"ಇವಿಎಂ ತಪ್ಪಿಗೆ ಆಸ್ಪದವಿಲ್ಲದ ವ್ಯವಸ್ಥೆಯಲ್ಲ; ವಿಶ್ವದಲ್ಲಿ ಯಾರೂ ಅದನ್ನು ನಂಬುವುದಿಲ್ಲ"

Update: 2019-04-07 03:55 GMT

ಹೊಸದಿಲ್ಲಿ, ಎ.7: ಎಲೆಕ್ಟ್ರಾನಿಕ್ ಮತದಾನ ಯಂತ್ರ ತಪ್ಪಿಗೆ ಆಸ್ಪದವಿಲ್ಲದ ಯಂತ್ರವಲ್ಲ; ವಿಶ್ವದಲ್ಲಿ ಯಾರೂ ಇವಿಎಂ ಮೇಲೆ ವಿಶ್ವಾಸ ಹೊಂದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

1980ರ ದಶಕದಲ್ಲಿ ಭಾರತದ ದೂರಸಂಪರ್ಕ ಕ್ರಾಂತಿಗೆ ಅಡಿಗಲ್ಲು ಹಾಕಿದ ಧೀಮಂತ ಎನಿಸಿಕೊಂಡಿರುವ ಪಿತ್ರೋಡಾ, "ನಾನು ಇವಿಎಂ ಅಧ್ಯಯನ ಮಾಡುವ ಪ್ರಯತ್ನ ಮಾಡಿದ್ದೇನೆ. ಅದರ ವಿನ್ಯಾಸ 15 ವರ್ಷ ಹಳೆಯದು ಹಾಗೂ ಈ ಯಂತ್ರದಲ್ಲಿರಲ್ಲಿರುವ ಮಾಹಿತಿಗಳು ತೀರಾ ಹುರುಳಿಲ್ಲದ್ದು" ಎಂದು ಪ್ರತಿಪಾದಿಸಿದ್ದಾರೆ.

"ಈ ಯಂತ್ರಗಳ ಸಾಗಾಟ ಮತ್ತು ಎಣಿಕೆ ಅವಧಿಯಲ್ಲಿ ಸೋರಿಕೆಗೆ ಅವಕಾಶವಿದೆ" ಎಂದು ಹೇಳಿದರು. ಆದರೆ ಇದರ ದೌರ್ಬಲ್ಯ ಎಲ್ಲಿ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಇದು ಶೇಕಡ 100ರಷ್ಟು ತಪ್ಪಿಗೆ ಅವಕಾಶವಿಲ್ಲದ ಯಂತ್ರ ಎಂದರೆ ನಾನು ಒಪ್ಪಲು ಸಾಧ್ಯವಿಲ್ಲ" ಎಂದು ಮುಂಬೈ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು ಸ್ಪಷ್ಟಪಡಿಸಿದರು.

"ನಾನು ತಂತ್ರದ ಮೇಲೆ ಬೆರಳಿಟ್ಟು, ಇದು ಇಂಥದ್ದೇ ಎಂದು ಹೇಳಲು ಸಾಧ್ಯವಿಲ್ಲ.. ಅದನ್ನು ತಿದ್ದುವ ಸಾಧ್ಯತೆ, ಅದರ ಪೂರೈಕೆ ಸರಣಿ, ಅದನ್ನು ಎಲ್ಲಿ ದಾಸ್ತಾನು ಮಾಡಲಾಗುತ್ತದೆ ಹಾಗೂ ಅದನ್ನು ಹೇಗೆ ಎಣಿಕೆ ಮಾಡಲಾಗುತ್ತದೆ ಎನ್ನುವುದೂ ಪ್ರಮುಖವಾಗುತ್ತದೆ. ನಾವು ಬಳಸುವಂತೆ ಇವಿಎಂಗಳನ್ನು ವಿಶ್ವದ ಎಲ್ಲೂ ಬಳಸುತ್ತಿಲ್ಲ. ಇದರಲ್ಲಿ ವಿಶ್ವಾಸವಿಲ್ಲ ಎಂದು ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಅಮೆರಿಕ, ಜರ್ಮನಿ ಯಾರೂ ಈ ಬಗ್ಗೆ ವಿಶ್ವಾಸ ಹೊಂದಿಲ್ಲ. ಆದರೆ ನಾವು ಮಾತ್ರ ಇದನ್ನು ನಂಬುತ್ತೇವೆ" ಎಂದು ಮತ್ತೊಂದು ಸಮಾರಂಭದಲ್ಲಿ ವಿವರಿಸಿದರು.

ಈ ಬಾರಿಯ ಚುನಾವಣೆ ಆಧುನಿಕ ಭಾರತದ ಇತಿಹಾಸದಲ್ಲೇ ಮಹತ್ವದ ಚುನಾವಣೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News