ಜಾತಿ,ಧರ್ಮ ಉಲ್ಲೇಖಿಸಿ ಚುನಾವಣಾ ಭಾಷಣಗಳ ವಿರುದ್ಧ ಅರ್ಜಿ ಕುರಿತು ಇಸಿಗೆ ಸುಪ್ರೀಂ ನೋಟಿಸ್

Update: 2019-04-08 15:52 GMT

ಹೊಸದಿಲ್ಲಿ,ಎ.8: ಧರ್ಮ ಅಥವಾ ಜಾತಿಗೆ ಸಂಬಂಧಿಸಿದ ಭಾಷಣಗಳನ್ನು ಮಾಡುವ ಅಥವಾ ಹೇಳಿಕೆಗಳನ್ನು ನೀಡುತ್ತಿರುವ ರಾಜಕೀಯ ಪಕ್ಷಗಳ ವಕ್ತಾರರು ಮತ್ತು ಪ್ರತಿನಿಧಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಚುನಾವಣಾ ಆಯೋಗ(ಇಸಿ)ಕ್ಕೆ ನೋಟಿಸ್‌ನ್ನು ಹೊರಡಿಸಿದೆ.

ಎ.15ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪೀಠವು ಆಯೋಗಕ್ಕೆ ಸೂಚಿಸಿದೆ. ಶಾರ್ಜಾದ ಎನ್ನಾರೈ ಹರಪ್ರೀತ್ ಮನ್ಸುಖಾನಿ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ರಾಜಕೀಯ ಪಕ್ಷಗಳ ವಕ್ತಾರರು ಧರ್ಮ ಅಥವಾ ಜಾತಿಯನ್ನು ಉಲ್ಲೇಖಿಸಿ ಭಾಷಣಗಳನ್ನು ಮಾಡಿದರೆ ಅವುಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿರುವ ಅರ್ಜಿದಾರರು,ಚುನಾವಣಾ ಪ್ರಕ್ರಿಯೆಯ ಮೇಲೆ ಕಣ್ಣಿಡಲು ಮತ್ತು ಚುನಾವಣಾ ಆಯೋಗದ ನ್ಯಾಯಪರತೆಯನ್ನು ಖಚಿತಪಡಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆಯೂ ಕೇಳಿಕೊಂಡಿದ್ದಾರೆ.

ಭ್ರಷ್ಟಾಚಾರ ಮುಕ್ತ ಚುನಾವಣೆಗಳನ್ನು ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯೊಂದನ್ನು ಸಲ್ಲಿಸುವಂತೆ ಮತ್ತು ಚರ್ಚಾ ಕಾರ್ಯಕ್ರಮಗಳಲ್ಲಿ ಜಾತಿ ಅಥವಾ ಧರ್ಮ ಕುರಿತು ಹೇಳಿಕೆಗಳನ್ನು ಬಳಸುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News