×
Ad

ಫೇಸ್‌ಬುಕ್ : ರಾಜಕೀಯ ಜಾಹೀರಾತಿನಲ್ಲಿ ಬಿಜೆಪಿ ನಂ.1

Update: 2019-04-07 23:04 IST

ಹೊಸದಿಲ್ಲಿ, ಎ.7: ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಚಾರ ಅಭಿಯಾನದ ಪ್ರಮಾಣ ಹೆಚ್ಚುತ್ತಿದ್ದು ಈ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ರಾಜಕೀಯ ಪಕ್ಷಗಳು ಮತ್ತವರ ಬೆಂಬಲಿಗರು 10 ಕೋಟಿ ರೂ.ಗೂ ಹೆಚ್ಚಿನ ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ.

   ಫೆಬ್ರವರಿ- ಮಾರ್ಚ್‌ನಲ್ಲಿ 51,810 ರಾಜಕೀಯ ಜಾಹೀರಾತು ಪ್ರಕಟವಾಗಿದ್ದು ಇದರ ಮೊತ್ತ 10.32 ಕೋಟಿ ರೂ.ಗೂ ಅಧಿಕವಾಗಿದೆ. ಈ ಜಾಹೀರಾತುಗಳು ರಾಜಕೀಯ ಮತ್ತು ರಾಷ್ಟ್ರೀಯ ಮಹತ್ವದ ವಿಷಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಫೇಸ್‌ಬುಕ್ ತಿಳಿಸಿದೆ.

ಆಡಳಿತಾರೂಢ ಬಿಜೆಪಿ ಮತ್ತದರ ಬೆಂಬಲಿಗರು ‘ಭಾರತ್ ಕೆ ಮನ್ ಕಿ ಬಾತ್’ ಎಂಬ ಪುಟದಲ್ಲಿ 3,700ಕ್ಕೂ ಹೆಚ್ಚು ಜಾಹೀರಾತು ಪ್ರಕಟಿಸಿದ್ದು 2.23 ಕೋಟಿ ರೂ.ಗೂ ಹೆಚ್ಚು ಹಣವನ್ನು ವೆಚ್ಚ ಮಾಡಿದ್ದಾರೆ. ಇದರಲ್ಲಿ ಬಿಜೆಪಿಗೆ ಸಂಬಂಧಿಸಿದ 1,100 ಜಾಹೀರಾತುಗಳಿದ್ದರೆ(36.2 ಲಕ್ಷ ರೂ), ಇತರ ಪುಟಗಳಾದ ‘ಮೈ ಫರ್ಸ್ಟ್ ವೋಟ್ ಫಾರ್ ಮೋದಿ’, ‘ನೇಷನ್ ವಿದ್ ನಮೊ’ ಗಳಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ.

ಇದಕ್ಕೆ ಹೋಲಿಸಿದರೆ , ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಪುಟದಲ್ಲಿ 410 ಜಾಹೀರಾತುಗಳಿದ್ದು ಇದಕ್ಕೆ 5.91 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಅಂಕಿಅಂಶ ತಿಳಿಸುತ್ತದೆ. ಬಿಜು ಜನತಾ ದಳ 8.56 ಲಕ್ಷ ರೂ. ಟಿಡಿಪಿ 1.58 ಲಕ್ಷ ರೂ, ಎನ್‌ಸಿಪಿ 58, 355 ರೂ. ವೆಚ್ಚ ಮಾಡಿದೆ.

 ದೇಶದ ಚುನಾವಣಾ ಪ್ರಕ್ರಿಯೆಯ ಮೇಲೆ ಅನಪೇಕ್ಷಿತ ರೀತಿಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾಮಾಜಿಕ ಮಾಧ್ಯಮಗಳಿಗೆ ಭಾರತ ಸರಕಾರ ಎಚ್ಚರಿಕೆ ನೀಡಿದೆ. ಭಾರತದಲ್ಲಿ 200 ಮಿಲಿಯನ್‌ಗೂ ಹೆಚ್ಚು ಫೇಸ್‌ಬುಕ್ ಬಳಕೆದಾರರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News