ಆರ್‌ಜೆಡಿ ಪ್ರಣಾಳಿಕೆ ಬಿಡುಗಡೆ: ಖಾಸಗಿ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ, ಇಬಿಸಿ, ಒಬಿಸಿಗೆ ಮೀಸಲಾತಿ ಭರವಸೆ

Update: 2019-04-08 17:08 GMT

ಪಾಟ್ನಾ,ಎ.8: ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಸೋಮವಾರ ತನ್ನ ಪ್ರಣಾಳಿಕೆ ಪ್ರತಿಬದ್ಧತಾ ಪತ್ರವನ್ನು ಬಿಡುಗಡೆ ಮಾಡಿದ್ದು ಖಾಸಗಿ ಕ್ಷೇತ್ರ ಮತ್ತು ಉನ್ನತ ನ್ಯಾಯಾಂಗದಲ್ಲಿ ಎಸ್ಸಿ, ಎಸ್ಟಿ, ಇಬಿಸಿ ಮತ್ತು ಒಬಿಸಿ ವರ್ಗಕ್ಕೆ ಜನಸಂಖ್ಯೆಯ ಅನುಪಾತದಲ್ಲಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಭರವಸೆ ನೀಡಿದೆ.

ಸಾಮಾನ್ಯ ವರ್ಗದ ದುರ್ಬಲ ಕುಟುಂಬಗಳಿಗೆ ಶೇ.10 ಮೀಸಲಾತಿ ನೀಡುವ ಮೂಲಕ ಶೇ.50ರ ಮಿತಿಯನ್ನು ಉಲ್ಲಂಘಿಸಲಾಗಿದೆ. ಹಾಗಾಗಿ ಎಸ್ಸಿ, ಎಸ್ಟಿ, ಇಬಿಸಿ ಮತ್ತು ಒಬಿಸಿ ವರ್ಗದ ಜನರಿಗೆ ಅವರ ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮೀಸಲಾತಿಯನ್ನು ನೀಡಬೇಕು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತಿಳಿಸಿದ್ದಾರೆ. ಒಟ್ಟಾರೆ ಮೀಸಲಾತಿ ಮೇಲೆ ಸರ್ವೋಚ್ಚ ನ್ಯಾಯಾಲಯ ಶೇ.50ರ ಮಿತಿಯನ್ನು ನಿಗದಿಪಡಿಸಿತ್ತು. ಆದರೆ ಕಳೆದ ತಿಂಗಳು ಸರಕಾರ, ಸಾಮಾಜಿಕ ಸಮಾನತೆ ತರುವ ಉದ್ದೇಶದಿಂದ ಆರ್ಥಿಕ ದುರ್ಬಲ ವಿಭಾಗಕ್ಕೆ ಶೇ.10 ಮೀಸಲಾತಿ ನೀಡಲಾಗಿರುವುದನ್ನು ಶ್ರೇಷ್ಠ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿತ್ತು.

 ಖಾಸಗಿ ವಲಯ ಮತ್ತು ಉನ್ನತ ನ್ಯಾಯಾಂಗದಲ್ಲಿ ಮೀಸಲಾತಿ ನೀಡುವುದರ ಜೊತೆಗೆ 2020-21ರಲ್ಲಿ ಜಾತಿ ಆಧಾರಿತ ಗಣತಿ ನಡೆಸುವ ಭರವಸೆಯನ್ನೂ ಆರ್‌ಜೆಡಿ ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಜಿಡಿಪಿಯ ಶೇ.ಆರನ್ನು ಶಿಕ್ಷಣ ಮತ್ತು ಶೇ.4ನ್ನು ಆರೋಗ್ಯಕ್ಕೆ ವ್ಯಯಿಸಲಾಗುವುದು. ರಾಜ್ಯದಲ್ಲಿ ಶೇಂದಿಯನ್ನು ಅಕ್ರಮಗೊಳಿಸಿರುವುದರಿಂದ ಅನೇಕ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಯುವಕರು ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿ ಆರ್‌ಜೆಡಿ ಶೇಂದಿ ವ್ಯಾಪಾರವನ್ನು ಕಾನೂನಾತ್ಮಕಗೊಳಿಸಲಿದೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News