‘ಅಬ್ ಹೋಗಾ ನ್ಯಾಯ್’: ಕಾಂಗ್ರೆಸ್ ಪ್ರಚಾರ ಘೋಷಣೆಗೆ ಚಾಲನೆ
ಹೊಸದಿಲ್ಲಿ, ಎ.7: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ‘ಅಬ್ ಹೋಗಾ ನ್ಯಾಯ್’ (ಈಗ ನ್ಯಾಯ ದೊರೆಯಲಿದೆ) ಎಂಬ ಪ್ರಚಾರ ಘೋಷಣಾ ಪದವನ್ನು ರವಿವಾರ ಹೊಸದಿಲ್ಲಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಇಂದು ದೇಶವೇ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡುತ್ತಿದೆ. ಯುವಕರು ಉದ್ಯೋಗವನ್ನು, ದೇಶದ ಮಹಿಳೆಯರು ಭದ್ರತೆಯನ್ನು, ರೈತರು ತಮ್ಮ ಬೆಳೆಗಳಿಗೆ ನ್ಯಾಯೋಚಿತ ದರವನ್ನು ಆಗ್ರಹಿಸುತ್ತಿದ್ದಾರೆ. ಉದ್ಯೋಗ, ದರ, ಗೌರವ ಮತ್ತು ನ್ಯಾಯ -ಇವು ಭಾರತದ ಹಕ್ಕೊತ್ತಾಯವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಸಿಂಗ್ ಹೇಳಿದರು.
ಕಳೆದ ಐದು ವರ್ಷದ ವೈಫಲ್ಯದ ಬಗ್ಗೆ ಸರಕಾರ ಇನ್ನೂ ಉತ್ತರಿಸಿಲ್ಲ. ಈಗಲೂ ಪ್ರಧಾನಿ ಮೋದಿ ಚುನಾವಣಾ ರ್ಯಾಲಿಯಲ್ಲಿ , ಸುಳ್ಳು ಭರವಸೆ ನೀಡುವುದರಲ್ಲಿ ಮತ್ತು ವಿಪಕ್ಷಗಳನ್ನು ಲೇವಡಿ ಮಾಡುವುದರಲ್ಲಿ ಮಗ್ನವಾಗಿದ್ದಾರೆ ಎಂದ ಅವರು, ಪಕ್ಷದ ಘೋಷಣಾ ವಾಕ್ಯ ಕೇವಲ ಕನಿಷ್ಟ ಆದಾಯ ಖಾತರಿ ಯೋಜನೆಗೆ ಸೀಮಿತವಾಗಿಲ್ಲ, ಸಮಾಜದ ಎಲ್ಲಾ ವರ್ಗದವರಿಗೆ ನ್ಯಾಯವನ್ನು ಒಳಗೊಂಡಿದೆ ಎಂದು ಹೇಳಿದರು.
ಅಬ್‌ಹೋಗಾ ನ್ಯಾಯ್ ಪ್ರಚಾರ ಅಭಿಯಾನದ ಗೀತೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಗೀತೆಯ ಸಾಹಿತ್ಯವನ್ನು ಜಾವೇದ್ ಅಖ್ತರ್ ರಚಿಸಿದ್ದು, ಈ ಹಾಡಿನ ವೀಡಿಯೊವನ್ನು ನಿಖಿಲ್ ಅಡ್ವಾಣಿ ಚಿತ್ರಿಸಿದ್ದಾರೆ ಎಂದು ಆನಂದ್ ಶರ್ಮ ಹೇಳಿದರು. ಪ್ರಚಾರ ಅಭಿಯಾನದ ಕೆಲವು ಸಾಲುಗಳ ಬಗ್ಗೆ ಚುನಾವಣಾ ಆಯೋಗ ಶನಿವಾರ ಆಕ್ಷೇಪ ಸೂಚಿಸಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
‘ಸುಳ್ಳು ಭರವಸೆ ನೀಡಿದ ಬಳಿಕ, ನಗರಗಳ ಹೆಸರು ಬದಲಿಸಿದ ಬಳಿಕ, ಕರೆನ್ಸಿ ನೋಟುಗಳನ್ನು ರದ್ದಿಗೆಸೆದ ಬಳಿಕ, ಪ್ರತಿಯೊಬ್ಬ ಬಡ ವ್ಯಕ್ತಿಗೂ ಮೋಸ ಮಾಡಿದ ಬಳಿಕ, ದ್ವೇಷದ ಹೊಗೆ ಹಬ್ಬಿಸಿ, ಸಹೋದರರನ್ನು ಪರಸ್ಪರ ಎತ್ತಿಕಟ್ಟಿ ನೀವು ಈಗ ಹೇಳುತ್ತಿದ್ದೀರಿ- ನನ್ನನ್ನು ಚುನಾಯಿಸಿ ಎಂದು. ಆದರೆ ನೀವು ನಮ್ಮ ಮಾತನ್ನೂ ಕೇಳಬೇಕು ’ ಎಂಬ ಸಾಲುಗಳ ಬಗ್ಗೆ ಆಯೋಗ ಆಕ್ಷೇಪ ಸೂಚಿಸಿದೆ . ಆದರೆ ಇದರಲ್ಲಿ ಆಕ್ಷೇಪಾರ್ಹವಾದುದು ಏನು ಎಂದು ತಿಳಿಯುತ್ತಿಲ್ಲ. ಈ ಆಕ್ಷೇಪ ಸೂಕ್ತವಲ್ಲ ಎಂದು ಆಯೋಗಕ್ಕೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.