ಶೇ.50 ವಿವಿಪ್ಯಾಟ್ ಸ್ಲಿಪ್ ಎಣಿಕೆ ಆಗಲಿ: ವಿಪಕ್ಷಗಳ ಒತ್ತಾಯ

Update: 2019-04-07 16:06 GMT

ಹೊಸದಿಲ್ಲಿ, ಎ.7: ಇವಿಎಂಗಳ ಶೇ.50ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಸುವುದರಿಂದ ಫಲಿತಾಂಶ ಘೋಷಣೆ ವಿಳಂಬವಾದರೂ, ಇದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಸ್ಪರ್ಧೆಯ ಪಾವಿತ್ರ್ಯವನ್ನು ಖಾತರಿಗೊಳಿಸಿದಂತಾಗುತ್ತದೆ ಎಂದು ವಿಪಕ್ಷಗಳು ಸುಪ್ರೀಂಕೋರ್ಟ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿವೆ. ಶೇ.50 ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆಯಿಂದ ಫಲಿತಾಂಶ ಘೋಷಣೆಯಲ್ಲಿ ಸರಾಸರಿ ಆರು ದಿನ ವಿಳಂಬವಾಗಲಿದೆ ಎಂದು ಚುನಾವಣಾ ಆಯೋಗ ಶನಿವಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷಗಳು, ಚುನಾವಣಾ ಪ್ರಕ್ರಿಯೆಯ ಪೂರ್ಣತೆಗೆ ಪೂರಕವಾಗುವುದಾದರೆ ಆರು ದಿನಗಳ ವಿಳಂಬ ಗಂಭೀರ ಪರಿಣಾಮ ಬೀರದು. ಚುನಾವಣೆ ಕೆಲಸ ಸಿಬ್ಬಂದಿಗಳನ್ನು ಹೆಚ್ಚಿಸಿದರೆ ಆ ಈ ವಿಳಂಬವನ್ನು ತಪ್ಪಿಸಬಹುದು. ಸಿಬ್ಬಂದಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದರೆ ಎರಡು ಅಥವಾ ಎರಡೂವರೆ ದಿನದ ವಿಳಂಬವಾಗಬಹುದು. 21 ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ, ದೇಶದ ಸುಮಾರು ಶೇ.70ರಿಂದ 75ರಷ್ಟು ಚುನಾವಣಾ ಪ್ರತಿನಿಧಿ ಪಕ್ಷಗಳ ಮುಖಂಡರು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸಲ್ಲಿಸಿರುವ ಅರ್ಜಿಯಿದು ಎಂದು ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ವಿಪಕ್ಷಗಳು ಸುಪ್ರೀಂಕೋರ್ಟ್‌ಗೆ ತಿಳಿಸಿವೆ.

   ನಾಯ್ಡು ಅವರಲ್ಲದೆ ಕೆಸಿ ವೇಣುಗೋಪಾಲ್, ಅರವಿಂದ್ ಕೇಜ್ರೀವಾಲ್, ಅಖಿಲೇಶ್ ಯಾದವ್, ಶರದ್ ಪವಾರ್, ಡೆರಿಕ್ ಒ’ಬ್ರಿಯಾನ್, ಫಾರೂಕ್ ಅಬ್ದುಲ್ಲಾ, ಶರದ್ ಯಾದವ್, ಅಜಿತ್ ಸಿಂಗ್, ಮನೋಜ್ ಝಾ ಅರ್ಜಿ ಸಲ್ಲಿಸಿದ ಪ್ರಮುಖರು. ಚುನಾವಣಾ ಆಯೋಗದ ಪರವಾಗಿ ‘ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್’(ಐಎಸ್‌ಐ) ನಡೆಸಿರುವ ಅಧ್ಯಯನದ ಬಗ್ಗೆ ವಿಪಕ್ಷ ಮುಖಂಡರು ಅತೃಪ್ತಿ ಸೂಚಿಸಿದ್ದಾರೆ.

   ಮತದಾನಕ್ಕೆ ಬಳಸಲಾಗುವ ಒಟ್ಟು 13.5 ಲಕ್ಷ ಇವಿಎಂ(ವಿದ್ಯುನ್ಮಾನ ಮತಯಂತ್ರ)ಗಳಲ್ಲಿ ಆಯ್ಕೆ ಮಾಡಲಾದ 479 ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಿದ ಫಲಿತಾಂಶ ಶೇ.99.99ರಷ್ಟು ನಿಖರವಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಆದರೆ ಈ ಅಧ್ಯಯನದಲ್ಲಿ ಮೂಲಭೂತವಾಗಿ ತಪ್ಪಿದೆ. 543 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಎಂಬ ದೋಷಪೂರಿತ ಊಹೆಯನ್ನಾಧರಿಸಿ ಈ ಅಧ್ಯಯನ ನಡೆಸಲಾಗಿದೆ.

ಇಡೀ ರಾಷ್ಟ್ರವನ್ನೇ ಒಂದು ಘಟಕ ಎಂದು ಪರಿಗಣಿಸಬಾರದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರವನ್ನೂ ಪ್ರತ್ಯೇಕ ಘಟಕವೆಂದು ಪರಿಗಣಿಸಬೇಕು ಎಂದು ವಿಪಕ್ಷಗಳು ಸುಪ್ರೀಂಕೋರ್ಟ್‌ಗೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News