×
Ad

ಕಾಶ್ಮೀರ: ಹೆದ್ದಾರಿ ಮುಚ್ಚುಗಡೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಶಾ ಫೈಸಲ್

Update: 2019-04-08 21:43 IST

ಹೊಸದಿಲ್ಲಿ.ಎ.8: ವಾರದಲ್ಲಿ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನಾಗರಿಕರ ಓಡಾಟ ನಿಷೇಧಿಸುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಎಪ್ರಿಲ್ 3ರಂದು ಘೋಷಿಸಲಾಗಿರುವ ನಿಷೇಧ ಆದೇಶ ಜೀವನ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಶಾ ಫೈಸಲ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಸತತ ಎರಡು ದಿನಗಳ ಕಾಲ ಹೆದ್ದಾರಿಯಲ್ಲಿ ನಾಗರಿಕರ ಓಡಾಟದ ಮೇಲೆ ನಿಷೇಧ ಹೇರಿರುವುದು ಸಾರ್ವಜನಿಕರ ಹಿತಾಸಕ್ತಿಯನ್ನು ಹೊಂದಿರಲು ಸಾಧ್ಯವಿಲ್ಲ. ಇದರಿಂದ ಒಳ್ಳೆಯದಾಗುವ ಬದಲು ನಷ್ಟವೇ ಹೆಚ್ಚು ಎಂದು ಫೈಸಲ್ ವಾದಿಸಿದ್ದಾರೆ.

 ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿಪಡೆದುಕೊಂಡ ಫೆಬ್ರವರಿ 14ರ ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿರುವ ಹೆದ್ದಾರಿ ನಿಷೇಧ ರವಿವಾರದಿಂದ ಆರಂಭವಾಗಿದ್ದು, ಮೇ 31ರವರೆಗೆ ಜಾರಿಯಲ್ಲಿರಲಿದೆ. ಬಾರಾಮುಲ್ಲಾದಿಂದ ಶ್ರೀನಗರ, ಕಾಸಿಗುಂಡ್, ಜವಾಹರ್ ಟನಲ್, ಬನಿಹಲ್, ರಾಮ್ಬನ್ ಮೂಲಕ ಉದಮ್‌ಪುರ್‌ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಜೋಡಿಸುವ ಏಕೈಕ ಎಲ್ಲ ಹವಾಮಾನದಲ್ಲೂ ತೆರೆದಿರುವ ರಸ್ತೆ ಸಂಪರ್ಕವಾಗಿದೆ. ಸದ್ಯ ರಾಜ್ಯಪಾಲರ ನೇತೃತ್ವದ ರಾಜ್ಯ ಸರಕಾರ ಸೂಕ್ತ ಅಧಿಕಾರ ವ್ಯಾಪ್ತಿಯಿಲ್ಲದೆ ಜಾರಿ ಮಾಡಿರುವ ಈ ನಿಷೇಧ ಕಾನೂನುಬಾಹಿರವಾಗಿದೆ ಎಂದು ಫೈಸಲ್ ಆರೋಪಿಸಿದ್ದಾರೆ.

ಕಳೆದ ಮೂವತ್ತು ವರ್ಷಗಳ ಸಂಘರ್ಷದಲ್ಲಿ ನಾಗರಿಕರ ಒಡಾಟದ ಮೇಲೆ ಈ ರೀತಿಯ ಅಸಮಾನ್ಯ ಮತ್ತು ಕಾನೂನುಬಾಹಿರ ನಿರ್ಬಂಧ ಹೇರಿದ ಬೇರೆ ಉದಾಹರಣೆಯಿಲ್ಲ ಎಂದು ಫೈಸಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News