ಮೋದಿ ಗೆಲುವಿಗೆ ನೆರವಾಗಲು ಪುಲ್ವಾಮ ದಾಳಿಗೆ ಕೇಂದ್ರ ಅವಕಾಶ ನೀಡಿತ್ತು: ಫಾರೂಕ್ ಅಬ್ದುಲ್ಲಾ ಗಂಭೀರ ಆರೋಪ

Update: 2019-04-08 16:39 GMT

ಶ್ರೀನಗರ, ಎ.8: ಪುಲ್ವಾಮ ದಾಳಿಯ ಬಗ್ಗೆ ಕೇಂದ್ರಕ್ಕೆ ತಿಳಿದಿತ್ತು, ಆದರೆ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗೆಲುವಿಗೆ ನೆರವಾಗಲು ದಾಳಿ ನಡೆಯಲು ಅದು ಅವಕಾಶ ನೀಡಿತ್ತು ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಆರೋಪಿಸಿದ್ದಾರೆ.

ಮೇ 31ರವರೆಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾರಕ್ಕೆ ಎರಡು ದಿನ ನಾಗರಿಕ ವಾಹನಗಳ ಸಂಚಾರವನ್ನು ನಿಷೇಧಿಸಿರುವುದರ ವಿರುದ್ಧ ರವಿವಾರ ನಡೆದ ಧರಣಿ ಮುಷ್ಕರದ ನೇತೃತ್ವ ವಹಿಸಿದ್ದ ಅಬ್ದುಲ್ಲಾ ಅವರು, “ಅದು ಅವರ(ಕೇಂದ್ರ) ತಪ್ಪು. ದಾಳಿ ನಡೆಯಲಿದೆ ಎನ್ನುವುದು ಅವರಿಗೆ ಗೊತ್ತಿತ್ತು. ಸ್ಫೋಟಕಗಳು ಎಲ್ಲಿಂದ ಬಂದಿದ್ದವು? ಪ್ರಧಾನಿ ಮೋದಿಯವರಿಗೆ ಚುನಾವಣೆಯನ್ನು ಗೆಲ್ಲಬೇಕಿತ್ತು,ಅದಕ್ಕಾಗಿ ಅವರು ಈ ದುಸ್ಸಾಹಸವನ್ನು ಮಾಡಿದ್ದರು’’ ಎಂದು ಹೇಳಿದರು.

‘‘ಈ ದಾಳಿಯ ರೂವಾರಿಗಳು ಅವರೇ ಎಂದು ಇಂದೂ ನಾನು ಹೇಳುತ್ತೇನೆ. ಈಗ ನಾವು,ಜನತೆ ಶಿಕ್ಷೆ ಅನುಭವಿಸುತ್ತಿದ್ದೇವೆ ’’ ಎಂದರು.

 ನಾಗರಿಕ ವಾಹನಗಳ ಸಂಚಾರದ ಮೇಲಿನ ನಿಷೇಧ ಸರ್ವಾಧಿಕಾರದಿಂದ ಕೂಡಿದೆ ಎಂದು ಬಣ್ಣಿಸಿದ ಅವರು,ನಮ್ಮನ್ನು ವಸಾಹತು ಎಂದು ಪರಿಗಣಿಸಲಾಗಿದೆಯೇ ಅಥವಾ ನಾವು ಸ್ವತಂತ್ರ ಭಾರತದಲ್ಲಿ ವಾಸವಿದ್ದೇವೆಯೇ ಎಂದು ಪ್ರಶ್ನಿಸಿದರು. ನಿಷೇಧವನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಅವರು ಆಗ್ರಹಿಸಿದರು.

ಸರಕಾರವು ಭದ್ರತಾ ಪಡೆಗಳನ್ನು ಸಾಗಿಸಲು ರೈಲುಗಳನ್ನು ಬಳಸಬಹುದಿತ್ತು ಅಥವಾ ನಾಗರಿಕರಿಗೆ ತೊಂದರೆಯನ್ನು ತಗ್ಗಿಸಲು ರಾತ್ರಿವೇಳೆ ಭದ್ರತಾ ಪಡೆಗಳ ವಾಹನಗಳನ್ನು ಸಾಗಿಸಬಹುದಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News