ವಿಶ್ವಾಸಾರ್ಹತೆ ಸಮಸ್ಯೆಯಿಂದ ಬಳಲುತ್ತಿರುವ ಚು. ಆಯೋಗ: 66 ಮಾಜಿ ಐಎಎಸ್ ಅಧಿಕಾರಿಗಳಿಂದ ರಾಷ್ಟ್ರಪತಿಗೆ ಪತ್ರ

Update: 2019-04-09 08:33 GMT

ಹೊಸದಿಲ್ಲಿ, ಎ.9: ಚುನಾವಣಾ ಆಯೋಗವು ವಿಶ್ವಾಸಾರ್ಹತೆಯ ಸಮಸ್ಯೆಯಿಂದ ಬಳಲುತ್ತಿದೆ ಹಾಗೂ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಅಪಾಯವೊಡ್ಡಿದೆ ಎಂದು ಆರೋಪಿಸಿ ಸುಮಾರು 66 ಮಂದಿ ಮಾಜಿ ಐಎಎಸ್ ಅಧಿಕಾರಿಗಳು ಲೋಕಸಭಾ ಚುನಾವಣೆಯ ಮತದಾನ ದಿನಾಂಕ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿಗೆ ಪತ್ರ ಬರೆದು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

“ಭಾರತದ ಚುನಾವಣಾ ಆಯೋಗ ವರ್ತಿಸುತ್ತಿರುವ ರೀತಿಯಿಂದ ಅದರ ವಿಶ್ವಾಸಾರ್ಹತೆ ಸಾರ್ವಕಾಲಿಕ ಕುಸಿತ ಕಂಡಿದೆ. ಆಯೋಗದ ಮೇಲಿರುವ ಜನರ ವಿಶ್ವಾಸ ಕುಂಠಿತಗೊಂಡರೆ ಅದು ನಮ್ಮ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಮಾರಕವಾಗಲಿದೆ ಹಾಗೂ ಪರಿಸ್ಥಿತಿಯ ಗಂಭೀರತೆಯನ್ನು ಆಯೋಗ ಪರಿಗಣಿಸುವುದೆಂಬ ವಿಶ್ವಾಸವಿದೆ” ಎಂದು ಪತ್ರ ಪತ್ರದಲ್ಲಿ ಮಾಜಿ ಅಧಿಕಾರಿಗಳು ಬರೆದಿದ್ದಾರೆ.

“ಕೇಂದ್ರದಲ್ಲಿನ ಆಡಳಿತ ಪಕ್ಷವು ಮಾದರಿ ನೀತಿ ಸಂಹಿತೆಯನ್ನು ದುರುಪಯೋಗ ಪಡಿಸುವುದಲ್ಲದೆ ಅದನ್ನು ಕಡೆಗಣಿಸಿರುವುದು ಬಹಳ ಕಳವಳಕಾರಿ'' ಎಂದು ಹೇಳಿರುವ ಪತ್ರವು ಆಯೋಗವು ತಾರತಮ್ಯಕಾರಿ ರೀತಿಯಲ್ಲಿ ವರ್ತಿಸಿದೆಯೆಂದು ನಂಬಲಾಗಿರುವ ಕೆಲವೊಂದು ಉದಾಹರಣೆಗಳನ್ನೂ ಉಲ್ಲೇಖಿಸಿದೆ.

“ಚುನಾವಣೆ ಘೋಷಣೆಯಾದ ನಂತರ ಮಾರ್ಚ್ 27ರಂದು ಪ್ರಧಾನಿ ದೇಶವನ್ನುದ್ದೇಶಿಸಿ ಭಾರತವು ಉಪಗ್ರಹ  ನಾಶಕ ಕ್ಷಿಪಣಿಯನ್ನು ಯಶಸ್ವಿಯಾಗಿ  ಪ್ರಯೋಗಿಸಿದೆ ಎಂದ ಘೋಷಣೆಯನ್ನು ಆಡಳಿತ ಪಕ್ಷಕ್ಕೆ ಚುನಾವಣೆ ಸಂದರ್ಭ ಲಾಭ ತರುವ ಉದ್ದೇಶದಿಂದ ಮಾಡಲಾಗಿದೆ'' ಎಂದು ಪತ್ರ ಹೇಳಿದೆ. ಪ್ರಧಾನಿಯ ಕ್ರಮ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ಆಯೋಗ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಮೊದಲ ಹಂತದ ಚುನಾವಣೆ ನಡೆಯುವ ಎಪ್ರಿಲ್ 11ರಂದು ಬಿಡುಗಡೆಗೊಳ್ಳಲಿರುವ ಪ್ರಧಾನಿ ನರೇಂದ್ರ  ಮೋದಿಯ ಜೀವನಾಧರಿತ ಚಲನಚಿತ್ರದ ಬಿಡುಗಡೆಯನ್ನು ಆಯೋಗ ಏಕೆ ತಡೆ ಹಿಡಿದಿಲ್ಲ ಎಂದು ಐದು ಪುಟಗಳ ಈ ಪತ್ರದಲ್ಲಿ ಮಾಜಿ ಐಎಎಸ್ ಅಧಿಕಾರಿಗಳು ಪ್ರಶ್ನಿಸಿದ್ದಾರೆ. “ಮೋದಿ: ಎ ಕಾಮನ್ ಮ್ಯಾನ್ಸ್ ಜರ್ನಿ'' ಎಂಬ ವೆಬ್ ಸರಣಿ ಹಾಗೂ ನಮೋ ಟಿವಿ ಆರಂಭವನ್ನೂ ಪತ್ರ ಪ್ರಶ್ನಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮ ಭಾಷಣದಲ್ಲಿ `ಮೋದಿ ಜಿ ಕೆ ಸೇನಾ' ಎಂಬ ಪದವನ್ನು ಪ್ರಯೋಗಿಸಿದ್ದನ್ನೂ ಪತ್ರದಲ್ಲಿ ಟೀಕಿಸಲಾಗಿದೆ.  “ಆಯೋಗದ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಲು ಆಸ್ಪದವಿಲ್ಲದಂತೆ ಅದು ಸ್ವತಂತ್ರ, ನ್ಯಾಯಯುತ ಹಾಗೂ ನಿಷ್ಪಕ್ಷಪಾತದಿಂದ ಕಾರ್ಯಾಚರಿಸಬೇಕು'' ಎಂದು ರಾಷ್ಟ್ರಪತಿಗಳ  ಮೂಲಕ ಚುನಾವಣಾ ಆಯೋಗಕ್ಕೆ  ಅಪೀಲು  ಸಲ್ಲಿಸಿರುವ ಹಾಗೂ ಎಪ್ರಿಲ್ 8ರಂದು ಬರೆಯಲಾಗಿರುವ ಈ ಪತ್ರದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News