×
Ad

ಸುರಕ್ಷಿತ ನೈರ್ಮಲ್ಯ ವಿಷಯಕ್ಕೆ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಆದ್ಯತೆ: ಎಎಸ್‌ಸಿಐ ಒತ್ತಾಯ

Update: 2019-04-03 22:41 IST

ಹೈದರಾಬಾದ್, ಎ.3: ಸುರಕ್ಷಿತ ಶುಚೀಕರಣ ವಿಷಯವನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಅಪಾಯರಹಿತ ಶುಚೀಕರಣದ ಬಗ್ಗೆ ಧ್ವನಿ ಎತ್ತಬೇಕು ಎಂದು ‘ಎಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ’ (ಎಎಸ್‌ಸಿಐ) ಒತ್ತಾಯಿಸಿದೆ.

 2024ರ ವೇಳೆ ಸಂಪೂರ್ಣ ಮತ್ತು ಸುರಕ್ಷಿತ ಶುಚೀಕರಣವನ್ನು ಖಾತರಿಗೊಳಿಸಲು ‘ಎಲ್ಲರಿಗೂ ಎಲ್ಲಾ ಕಾಲಕ್ಕೂ ಅಪಾಯರಹಿತ ಶುಚೀಕರಣದ ಹಕ್ಕು’ ಎಂಬ ಶೀರ್ಷಿಕೆಯಡಿ ಹಲವು ಶಿಫಾರಸುಗಳನ್ನು ಸಂಸ್ಥೆಯು ಮುಂದಿಟ್ಟಿದೆ. ದೇಶದ ಗ್ರಾಮೀಣ ಭಾಗವನ್ನು ಬಯಲುಶೌಚ ಮುಕ್ತಗೊಳಿಸುವ ನಿಟ್ಟಿನಲ್ಲಿ ವೈಯಕ್ತಿಕ ಶೌಚಾಲಯ, ಸಾರ್ವಜನಿಕ ಶೌಚಾಲಯ ಹಾಗೂ ಸಮುದಾಯ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ ಶುಚೀಕರಣ ಎಂದರೆ ಶೌಚಾಲಯಗಳನ್ನು ನಿರ್ಮಿಸುವಷ್ಟೇ ಅಲ್ಲ. ಅಪಾಯರಹಿತ ಶೌಚಾಲಯವನ್ನು ಖಾತರಿಗೊಳಿಸಬೇಕಾಗಿದೆ.

 ಮಾನವನ ತ್ಯಾಜ್ಯ (ಮಲ)ವನ್ನು ಮರುಬಳಕೆ ವ್ಯವಸ್ಥೆಗೆ ರವಾನಿಸುವುದು ಅಥವಾ ಸುರಕ್ಷಿತ ವಿಲೇವಾರಿ ಮಾಡುವುದೇ ಅಪಾಯರಹಿತ, ಸುರಕ್ಷಿತ ಶುಚೀಕರಣವಾಗಿದೆ. ಶೌಚಾಲಯದ ಗುಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಆಗಿಂದಾಗ್ಗೆ ಒಸರುವ ಮಲದ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯಿಲ್ಲದೆ ಭಾರತವು ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದ ಪರಿಸರಕ್ಕೆ ಹಾನಿ ಹಾಗೂ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಎಎಸ್‌ಸಿಐ ನಿರ್ದೇಶಕ ವಿ.ಶ್ರೀನಿವಾಸ್ ಚಾರಿ ಹೇಳಿದ್ದಾರೆ.

 ಚರಂಡಿಯ ತ್ಯಾಜ್ಯಕ್ಕಿಂತ ಶೌಚಾಲಯದಲ್ಲಿ ಒಸರುವ ಮಲದ ತ್ಯಾಜ್ಯದಿಂದ ಅಧಿಕ ಪರಿಸರ ಮಾಲಿನ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರ ಆರೋಗ್ಯ ಹಾಗೂ ನೀರಿನ ಮೂಲಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದವರು ಹೇಳಿದ್ದಾರೆ. ಶೌಚಾಲಯದ ಬಳಕೆ ಬಳಿಕ ನೀರು ಹಾಕಿ, ಮರೆತುಬಿಡಿ ಎಂಬುದು ಭಾರತದ ನಗರಗಳಲ್ಲಿ ಇನ್ನು ಮುಂದೆ ನಡೆಯದು. ಶೌಚಾಲಯದ ತ್ಯಾಜ್ಯವನ್ನು ಸುರಕ್ಷಿತವಾಗಿ ನಿರ್ವಹಿಸುವ ಮೂಲಕ ಸಾಂಕ್ರಾಮಿಕ ರೋಗಗಳ ಸಮಸ್ಯೆ ಬಾರದಂತೆ ತಡೆಯಬೇಕಾಗಿದೆ. ಶೌಚಾಲಯದ ತ್ಯಾಜ್ಯವು ಮಕ್ಕಳ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ತ್ಯಾಜ್ಯವನ್ನು ಮರುಬಳಕೆಗೆ ಉಪಯೋಗಿಸಬಹುದು.

ಆದರೆ ಇದಕ್ಕೆ ಬಲಿಷ್ಟ ರಾಜಕೀಯ ಇಚ್ಛಾಶಕ್ತಿ ಹಾಗೂ ಬಜೆಟ್ ಅನುದಾನದ ಅಗತ್ಯವಿದೆ ಎಂದು ಪ್ರೊಫೆಸರ್ ಶ್ರೀನಿವಾಸ್ ಚಾರಿ ಹೇಳಿದ್ದಾರೆ. ಅಲ್ಲದೆ ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ನಿರ್ವಹಣೆ ವ್ಯವಸ್ಥೆಯನ್ನು ಎಲ್ಲಾ ಸರಕಾರಿ ಸಂಸ್ಥೆಗಳು, ಸರಕಾರಿ ಕಚೇರಿಗಳು, ಸಾರ್ವಜನಿಕ ಶೌಚಾಲಯ ಹಾಗೂ ಸಿನೆಮ ಮಂದಿರಗಳಲ್ಲಿ ಲಭ್ಯವಾಗಿಸುವ ವಿಷಯವನ್ನೂ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಬೇಕು ಎಂದವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News