ಕಾಂಗ್ರೆಸ್ ಚುನಾವಣಾ ಹಾಡು: ಮೋದಿಯನ್ನು ಟೀಕಿಸಿದ ಸಾಲುಗಳಿಗೆ ಚು. ಆಯೋಗ ಆಕ್ಷೇಪ

Update: 2019-04-07 16:15 GMT

ಹೊಸದಿಲ್ಲಿ, ಎ.7: ಚುನಾವಣಾ ಅಭಿಯಾನದ ವೇಳೆ ಬಳಸಲಿರುವ ಹಾಡೊಂದರ ಸಾಹಿತ್ಯಕ್ಕೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಆಯೋಗದ ವಿರುದ್ಧ ಟೀಕಾಪ್ರಹಾರ ಮಾಡಿದೆ.

ಹಾಡಿನ ಆಕ್ಷೇಪದಾಯಕ ಸಾಹಿತ್ಯದ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಸಲ್ಮಾನ್ ಅನೀಸ್, ಆ ಸಾಲುಗಳು ಸ್ಪಷ್ಟವಾಗಿ ಮೋದಿ ಮತ್ತು ಬಿಜೆಪಿಯನ್ನು ಗುರಿ ಮಾಡಿ ಬರೆಯಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

“ನೀನು ಕಪಟ ನಾಟಕಗಳನ್ನಾಡಿ, ನಗರದ ಹೆಸರುಗಳನ್ನು ಬದಲಿಸಿ, ನೋಟುಗಳನ್ನು ರದ್ದಿ ಮಾಡಿ, ಪ್ರತಿ ಬಡವನನ್ನೂ ವಂಚಿಸಿ, ದ್ವೇಷದ ಹೊಗೆ ಹರಡಿ, ಸಹೋದರರು ಪರಸ್ಪರ ಹೊಡೆದಾಡುವಂತೆ ಮಾಡಿ, ಹೇಳುತ್ತಿದ್ದೀಯಾ ನಮ್ಮನ್ನು ಆಯ್ಕೆ ಮಾಡಿ ಎಂದು, ಈಗ ನೀವು ನಮ್ಮ ಮಾತನ್ನು ಕೇಳಿ” ಎಂಬ ಸಾಲುಗಳ ಬಗ್ಗೆ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಈ ಆಕ್ಷೇಪಿತ ಸಾಲುಗಳನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ಸೂಚಿಸಿದೆ.

ಹಾಡು ಬಿಡುಗಡೆ ಮಾಡಲು ಕೇವಲ ಒಂದು ದಿನ ಬಾಕಿಯಿರುವಾಗಿ ಈ ಸೂಚನೆ ಬಂದಿರುವ ಕಾರಣ ಕಾಂಗ್ರೆಸ್ ಬಳಿ ಈ ಸಾಲುಗಳನ್ನು ತೆಗೆಯುವುದರ ಹೊರತು ಬೇರೆ ಆಯ್ಕೆಯಿಲ್ಲದಂತಾಗಿದೆ. ಒಂದೆಡೆ ತಮ್ಮ ಪಕ್ಷದ ಹಾಡಿಗೆ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದರೆ ಬಿಜೆಪಿಯ ವಿಷಯದಲ್ಲಿ ಈ ಮಾನದಂಡವನ್ನು ಅನುಸರಿಸುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಚುನಾವಣಾ ಅಭಿಯಾನದ ಮಧ್ಯೆಯೇ ನಮೋ ಟಿವಿಗೆ ಚಾಲನೆ ನೀಡಿರುವುದರ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಬಗ್ಗೆ ಆಯೋಗ ಪ್ರಸಾರ ಸಚಿವಾಲಯದಿಂದ ಪ್ರತಿಕ್ರಿಯೆ ಕೇಳಿತ್ತು. ನಮೋ ಟಿವಿಯನ್ನು ಡಿಟಿಎಚ್ ಸೇವಾದಾರರು ಆರಂಭಿಸಿರುವ ಕಾರಣ ಅದಕ್ಕೆ ಸರಕಾರದ ಅನುಮತಿಯ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿತ್ತು.

ಸರಕಾರಿ ವಾಹಿನಿ ದೂರದರ್ಶನದಲ್ಲಿ ಮೋದಿಯ ಚುನಾವಣಾ ಭಾಷಣಗಳ ನೇರ ಪ್ರಸಾರ ಮಾಡುವುದರ ವಿರುದ್ಧವೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಜೊತೆಗೆ ಮೋದಿ ಕುರಿತ ಪಿಎಂ ನರೇಂದ್ರ ಮೋದಿ ಸಿನೆಮಾದ ಬಿಡುಗಡೆ ಬಗ್ಗೆಯೂ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಸದ್ಯ ಈ ಸಿನೆಮಾದ ಬಿಡುಗಡೆಯನ್ನು ಎಪ್ರಿಲ್ 5ರಿಂದ ಎಪ್ರಿಲ್ 11ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News