×
Ad

ಜಮ್ಮು-ಕಾಶ್ಮೀರದಲ್ಲಿ ಹೆದ್ದಾರಿ ಪ್ರಯಾಣ ನಿಷೇಧ: ಸಂಕಷ್ಟದಲ್ಲಿ ಜನರು

Update: 2019-04-07 21:13 IST

 ಶ್ರೀನಗರ,ಎ.7: ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿರುವ ಭಾರೀ ಸಂಖ್ಯೆಯ ಭದ್ರತಾ ಪಡೆಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪ್ರತಿ ರವಿವಾರ ಮತ್ತು ಬುಧವಾರಗಳಂದು ಜಮ್ಮು-ಶ್ರೀನಗರ-ಬಾರಾಮುಲ್ಲ್ಲಾ ಹೆದ್ದಾರಿಯಲ್ಲಿ ಉಧಮಪುರದಿಂದ ಬಾರಾಮುಲ್ಲಾದವರೆಗೆ ನಾಗರಿಕ ವಾಹನಗಳ ಸಂಚಾರವನ್ನು ನಿಷೇಧಿಸಿ ಸರಕಾರವು ಆದೇಶಿಸಿದ್ದು,ರವಿವಾರದಿಂದಲೇ ಈ ಆದೇಶವು ಜಾರಿಗೊಂಡಿದೆ.

ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು,ಕಟ್ಟುನಿಟ್ಟಾಗಿ ನಿಷೇಧವನ್ನು ಜಾರಿಗೊಳಿಸಲು ಭಾರೀ ಸಂಖ್ಯೆಯಲ್ಲಿ ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಂಚಾರ ನಿಷೇಧದಿಂದಾಗಿ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರೀನಗರದ ನಿವಾಸಿ ಗುಲಾಂ ಮುಹಮ್ಮದ್ ಭಟ್ ಅವರ ಪುತ್ರಿಯನ್ನು ಬೆಮಿನಾದ ಜೆವಿಸಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ್ದರಿಂದ ಅವರು ಒಂದೂ ಕಾಲು ಗಂಟೆ ನಡೆದೇ ಆಸ್ಪತ್ರೆಗೆ ಹೋಗುವಂತಾಯಿತು.

ಪ್ರತಿ ಕೂಡುರಸ್ತೆಯಲ್ಲಿಯೂ ಜನರು ತಮ್ಮನ್ನು ಹೆದ್ದಾರಿಯ ಇನ್ನೊಂದು ಪಕ್ಕಕ್ಕೆ ತೆರಳಲು ಅವಕಾಶ ನೀಡುವಂತೆ ಭದ್ರತಾ ಪಡೆಗಳನ್ನು ಕೇಳಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುತ್ತಿದ್ದ ವಾಹನಗಳು ಮುಂದೆ ಸಾಗಲಾಗದೆ ಅತಂತ್ರವಾಗಿದ್ದವು. ಮುಂದಿನ ತಿಂಗಳು ನಡೆಯಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟ್ಯೂಷನ್‌ಗಾಗಿ ತಮ್ಮ ಮಕ್ಕಳನ್ನ್ನು ಕರೆದೊಯ್ಯುತ್ತಿದ್ದ ಪೋಷಕರಿಗೂ ತಲುಪಲು ಸಾಧ್ಯವಾಗಲಿಲ್ಲ.

ಜವಾಹರ ಸುರಂಗದ ಇನ್ನೊಂದು ಬದಿಯಲ್ಲಿರುವ ದೋಡಾ ಜಿಲ್ಲೆಯ ವಧುವನ್ನು ವಿವಾಹವಾಗಿರುವ ಅನಂತನಾಗ್ ಜಿಲ್ಲೆಯ ವರನೋರ್ವ ತನ್ನ ದಿಬ್ಬಣವನ್ನು ಅಲ್ಲಿಗೆ ಕರೆದೊಯ್ಯಲು ಸಂಬಂಧಿತ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕಾಗಿತ್ತು. ಅವರ ವಾಹನವನ್ನು ಸಂಪೂರ್ಣ ತಪಾಸಣೆಗಳಪಡಿಸಿದ ಬಳಿಕವಷ್ಟೇ ಮುಂದಕ್ಕೆ ಚಲಿಸಲು ಅವಕಾಶ ನೀಡಲಾಯಿತು.

ನಿಷೇಧವನ್ನು ರಾಜಕಾರಣಿಗಳು ಕಟುವಾಗಿ ಟೀಕಿಸಿದ್ದಾರೆ. ಇದೊಂದು ವಿವೇಚನಾಹೀನ ಕ್ರಮವೆಂದು ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಟ್ವೀಟಿಸಿದ್ದಾರೆ.

 ಕಾಶ್ಮೀರವನ್ನು ಬಯಲು ಕಾರಾಗೃಹವನ್ನಾಗಿ ಪರಿವರ್ತಿಸಲು ತನ್ನ ಪಕ್ಷವು ಅವಕಾಶ ನೀಡುವುದಿಲ್ಲ ಎಂದಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರು,''ಇದು ಕಾಶ್ಮೀರ,ಫೆಲೆಸ್ತೀನ್ ಅಲ್ಲ. ನಮ್ಮ ಪ್ರೀತಿಯ ನೆಲವನ್ನು ಬಯಲು ಕಾರಾಗೃಹವನ್ನಾಗಿಸಲು ನಾವು ಬಿಡುವುದಿಲ್ಲ. ನಾವು ನಮ್ಮ ರಕ್ತದಿಂದ ಪೋಷಿಸಿರುವ ಈ ಕಾಶ್ಮೀರವು ನಮ್ಮದು '' ಎಂದು ಟ್ವೀಟಿಸಿದ್ದರೆ,ಹೆದ್ದಾರಿ ನಿಷೇಧವು ಮಾನವೀಯ ವಿಪತ್ತು ಆಗಿ ಬದಲಾಗುತ್ತಿದೆ ಎಂದು ಪೀಪಲ್ಸ್ ಕಾನಫರೆನ್ಸ್ ಅಧ್ಯಕ್ಷ ಸಜ್ಜಾದ್ ಲೋನೆ ಹೇಳಿದ್ದಾರೆ.

ಮಾಜಿ ಶಾಸಕ ಮುಹಮ್ಮದ್ ಅಷ್ರಫ್ ಮೀರ್ ಅವರ ನೇತೃತ್ವದಲ್ಲಿ ಹಲವಾರು ಪಿಡಿಪಿ ನಾಯಕರು ಹೆದ್ದಾರಿಯಲ್ಲಿ ಸಂಚರಿಸುವ ಮೂಲಕ ನಿಷೇಧವನ್ನು ಉಲ್ಲಂಘಿಸಲು ಪ್ರಯತ್ನಿಸಿದರಾದರೂ ಅಥ್ವಾಜಾನ್ ಕ್ರಾಸಿಂಗ್‌ನಲ್ಲಿ ಪೊಲೀಸರು ಅದನ್ನು ವಿಫಲಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News