ಹಿಂದಿ ಪತ್ರಿಕೆಗಳಿಂದ ತಾರತಮ್ಯ ಧೋರಣೆ: ದಿಲ್ಲಿ, ಹರ್ಯಾಣ ಮುಸ್ಲಿಮ್ ಓದುಗರ ಅಳಲು
ಹೊಸದಿಲ್ಲಿ,ಎ.8: ಹಿಂದಿ ದಿನಪತ್ರಿಕೆಗಳಲ್ಲಿ ಮುಸ್ಲಿಮರ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ ಮತ್ತು ಸುದ್ದಿ ಸಂಗ್ರಹಿಸುವಲ್ಲಿ ಮುಸ್ಲಿಂ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಮುಸ್ಲಿಂ ಓದುಗರು ಭಾವಿಸುವುದಾಗಿ ಮಾಸ್ ಮೀಡಿಯಾ ಜರ್ನಲ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಹಿಂದಿ ಪತ್ರಿಕೆಗಳಲ್ಲಿ ಮುಸ್ಲಿಂ ವಿರೋಧಿ ಧೋರಣೆ, ಪ್ರತಿಕೂಲ ಸಂಪಾದಕೀಯ ನೀತಿ ಮತ್ತು ಸುದ್ದಿ ವಿತರಣೆಯ ಕೊರತೆ ಇತ್ಯಾದಿಗಳ ಬಗ್ಗೆ ಮುಸ್ಲಿಂ ಓದುಗರು ಅಸಮಾಧಾನ ವ್ಯಕ್ತಪಡಿಸಿರುವುದು ಮಾಸಿಕ ಮಾಧ್ಯಮ ಸಂಶೋಧನಾ ಪತ್ರಿಕೆಯಾಗಿರುವ ಮಾಸ್ ಮೀಡಿಯಾದ ಎಪ್ರಿಲ್ ಆವೃತಿಯಲ್ಲಿ ಪ್ರಕಟವಾದ ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.
ದಿಲ್ಲಿಯ 20 ಮುಸ್ಲಿಂ ಪ್ರದೇಶಗಳು ಮತ್ತು ಹರ್ಯಾಣದ ಐದು ನಗರಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಭಾಗಿಯಾದ ಶೇ.76 ಮಂದಿ (ಎಲ್ಲರೂ ಮುಸ್ಲಿಮರು) ಹಿಂದಿ ಪತ್ರಿಕೆಗಳು ಮುಸ್ಲಿಂ ಸಮುದಾಯದ ವಿರುದ್ಧ ಪಕ್ಷಪಾತ ಧೋರಣೆ ಹೊಂದಿದೆ ಎಂದು ಭಾವಿಸುತ್ತಾರೆ. ಶೇ.84 ಓದುಗರು ಹಿಂದಿ ಪತ್ರಿಕೆಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಹಿಂದಿ ಪತ್ರಿಕೆಗಳು ಒಂದೋ ಮುಸ್ಲಿಮರ ಬಗ್ಗೆ ವರದಿ ಮಾಡುವುದೇ ಇಲ್ಲ ಮತ್ತು ಒಂದು ವೇಳೆ ವರದಿ ಮಾಡಿದರೂ ಅದು ಸಮುದಾಯದ ವಿರುದ್ಧವಾಗಿರುತ್ತದೆ ಎಂದು ಮುಸ್ಲಿಂ ಓದುಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿಲ್ಲಿ ಮತ್ತು ಹರ್ಯಾಣದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.44 ಮಂದಿ ಕೇವಲ ಹಿಂದಿ ಪತ್ರಿಕೆಗಳನ್ನು ಮಾತ್ರ ಓದುವವರಾಗಿದ್ದರೆ ಶೇ.23 ಮಂದಿ ಹಿಂದಿ ಮತ್ತು ಉರ್ದು ಪತ್ರಿಕೆಯ ಓದುಗರಾಗಿದ್ದಾರೆ.