ಕಾಶ್ಮೀರಿ ಪಂಡಿತರ ವಾಪಸಾತಿ: 2013ರಲ್ಲಿ ಮೋದಿ ಹೇಳಿದ್ದೇನು?, ಸರಕಾರ ಮಾಡಿದ್ದೇನು?

Update: 2019-04-06 12:05 GMT

2013ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆಗಳು ಮತ್ತು ಆ ಆಶ್ವಾಸನೆಗಳ ಸ್ಥಿತಿ-ಗತಿ, ಆಶ್ವಾಸನೆ ಈಡೇರಿಸುವಲ್ಲಿ ಮೋದಿ ನೇತೃತ್ವದ ಸರಕಾರ ಸಫಲವಾಗಿದೆಯೇ ಇಲ್ಲವೇ ಎನ್ನುವ ಬಗ್ಗೆ caravanmagazine.in ‘ಮೋದಿ ಮೀಟರ್’ ಎನ್ನುವ ವರದಿ ಸರಣಿಯನ್ನು ಪ್ರಕಟಿಸಿದೆ.

ಆಶ್ವಾಸನೆ: ಕಾಶ್ಮೀರಿ ಪಂಡಿತರ ವಾಪಸಾತಿಗೆ ಕ್ರಮ

►ಕಾಶ್ಮೀರ ಕಣಿವೆಯಿಂದ 4 ಲಕ್ಷ ಕಾಶ್ಮೀರಿ ಪಂಡಿತರು ಪಲಾಯನಗೈದು 28 ವರ್ಷಗಳಾಗಿವೆ. ಅವರು ಮತ್ತೆ ಕಾಶ್ಮೀರದಲ್ಲಿ ನೆಲೆಸುವಂತಾಗಲು ಸಂವಿಧಾನದ 370ನೇ ವಿಧಿ ರದ್ದುಪಡಿಸುವ ಬಿಜೆಪಿ ಪ್ರಸ್ತಾಪ ಸಹಿತ ವಿವಿಧ  ಪರಿಹಾರ ಸಾಧ್ಯತೆಗಳನ್ನು ಬಿಜೆಪಿ 2013ರಲ್ಲಿ ಪ್ರಸ್ತಾಪಿಸಿತ್ತು. ಆದರೆ ಇವುಗಳಲ್ಲಿ ಹೆಚ್ಚಿನ ಪ್ರಸ್ತಾವಗಳು ಕೇವಲ ಬಾಯಿಮಾತುಗಳಾಗಿದ್ದವಲ್ಲದೆ, ಕಾಶ್ಮೀರಿ ಪಂಡಿತರನ್ನು ಕಾಶ್ಮೀರ ಅಥವಾ ಜಮ್ಮುವಿನಲ್ಲಿ ನೆಲೆಸುವಂತೆ ಮಾಡಲು ತಳ ಮಟ್ಟದಲ್ಲಿ ಹೆಚ್ಚಿನ ಪ್ರಯತ್ನಗಳು ನಡೆದಿರಲಿಲ್ಲ.

►ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ಜಮ್ಮು ಕಾಶ್ಮೀರ ಸರಕಾರ ಯೋಚಿಸಿದೆ ಹಾಗೂ ಅವರಿಗೆ ಪ್ರತ್ಯೇಕ ಅಥವಾ ಸಂಯೋಜಿತ ವಸತಿ ಸೌಲಭ್ಯ ಒದಗಿಸಬೇಕೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ 2015ರಲ್ಲಿ ಹೇಳಿದ್ದರು. ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ವಸತಿ ಸೌಲಭ್ಯಗಳನ್ನು ರಚಿಸುವ ಯಾವುದೇ ಯೋಜನೆಯಿಲ್ಲ ಎಂದು 2017ರಲ್ಲಿ ಕೇಂದ್ರ ಸರಕಾರ ಹೇಳಿತ್ತು.

►ಈತನ್ಮಧ್ಯೆ ಕಾಶ್ಮೀರಿ ಪಂಡಿತರಿಗೆ ಈ ಹಿಂದೆ  ನಿರ್ಮಿಸಲಾಗಿದ್ದ ವಸತಿ ಬಡಾವಣೆಗಳು ಸರಕಾರದ ಸಹಾಯ ದೊರೆಯದೆ ದಯನೀಯ ಸ್ಥಿತಿಯಲ್ಲಿದ್ದವು. ಸರಕಾರದ ಪುನರ್ವಸತಿ ಪ್ರಯತ್ನಗಳು ಕಳಪೆಯಾಗಿತ್ತಲ್ಲದೆ ಜನರನ್ನು  ಅದಾಗಲೇ ಕಿಕ್ಕಿರಿದು ತುಂಬಿದ್ದ ವಾಸಸ್ಥಳಗಳಲ್ಲಿ ಪಟ್ಟಣದ ಇತರ ಭಾಗದಿಂದ ದೂರವಾಗಿ ಇರಿಸಲಾಗಿತ್ತು. ಕಾಶ್ಮೀರಿ ಪಂಡಿತರಿಗೆ ರಾಜ್ಯ ಸರಕಾರಿ ಹುದ್ದೆಗಳನ್ನು ನೀಡಲಾಗಿದ್ದರೂ, ಕೇಂದ್ರ ಸರಕಾರದ ಪ್ಯಾಕೇಜ್ ಮೂಲಕ ಬರುವ ಅವರ ವೇತನ ಪಾವತಿಯನ್ನು ವಿಳಂಬಿಸಲಾಗುತ್ತಿದೆ.

►ಕಾಶ್ಮೀರ ಪಂಡಿತರ ಪುನರ್ವಸತಿಗಾಗಿ ಜಮ್ಮುವಿನಿಂದ ಸುಮಾರು ಇಪ್ಪತ್ತು ಕಿಮೀ ದೂರದಲ್ಲಿ 2011ರಲ್ಲಿ  ನಿರ್ಮಿಸಲಾಗಿರುವ ಜಾಗ್ತಿ ಬಡಾವಣೆಯಲ್ಲಿ ಆರೋಗ್ಯ ಸೇವಾ ಸೌಲಭ್ಯಗಳು ಕಳಪೆಯಾಗಿದ್ದು ಇಲ್ಲಿ ಔಷಧಿಗಳ ಕೊರತೆಯೂ ಇದೆ. ಬಡಾವಣೆಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ ಎಂದು ನಿವಾಸಿಗಳು ತಿಳಿಸುತ್ತಾರೆ.

►ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಮ್ಮು ಕಾಶ್ಮೀರದಲ್ಲಿ  ಪುನರ್ವಸತಿ ಸೌಲಭ್ಯ ನೀಡಲಾಗಿರುವ ಕಾಶ್ಮೀರ ಪಂಡಿತರ ಸಂಖ್ಯೆಯ ಮೇಲೆ ನಿಗಾ ಇರಿಸಿಲ್ಲ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯಿದೆ ಅರ್ಜಿಗೆ ದೊರೆತ ಉತ್ತರ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News