ಐಪಿಎಲ್: ಬೆಂಗಳೂರಿಗೆ ಬೆಂಬಿಡದ ಸೋಲು: ಗೆಲುವಿನ ನಗೆ ಬೀರಿದ ಡೆಲ್ಲಿ
ಬೆಂಗಳೂರು, ಎ.7: ಕಾಗಿಸೊ ರಬಾಡ, ಕ್ರಿಸ್ ಮೊರಿಸ್ ಅಮೋಘ ಬೌಲಿಂಗ್ ಹಾಗೂ ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡಿದ ನಾಯಕ ಶ್ರೇಯಸ್ ಅಯ್ಯರ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್‌ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.
ಕೊಹ್ಲಿ ಪಡೆ ಈಗ ನಡೆಯುತ್ತಿರುವ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 6ನೇ ಸೋಲು ಕಂಡಿದೆ. ಟಾಸ್ ಜಯಿಸಿದ ಡೆಲ್ಲಿ ತಂಡ ಆರ್‌ಸಿಬಿಯನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ರಬಾಡ(4-21) ಹಾಗೂ ಮೊರಿಸ್(2-28) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಶಕ್ತವಾಯಿತು.
ಗೆಲ್ಲಲು 150 ರನ್ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ಶ್ರೇಯಸ್ ಅಯ್ಯರ್ ಸಮಯೋಚಿತ ಬ್ಯಾಟಿಂಗ್(67, 50 ಎಸೆತ, 8 ಬೌಂಡರಿ, 2 ಸಿಕ್ಸರ್)ಸಹಾಯದಿಂದ 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ತವರು ಮೈದಾನದಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಆರ್‌ಸಿಬಿ ಸೋಲಿನ ಕೂಪದಿಂದ ಹೊರಬರಲು ವಿಫಲವಾಯಿತು.
ಡೆಲ್ಲಿ ತಂಡ ಇನಿಂಗ್ಸ್‌ನ 3ನೇ ಎಸೆತದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್(0) ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಪೃಥ್ವಿ ಶಾ(28) ಹಾಗೂ ನಾಯಕ ಅಯ್ಯರ್ ಎರಡನೇ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದರು. ಶಾ ಔಟಾದ ಬಳಿಕ ಒತ್ತಡಕ್ಕೆ ಸಿಲುಕಿದ ಅಯ್ಯರ್ ಅವರು ಇನ್‌ಗ್ರಾಮ್(22) ಹಾಗೂ ರಿಷಭ್ ಪಂತ್(18) ಅವರೊಂದಿಗೆ ಕ್ರಮವಾಗಿ 3 ಹಾಗೂ 4ನೇ ವಿಕೆಟ್ ಜೊತೆಯಾಟದಲ್ಲಿ 39 ಹಾಗೂ 37 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಸರ್ವಾಧಿಕ ಸ್ಕೋರ್(41,33 ಎಸೆತ, 1 ಬೌಂಡರಿ, 2 ಸಿಕ್ಸರ್)ಗಳಿಸಿದರು. ಆಲ್‌ರೌಂಡರ್ ಮೊಯಿನ್ ಅಲಿ(32), ಆದಿತ್ಯನಾಥ್(19), ಡಿವಿಲಿಯರ್ಸ್(17) ಹಾಗೂ ಸ್ಟೋನಿಸ್(15)ಎರಡಂಕೆಯ ಸ್ಕೋರ್ ಗಳಿಸಿದರು.
ಆರ್‌ಸಿಬಿಯನ್ನು ಅದರದೇ ನೆಲದಲ್ಲಿ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ವೇಗದ ಬೌಲರ್ ರಬಾಡ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.