ಹಿಂದು ವಿರೋಧಿ ಹೇಳಿಕೆ ಆರೋಪ: ಊರ್ಮಿಳಾ ಮಾತೋಂಡ್ಕರ್ ವಿರುದ್ಧ ದೂರು

Update: 2019-04-07 15:37 GMT

ಮುಂಬೈ,ಎ.7: ಬಾಲಿವುಡ್ ನಟಿ ಹಾಗೂ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಅವರು ಹಿಂದು ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತ ಸುರೇಶ ನಖುವಾ ಎನ್ನುವವರು ಶನಿವಾರ ಇಲ್ಲಿಯ ಪೊವಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಳ್ಳು ಆರೋಪದ ಹೇಳಿಕೆಗಳನ್ನು ನೀಡುವಂತೆ ಮಾತೋಂಡ್ಕರ್‌ಗೆ ನಿರ್ದೇಶಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾತೋಂಡ್ಕರ್ ತನ್ನ ಸುದ್ದಿವಾಹಿನಿಯಲ್ಲಿ ಈ ಹೇಳಿಕೆಗಳನ್ನು ನೀಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ಮತ್ತು ಅವುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರ ವಿರುದ್ಧವೂ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಖುವಾ ತನ್ನ ದೂರಿನಲ್ಲಿ ಕೋರಿದ್ದಾರೆ.

ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತೋಂಡ್ಕರ್ 'ತನ್ನ ಸಹಿಷ್ಣುತೆಗಾಗಿ ಹೆಸರಾಗಿದ್ದ ಹಿಂದು ಧರ್ಮವು ಈಗ ವಿಶ್ವದಲ್ಲಿಯೇ ಅತ್ಯಂತ ಹಿಂಸಾತ್ಮಕವಾಗಿದೆ 'ಎಂದು ಹೇಳಿದ್ದಾರೆ ಎಂದು ನಖುವಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ದೂರನ್ನು ನಾವು ಸ್ವೀಕರಿಸಿದ್ದೇವೆ. ಕಾನೂನು ಅಭಿಪ್ರಾಯ ಪಡೆದುಕೊಂಡು ಮುಂದಿನ ಕ್ರಮವನ್ನು ಜರುಗಿಸುತ್ತೇವೆ ಎಂದು ಪೊವಾಯಿ ಪೊಲೀಸ್ ಠಾಣೆಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಮಾತೋಂಡ್ಕರ್ ಅವರ ಹೇಳಿಕೆಗಳು ಸುಳ್ಳು,ಕುಚೇಷ್ಟೆ ಮತ್ತು ಕುತಂತ್ರದಿಂದ ಕೂಡಿದ್ದು,ಜುಜುಬಿಯಾಗಿವೆ ಎಂದು ಹೇಳಿರುವ ನಖುವಾ,ಜನರ ನಡುವಿನ ಸೌಹಾರ್ದವನ್ನು ಕೆಡಿಸುವ ಮತ್ತು ಜಾಗತಿಕ ಮಟ್ಟದಲ್ಲಿ ದೇಶವನ್ನು ಕಳಂಕಿತಗೊಳಿಸುವ ಉದ್ದೇಶದಿಂದ ಕೂಡಿವೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News