ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ದಾಳಿ: ಸಿಆರ್‌ಪಿಎಫ್ ಯೋಧ ಬಲಿ

Update: 2019-04-05 17:29 GMT

ರಾಯ್‌ಪುರ, ಎ.5: ಛತ್ತೀಸ್‌ಗಢದ ಧಮ್‌ ತಾರಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಮಾವೋವಾದಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧ ಬಲಿಯಾಗಿದ್ದು ಇನ್ನೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಮೇಡಾ ಗ್ರಾಮದ ಅರಣ್ಯವೊಂದರಲ್ಲಿ ಸಿಆರ್‌ಪಿಎಫ್‌ನ 211ನೇ ಬೆಟಾಲಿಯನ್ ಹಾಗೂ ಜಿಲ್ಲಾ ಪಡೆ ಮಾವೋವಾದಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ, ರಾಯ್‌ಪುರದಿಂದ ಸುಮಾರು 150 ಕಿ.ಮೀ. ದೂರದ ಚಮೇಡಾ ಎಂಬಲ್ಲಿ ಮಾವೋವಾದಿಗಳ ತಂಡವೊಂದು ಏಕಾಏಕಿ ಇವರತ್ತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭದ್ರತಾ ಪಡೆಗಳೂ ಪ್ರತ್ಯುತ್ತರ ನೀಡಿದಾಗ ಮಾವೋವಾದಿಗಳು ಪಲಾಯನ ಮಾಡಿದ್ದಾರೆ.

   ಹೆಚ್ಚುವರಿ ಪಡೆಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದ್ದು ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದಲ್ಲಿ ಕಳೆದ ಎರಡು ದಿನಗಳಲ್ಲಿ ನಡೆಯುತ್ತಿರುವ ಎರಡನೇ ಮಾವೋವಾದಿ ದಾಳಿ ಇದಾಗಿದೆ. ಗುರುವಾರ ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಬಿಎಸ್‌ಎಫ್ ಬೆಟಾಲಿಯನ್ ಮೇಲೆ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News