×
Ad

ಮುಫ್ತಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಾಗ ನಿಮಗೆ ನಾಚಿಕೆಯಾಗಲಿಲ್ಲವೇ?

Update: 2019-04-07 11:15 IST

ಮುಂಬೈ, ಎ.7: ಶಿವಸೇನೆ ಪ್ರತಿ ವರ್ಷ ದಸರಾ ರ್ಯಾಲಿ ನಡೆಸುವ ದಾದರ್‌ನ ಶಿವಾಜಿಪಾರ್ಕ್‌ನಲ್ಲಿ ಶನಿವಾರ ಗುಡಿ ಪಾಡ್ವ(ಯುಗಾದಿ)ಪ್ರಯುಕ್ತ ರ್ಯಾಲಿ ಆಯೋಜಿಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ತನ್ನ ಒಂದು ಗಂಟೆಗಳ ನಿರರ್ಗಳ ಭಾಷಣದಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘‘ಪುಲ್ವಾಮ ದಾಳಿ ಹೇಗಾಯಿತು? ಆರ್‌ಡಿಎಕ್ಸ್ ಎಲ್ಲಿಂದ ಬಂತು?ಎಂದು ಈಗ ಜನರೇ ಪ್ರಧಾನಿಯನ್ನು ಪ್ರಶ್ನಿಸುತ್ತಿದ್ದಾರೆ. ಯೋಧರು ಕಠಿಣ ಪರಿಸ್ಥಿತಿಯಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ. ಇಂತಹ ವ್ಯಕ್ತಿಗಳು ಅವರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮೆಹಬೂಬಾ ಮುಫ್ತಿ ಅವರೊಂದಿಗೆ ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಸರಕಾರ ರಚನೆ ವೇಳೆ ನಿಮಗೆ ನಾಚಿಕೆಯಾಗಲಿಲ್ಲವೇ? ಎಂದು ರಾಜ್‌ ಠಾಕ್ರೆ ಪ್ರಶ್ನಿಸಿದರು.

 ಆಧಾರ್ ಹಾಗೂ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ವಿವಿಧ ರೀತಿಯ ಹೇಳಿಕೆಯನ್ನು ನೀಡಿರುವ ಕುರಿತಂತೆ ದಿನಪತ್ರಿಕೆಯಲ್ಲಿ ಬಂದಿರುವ ಸುದ್ದಿ, ವಿಡಿಯೋ ಕ್ಲಿಪ್‌ಗಳನ್ನು ಬಳಸಿಕೊಂಡು ಪಿಎಂ ಮೋದಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ ಠಾಕ್ರೆ,‘‘ನೀವು(ಪ್ರಧಾನಿ ಮೋದಿ)ಮನಮೋಹನ್ ಸಿಂಗ್‌ಗೆ ಪಾಕಿಸ್ತಾನಕ್ಕೆ ಪ್ರೇಮಪತ್ರ ಬರೆಯುವುದನ್ನು ನಿಲ್ಲಿಸಿ ಎಂದು ಹೇಳಿದ್ದೀರಿ. ಆದರೆ, ನೀವು ಏಕೆ ಪಾಕ್‌ಗೆ ತೆರಳಿ ಕೇಕ್ ಹಾಗೂ ಬಿರ್ಯಾನಿ ತಿಂದಿದ್ದೀರಿ? ನವಾಝ್ ಶರೀಫ್ ನಿಮಗೆ ಆಹ್ವಾನ ನೀಡಿದ್ದರಾ?ಅಥವಾ ನೀವೇ ಅಲ್ಲಿಗೆ ಹೋಗಿರುವುದಾ?. ಅಮಿತ್ ಶಾ ಹಾಗೂ ನರೇಂದ್ರ ಮೋದಿ ಈ ದೇಶಕ್ಕೆ ಬೆದರಿಕೆಯಾಗಿದ್ದು, ಅವರ ವಿರುದ್ಧ ನಾನು ಹೋರಾಟ ನಡೆಸುವೆ. ಇದರಿಂದ ಕಾಂಗ್ರೆಸ್-ಎನ್‌ಸಿಪಿಗೆ ಲಾಭವಾದರೆ ಆಗಲಿ ಎಂದು ಠಾಕ್ರೆ ಹೇಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿರುವ ರಾಜ್ ಠಾಕ್ರೆ 8ರಿಂದ 10 ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News