ಜಯದ ಆರಂಭ ಕಂಡ ಭಾರತ

Update: 2019-04-04 18:58 GMT

ಕೌಲಾಲಂಪುರ, ಎ.4: ಸ್ಟ್ರೈಕರ್ ವಂದನಾ ಕಟಾರಿಯಾ ಬಾರಿಸಿದ ಅವಳಿ ಗೋಲುಗಳ ಬಲದಿಂದ ಭಾರತ ಮಹಿಳಾ ಹಾಕಿ ತಂಡ ಮಲೇಶ್ಯ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಗುರುವಾರ 3-0 ಗೋಲುಗಳ ಜಯ ಸಾಧಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.

ತಂಡದ ಪರ ವಂದನಾ 17 ಹಾಗೂ 60ನೇ ನಿಮಿಷದಲ್ಲಿ ಹಾಗೂ ಲಾಲ್‌ರೆಮ್ಸಿಯಾಮಿ 38ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ಭಾರತ ಸುಲಭ ಜಯ ಗಳಿಸಲು ಕಾರಣವಾದರು.

ಪಂದ್ಯದ ಮೂರನೇ ನಿಮಿಷದಲ್ಲಿಯೇ ಮಲೇಶ್ಯ ತಂಡ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದು ಗೋಲು ಗಳಿಸಲು ಮುಂದಾಯಿತು. ಆದರೆ ಎದುರಾಳಿಯ ಪ್ರಯತ್ನವನ್ನು ಪ್ರವಾಸಿ ತಂಡದ ನಾಯಕಿ ಹಾಗೂ ಗೋಲ್‌ಕೀಪರ್ ಸವಿತಾ ಅದ್ಭುತವಾಗಿ ತಡೆದರು. ಆರಂಭಿಕ ಒತ್ತಡದಿಂದ ಪಾರಾಗಿ ಬಂದ ಭಾರತಕ್ಕೆ ಯುವ ಆಟಗಾರ್ತಿ ಲಾಲ್‌ರೆಮ್ಸಿಯಾಮಿ 5ನೇ ನಿಮಿಷದಲ್ಲಿ ಚೆಂಡನ್ನು ಗೋಲುಪೆಟ್ಟಿಗೆಯೆಡೆಗೆ ಬಾರಿಸಿದರು. ಆದರೆ ಎದುರಾಳಿ ಗೋಲ್‌ಕೀಪರ್ ಕೂಡ ಅದನ್ನು ಯಶಸ್ವಿಯಾಗಿ ತಡೆದರು.

ಎರಡು ನಿಮಿಷದ ನಂತರ ಭಾರತದ ನವನೀತ್ ಕೌರ್‌ಮತ್ತೊಂದು ಅವಕಾಶ ಸೃಷ್ಟಿಸಿಕೊಂಡರೂ ವೈಫಲ್ಯ ಕಾದಿತ್ತು. ಈ ವೇಳೆ ದೊರೆತ ಪೆನಾಲ್ಟಿ ಕಾರ್ನರ್‌ವೊಂದನ್ನೂ ಭಾರತದ ವನಿತೆಯರು ಹಾಳು ಮಾಡಿಕೊಂಡರು. ಗೋಲುರಹಿತ ಪ್ರಥಮ ಕ್ವಾರ್ಟರ್ ಬಳಿಕ 17ನೇ ನಿಮಿಷದಲ್ಲಿ ಭಾರತ ಗೋಲಿನ ಖಾತೆ ತೆರೆಯಿತು. ವಂದನಾ ಸೊಗಸಾದ ಫೀಲ್ಡ್ ಗೋಲು ದಾಖಲಿಸಿದರು.

ಆ ಬಳಿಕ ಭಾರತಕ್ಕೆ ಮಲೇಶ್ಯ ಮೂರು ಪೆನಾಲ್ಟಿ ಅವಕಾಶಗಳನ್ನು ಬಿಟ್ಟುಕೊಟ್ಟರೂ ಎಲ್ಲವೂ ವಿಫಲವಾದವು. 38ನೇ ನಿಮಿಷದಲ್ಲಿ ಲಾಲ್‌ರೆಮ್ಸಿಯಾಮಿ ಮೂಲಕ ಭಾರತ ತನ್ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡಿತು. ಈ ಗೋಲಿನ ಬಳಿಕ ಸುಸ್ಥಿತಿಗೆ ತಲುಪಿದ ಭಾರತ ಅದೇ ಉತ್ಸಾಹದಲ್ಲಿ ವಂದನಾ ಮೂಲಕ ಮತ್ತೊಂದು ಗೋಲು ಪಡೆಯಿತು.

ಸರಣಿಯ ಎರಡನೇ ಪಂದ್ಯ ಶನಿವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News