ಮೋದಿ ಪರ ಪ್ರಚಾರ: ರಾಜ್ಯಪಾಲ ಕಲ್ಯಾಣ್ ಸಿಂಗ್ ವಿರುದ್ಧ ಕ್ರಮಕ್ಕೆ ರಾಷ್ಟ್ರಪತಿ ಸೂಚನೆ

Update: 2019-04-04 14:57 GMT

ಹೊಸದಿಲ್ಲಿ,ಎ.4: ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ನಡೆಸಿದ ಕಾರಣಕ್ಕೆ ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಶಿಸ್ತು ಕ್ರಮಕ್ಕೆ ಒಳಗಾಗುವ ಅಪಾಯ ಎದುರಿಸುತ್ತಿದ್ದಾರೆ. ಕಲ್ಯಾಣ್ ಸಿಂಗ್ ತನ್ನ ಸಾಂವಿಧಾನಿಕ ಹುದ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದ ಹಿನ್ನೆಲೆಯಲ್ಲಿ ಸಿಂಗ್ ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸರಕಾರಕ್ಕೆ ಸೂಚಿಸಿದ್ದಾರೆ.

ಸಿಂಗ್ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿ ಬರೆದಿರುವ ಪತ್ರವನ್ನು ರಾಷ್ಟ್ರಪತಿ ಕೋವಿಂದ್ ವಿದೇಶ ಪ್ರವಾಸದಿಂದ ವಾಪಸಾದ ನಂತರ ಸಚಿವಾಲಯಕ್ಕೆ ತಲುಪಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ರಾಜ್ಯಪಾಲರೊಬ್ಬರು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಮತ್ತು ಪ್ರಧಾನ ಮಂತ್ರಿ ಪರ ಅಭಿಯಾನ ನಡೆಸಿರುವ ಘಟನೆ ನಡೆದಿದೆ. ನೀತಿ ಸಂಹಿತೆ ರಾಜ್ಯಪಾಲರಿಗೆ ಅನ್ವಯವಾಗುವುದಿಲ್ಲ. ಆದರೆ ರಾಜ್ಯಪಾಲರು ಸಕ್ರಿಯ ರಾಜಕಾರಣದಿಂದ ದೂರವಿರಬೇಕು ಎಂದು ಕೋವಿಂದ್ ತನ್ನ ಪತ್ರದಲ್ಲಿ ತಿಳಿಸಿದ್ದಾರೆ. ಕಲ್ಯಾಣ್ ಸಿಂಗ್ ತನ್ನ ಹುದ್ದೆಯ ದುರುಪಯೋಗಪಡಿಸಿರುವ ಕಾರಣ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ದೂರು ನೀಡಲು ರಾಷ್ಟ್ರಪತಿಯವರನ್ನು ಭೇಟಿಯಾಗಲು ಸಮಯ ನೀಡಬೇಕು ಎಂದು ಕಾಂಗ್ರೆಸ್ ಮನವಿ ಮಾಡಿದೆ.

ರಾಜ್ಯಪಾಲರು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ರಾಷ್ಟ್ರಪತಿಗೆ ಪತ್ರ ಬರೆದಿರುವ ಒಂದು ಗಂಭೀರ ವಿಷಯವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಜ್ಯಪಾಲರನ್ನು ಹುದ್ದೆಯಿಂದ ತೆಗೆಯಬಹುದೇ ಎಂಬ ಬಗ್ಗೆ ಪ್ರಧಾನಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News