ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದ ಆರೋಪಪಟ್ಟಿ ಸೋರಿಕೆ: ವರದಿ ಕೇಳಿದ ನ್ಯಾಯಾಲಯ
ಹೊಸದಿಲ್ಲಿ, ಎ.7: ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದದ ಮಧ್ಯವರ್ತಿ ಎನ್ನಲಾದ ಕ್ರಿಸ್ಟಿಯಾನ್ ಮೈಕೆಲ್ ವಿರುದ್ಧದ ಪೂರಕ ಆರೋಪಪಟ್ಟಿಯನ್ನು ಶನಿವಾರ ಕಾನೂನು ಜಾರಿ ನಿರ್ದೇಶನಾಲಯ ಸಲ್ಲಿಸಿದೆ. ಈ ಗುತ್ತಿಗೆ ಪಡೆಯುವ ಸಲುವಾಗಿ ರಾಜಕಾರಣಿಗಳಿಗೆ, ಉನ್ನತ ಅಧಿಖಾರಿಗಳಿಗೆ ಹಾಗೂ ರಕ್ಷಣಾ ಅಧಿಕಾರಿಗಳಿಗೆ ಲಂಚ ನೀಡಿದ್ದಾಗಿ ಮೈಕೆಲ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆದರೆ ಈ ವಿಚಾರವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನವೇ ಆರೋಪಟ್ಟಿಯ ಮಾಹಿತಿಗಳು ಮಾಧ್ಯಮಗಳಿಗೆ ಸೋರಿಕೆಯಾದದ್ದು ಹೇಗೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸಿಬಿಐ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಸೂಚಿಸಿದ್ದಾರೆ. ಎಪ್ರಿಲ್ 11ರ ಒಳಗೆ ವರದಿ ನೀಡುವಂತೆ ಆದೇಶಿಸಿದ್ದಾರೆ.
ಈ ಮಧ್ಯೆ ನ್ಯಾಯಾಲಯ, ಮೈಕೆಲ್ ಅವರ ಪಾಲುದಾರ ಡೇವಿಡ್ ಸಿಮ್ಸ್ ಹಾಗೂ ದುಬೈನ ಗ್ಲೋಬಲ್ ಸರ್ವೀಸಸ್ ಎಫ್‌ಝೆಡ್‌ಇ ಮತ್ತು ಲಂಡನ್‌ನ ಗ್ಲೋಬಲ್ ಟ್ರೇಡ್ ಆ್ಯಂಡ್ ಕಾಮರ್ಸ್ ಲಿಮಿಟೆಡ್ ಸಂಸ್ಥೆಗಳಿಗೆ ಸಮನ್ಸ್ ಜಾರಿಗೊಳಿಸಿದೆ. ಸಿಮ್ಸ್ ಕೂಡಾ ಈ ಪ್ರಕರಣದ ಆರೋಪಿ.
ನ್ಯಾಯಾಲಯ ಪರಿಗಣಿಸುವ ಮುನ್ನವೇ ಆರೋಪಪಟ್ಟಿ ಮಾಧ್ಯಮಗಳಿಗೆ ಅನುಮಾನಾಸ್ಪದವಾಗಿ ಸೋರಿಕೆಯಾಗಿದೆ ಎಂದು ಮೈಕೆಲ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ರಾತ್ರಿ ಆರೋಪಪಟ್ಟಿಯನ್ನು ಪ್ರದರ್ಶಿಸಿದ ರಿಪಬ್ಲಿಕ್ ಟಿವಿ ಚಾನೆಲ್‌ಗೆ ನೋಟಿಸ್ ನೀಡಬೇಕು ಎಂದು ವಿಶೇಷ ಅಭಿಯೋಜಕ ಡಿ.ಪಿ.ಸಿಂಗ್ ಆಗ್ರಹಿಸಿದರು.