಟ್ಟು ನಿರ್ವಹಣೆ ಕೌಶಲ್ಯಗಳು ಅಗತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದಿದೆ.
ಶೇ.24ರಷ್ಟು ಜನರ ಪಾಲಿಗೆ ಮುಖ್ಯವಾಹಿನಿ ರಾಜಕಾರಣವು ಆಸಕ್ತಿದಾಯಕವಾಗಿದ್ದರೆ,ಶೇ.21ರಷ್ಟು ಉದ್ಯೋಗಾಕಾಂಕ್ಷಿಗಳು ವಿಶ್ಲೇಷಣೆ,ಸಾಮಾಜಿಕ ಸೇವೆಗಾಗಿರುವ ಸರಕಾರಿ ಸಂಸ್ಥೆ ಮತ್ತು ರಾಜಕೀಯ ಪತ್ರಿಕೋದ್ಯಮದಂತಹ ಸಂಬಂಧಿತ ಕ್ಷೇತ್ರಗಳಲ್ಲಿ ನೆಲೆಯನ್ನು ಕಂಡುಕೊಳ್ಳಲು ಬಯಸಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.