ಗ್ಯಾಸ್‌ಪೈಪ್ ಲೈನ್ ಕಾಮಗಾರಿಯಲ್ಲಿ ರಿಲಯನ್ಸ್‌ಗೆ 7,615 ಕೋ ರೂ. ಅಕ್ರಮ ಪಾವತಿ: ಡಚ್ ತನಿಖಾ ತಂಡದ ಆರೋಪ

Update: 2019-04-07 17:31 GMT

ಹೊಸದಿಲ್ಲಿ, ಎ.7: ಡಚ್ ಪೈಪ್‌ಲೈನ್ ಸಂಸ್ಥೆ ಎ ಹಾಕ್ ಎನ್‌ಎಲ್‌ನ ಲಾಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಸಹಸಂಸ್ಥೆಯೊಂದು 7,615 ಕೋಟಿ ರೂ. ಪಾಲು ಪಡೆದಿದೆ ಎಂಬ ವರದಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಸಂಸ್ಥೆ ನಿರಾಕರಿಸಿದೆ.

ಎ ಹಾಕ್ ಎನ್‌ಎಲ್ ಗಳಿಸಿದ ಲಾಭದಲ್ಲಿ ಸುಮಾರು 7,615 ಕೋಟಿ ರೂ. ಮೊತ್ತ ಸಿಂಗಾಪುರ ಮೂಲದ ಬಯೊಮೆಟ್ರಿಕ್ಸ್ ಮಾರ್ಕೆಟಿಂಗ್ ಲಿ. ಸಂಸ್ಥೆಗೆ ಸಂದಿದ್ದು ಈ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸಂಬಂಧಿಸಿದ ಸಂಸ್ಥೆಯಾಗಿದೆ ಎಂದು ಹಾಲಂಡ್‌ನ ತನಿಖೆಗಾರರು ಆರೋಪಿಸಿದ್ದಾರೆ. ಈಗ ಈಸ್ಟ್ ವೆಸ್ಟ್ ಪೈಪ್‌ಲೈನ್ ಲಿ. ಎಂದು ಕರೆಯಲ್ಪಡುವ ‘ರಿಲಯನ್ಸ್ ಗ್ಯಾಸ್ ಟ್ರಾನ್ಸ್‌ಪೋರ್ಟೇಶನ್ ಇನ್‌ಫ್ರಾಸ್ಟ್ರಕ್ಚರ್ ಲಿ.ಗೆ ಸಂಬಂಧಿಸಿದ ಕಾಮಗಾರಿ ನಿರ್ವಹಿಸಿದ್ದಕ್ಕೆ ಬೆಲೆಪಟ್ಟಿಯನ್ನು ಅಧಿಕವಾಗಿ ನಿರೂಪಿಸಿ ಎ ಹಾಕ್ ಎನ್‌ಎಲ್ ಲಾಭ ಗಳಿಸಿದೆ. ಇದರಲ್ಲಿ ಸ್ವಲ್ಪ ಅಂಶವನ್ನು ರಿಲಯನ್ಸ್‌ಗೆ ನೀಡಿದೆ ಎಂದು ಆರೋಪಿಸಲಾಗಿದೆ.

      ಹಾಲಂಡಿನ ಗುಪ್ತಚರ ಮತ್ತು ಆರ್ಥಿಕ ಅಪರಾಧ ತನಿಖಾ ದಳವರು ಶುಕ್ರವಾರ ಎ ಹಾಕ್ ಎನ್‌ಎಲ್‌ನ ಮೂವರು ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದೆ. 2006ರಿಂದ 2008ರ ಅವಧಿಯಲ್ಲಿ ಭಾರತದಲ್ಲಿ ಗ್ಯಾಸ್ ಪೈಪ್‌ಲೈನ್ ನಿರ್ಮಿಸಲು ಎ ಹಾಕ್ ಎನ್‌ಎಲ್‌ನ ಸಹಸಂಸ್ಥೆ ನಿರ್ವಹಿಸಿದ ಸೇವೆಗೆ ಸಂಬಂಧಿಸಿ ಈ ಬಂಧನ ನಡೆದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ಹಗರಣದಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಮೂವರು ಸಿಬ್ಬಂದಿಗಳಿಗೆ ಸುಮಾರು 69.23 ಕೋಟಿ ರೂ. ಸಂದಾಯವಾಗಿದೆ ಎಂದು ಆರೋಪಿಸಲಾಗಿದೆ.

ನಾಲ್ಕು ವಿಮಾ ಕಂಪೆನಿಗಳ ಮೂಲಕ 1.2 ಬಿಲಿಯನ್ ಡಾಲರ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ 1.1 ಬಿಲಿಯನ್ ಡಾಲರ್ (7,615 ಕೋಟಿ ರೂ) ಮೊತ್ತವನ್ನು ದುಬಾ, ವೆಸ್ಟಿಂಡೀಸ್ ಮತ್ತು ಸ್ವಿಝರ್ಲಾಂಡಿನ 15 ಕಂಪೆನಿಗಳನ್ನು ಬಳಸಿಕೊಂಡು ಬಯೊಮೆಟ್ರಿಕ್ಸ್ ಮಾರ್ಕೆಟಿಂಗ್ ಲಿ.ನಲ್ಲಿ ಹೂಡಿಕೆ ಮಾಡಲಾಗಿದೆ. ಜೇಮ್ಸ್ ವಾಲ್ಫೆಂರೊ ಇದರಲ್ಲಿ ಕೆಲವು ಸಂಸ್ಥೆಗಳ ಲಾಭದಾಯಕ ಮಾಲೀಕನಾಗಿದ್ದು ಈತನ ಹೆಸರು 2005ರಲ್ಲಿ ‘ಪ್ಯಾರಡೈಸ್ ಪೇಪರ್’ನಲ್ಲಿ ಒಳಗೊಂಡಿದೆ ಎಂದು ತನಿಖಾ ತಂಡ ತಿಳಿಸಿದೆ.

 ಆದರೆ ಈ ಆರೋಪವನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿ.(ರಿಲ್) ನಿರಾಕರಿಸಿದೆ. ರಿಲಯನ್ಸ್‌ಗೆ ಯಾವುದೇ ಸಹಸಂಸ್ಥೆಯಿಲ್ಲ ಅಥವಾ 2006ರಲ್ಲಿ ಯಾವುದೇ ಗ್ಯಾಸ್‌ಲೈನ್ ನಿರ್ಮಿಸಿಲ್ಲ.ಅಲ್ಲದೆ ಗ್ಯಾಸ್‌ಲೈನ್ ನಿರ್ಮಿಸಲು ಹಾಲಂಡಿನ ಯಾವುದೇ ಸಂಸ್ಥೆಗೆ ಗುತ್ತಿಗೆ ನೀಡಿಲ್ಲ. ಆದ್ದರಿಂದ ಈ ಆರೋಪ ನಿರಾಧಾರವಾಗಿದೆ ಎಂದು ತಿಳಿಸಿದೆ.

ಈಸ್ಟ್‌ವೆಸ್ಟ್ ಪೈಪ್‌ಲೈನ್ ಸಂಸ್ಥೆಯೂ ಆರೋಪವನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News