ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತ ಪತ್ರಕರ್ತನ ಬಂಧನಾದೇಶ ರದ್ದುಗೊಳಿಸಿದ ಹೈಕೋರ್ಟ್

Update: 2019-04-08 08:55 GMT

ಹೊಸದಿಲ್ಲಿ, ಎ.8: ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ನಾಲ್ಕು ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಇಂಫಾಲ್ ಮೂಲದ ಪತ್ರಕರ್ತ ಕಿಶೋರ್ ಚಂದ್ರ ವಾಂಘ್ಕೆಮ್ ಅವರ ಬಂಧನ ಆದೇಶವನ್ನು ಮಣಿಪುರ ಹೈಕೋರ್ಟ್ ರದ್ದುಪಡಿಸಿದೆ. ಅವರು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಆಡಳಿತ ಬಿಜೆಪಿ ಸರಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ವಿರುದ್ಧ ನಿಂದನಾತ್ಮಕ ಫೇಸ್ ಬುಕ್ ವೀಡಿಯೋ ಪೋಸ್ಟ್ ಮಾಡಿದ ಆರೋಪದಲ್ಲಿ ಕೇಬಲ್ ಟಿವಿ ಜಾಲವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಚಂದ್ರ ಅವರನ್ನು ಕಳೆದ ವರ್ಷದ ನವೆಂಬರ್ 20ರಂದು ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ಬಂಧಿಸಲಾಗಿತ್ತು. ಅವರಿಗೆ ಅದೇ ದಿನ ಜಾಮೀನು ದೊರಕಿದ್ದರೂ ನವೆಂಬರ್ 27ರಂದು ಮತ್ತೆ ಬಂಧಿಸಲಾಗಿತ್ತು.

ತನ್ನನ್ನು ಅನ್ಯಾಯವಾಗಿ ಬಂಧಿಸಲಾಗಿದೆ ಹಾಗೂ ತಾವು ನ್ಯಾಯಕ್ಕಾಗಿ ಹೊರಾಡುವುದಾಗಿ ಕಿಶೋರ್ ಚಂದ್ರ ಹೇಳಿದ್ದರು.‘‘ಸರಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗುವಂತಹ ಕ್ರಮ ಹಿಟ್ಲರನ ಕಾಲದಲ್ಲಿ ಮಾತ್ರ ನಡೆಯುತ್ತಿತ್ತು’’ ಎಂದೂ ಅವರು ಹೇಳಿದ್ದರು.

ಈ ಬೆಳವಣಿಗೆಯ ನಂತರ ಅಖಿಲ ಮಣಿಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬ್ರೊಝೇಂದ್ರೊ ನಿಂಗೊಂಬ ಅವರು ಕಿಶೋರ್ ಚಂದ್ರ ಒಬ್ಬ ಪತ್ರಕರ್ತನೇ ಅಲ್ಲ ಎಂದಿದ್ದರೂ ಕಿಶೋರ್ ಚಂದ್ರ ಈ ಹೇಳಿಕೆಯನ್ನು ನಿರಾಕರಿಸಿದ್ದರು.

ಈ ಹಿಂದೆ ಆಗಸ್ಟ್ 2018ರಲ್ಲೂ ಕೋಮು ಪ್ರಚೋದಕ ಪೋಸ್ಟ್ ಮಾಡಿದ ಆರೋಪದಲ್ಲೂ ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News