ಕೇರಳ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಧೈರ್ಯ ಮೋದಿಗೆ ಇದೆಯೇ: ಶಶಿ ತರೂರ್ ಪ್ರಶ್ನೆ

Update: 2019-04-07 15:45 GMT

ಹೊಸದಿಲ್ಲಿ,ಎ.7:  ಕೇರಳದ ವಯನಾಡಿನಿಂದ ಸ್ಪರ್ಧಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ನಿರ್ಧಾರವು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎರಡರಲ್ಲೂ ಗೆಲ್ಲುವ ಅವರ ಆತ್ಮವಿಶ್ವಾಸವನ್ನು ತೋರಿಸುತ್ತದೆ ಎಂದು ರವಿವಾರ ಹೇಳಿದ ಹಿರಿಯ ಕಾಂಗ್ರೆಸ ನಾಯಕ ಶಶಿ ತರೂರ್ ಅವರು,ಕೇರಳ ಅಥವಾ ತಮಿಳುನಾಡಿನಿಂದ ಚುನಾವಣೆಗೆ ಸ್ಪರ್ಧಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆಯೇ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಗೆ ರಾಹುಲ್ ವಯನಾಡಿನಿಂದ ಸ್ಪರ್ಧಿಸುತ್ತಿರುವುದರಿಂದ ಮುಂದಿನ ಪ್ರಧಾನಿ ಈ ಪ್ರದೇಶದಿಂದ ಆಯ್ಕೆಯಾಗಬಹುದು ಎಂಬ ಸಂಭ್ರಮ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮನೆಮಾಡಿದೆ ಎಂದು ತಿರುವನಂತಪುರದಿಂದ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತರೂರ್ ಹೇಳಿದರು.

ಬಹುಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಿಂದ 'ಓಡಿ ಹೋಗಲು' ರಾಹುಲ್ ವಯನಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಟೀಕೆಗಾಗಿ ಮೋದಿ ಮತ್ತು ಬಿಜೆಪಿಯನ್ನು ತರಾಟೆಗೆತ್ತಿಕೊಂಡ ಅವರು,ಆಡಳಿತ ಪಕ್ಷವು ಧರ್ಮಾಂಧತೆಯ ಪ್ರತಿಪಾದನೆಯಲ್ಲಿ ತೊಡಗಿದೆ. ಪ್ರಧಾನಿಯವರೇ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಹತಾಶೆಯನ್ನು ಮೂಡಿಸಿದೆ ಎಂದರು.

ಮಹಾರಾಷ್ಟ್ರದ ವಾರ್ಧಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಂದರ್ಭ ಮೋದಿ,ಬಹುಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ತನ್ನ ನಾಯಕರನ್ನು ಸ್ಪರ್ಧೆಗಿಳಿಸಲು ಪ್ರತಿಪಕ್ಷವು ಹೆದರಿಕೊಂಡಿದೆ ಎಂದು ಹೇಳಿದ್ದರು.

  ಬಿಜೆಪಿ ನೇತೃತ್ವದ ಕೇಂದ್ರದ ಆಡಳಿತದಲ್ಲಿ ಹಲವಾರು ವಿಷಯಗಳಲ್ಲಿ ದಕ್ಷಿಣದ ರಾಜ್ಯಗಳು ಮತ್ತು ಒಕ್ಕೂಟ ಸರಕಾರದ ನಡುವಿನ ಸಂಬಂಧಗಳು ಹದಗೆಟ್ಟಿವೆ ಎಂದು ಆರೋಪಿಸಿದ ತರೂರ್,ಇಂತಹ ಸಂದರ್ಭದಲ್ಲಿ ದೇಶದೊಳಗೆ ಹೆಚ್ಚುತ್ತಿರುವ ಉತ್ತರ-ದಕ್ಷಿಣ ಬಿರುಕನ್ನು ನಿವಾರಿಸಲು ತಾನು ಸೇತುವೆಯಾಗಬಲ್ಲೆ ಎಂಬ ದಿಟ್ಟ ಹೇಳಿಕೆಯನ್ನು ರಾಹುಲ್ ನೀಡಿದ್ದಾರೆ. ಇದು ಉತ್ತರ ಮತ್ತು ದಕ್ಷಿಣ ಭಾರತಗಳೆರಡಲ್ಲೂ ಗೆಲ್ಲುವ ಅವರ ವಿಶ್ವಾಸವನ್ನು ಸೂಚಿಸುತ್ತಿದೆ ಎಂದರು.

ಸ್ವತಃ ತರೂರ್ ಅವರು ಸತತ ಮೂರನೇ ಬಾರಿಗೆ ಪುನರಾಯ್ಕೆಯನ್ನು ಕೋರಿ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News