ಬಿಲ್ಲವರು ಬಿಜೆಪಿಯಿಂದ ಜೈಲಿಗೆ, ಕಾಂಗ್ರೆಸ್‌ನಿಂದ ಶಾಸನಸಭೆಗೆ: ಹರೀಶ್ ಕುಮಾರ್

Update: 2019-04-09 09:25 GMT

ದ.ಕ.ಲೋಕಸಭಾ ಕ್ಷೇತ್ರದಲ್ಲಿ ಮಿಥುನ್ ರೈ ಮತ್ತು ನಳಿನ್ ಕುಮಾರ್ ಕಟೀಲು ನಡುವೆ ಸ್ಪರ್ಧೆ ನಡೆಯುತ್ತಿದೆಯೆ ಹೊರತು ಮಿಥುನ್ ಮತ್ತು ಮೋದಿ ನಡುವೆ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ಮತ ಚಲಾಯಿಸಿದರೆ, ಕ್ಷೇತ್ರದ ಸಮಸ್ಯೆ ಕೇಳಲು ಬೇಕಿರುವುದು ಸ್ಥಳೀಯ ಸಂಸದನಲ್ಲವೇ? ಹಾಗಾಗಿಯೇ ಇಲ್ಲಿ ನಳಿನ್ ಪರವಾಗಿ ಬಿಜೆಪಿ ಪ್ರಚಾರ ಮಾಡುತ್ತಿಲ್ಲ. ಬದಲಾಗಿ ಮೋದಿಯ ಹೆಸರು ಹೇಳಿ ಪ್ರಚಾರ ನಡೆಸುತ್ತಿದ್ದಾರೆ. ಅಂದರೆ ನಳಿನ್ ಕುಮಾರ್ ಬೇಡ ಎಂದಾಯಿತಲ್ಲವೇ? ಹಾಗಾಗಿ ಕ್ಷೇತ್ರಕ್ಕೆ ಸಮರ್ಥ ಯುವ ಅಭ್ಯರ್ಥಿ ಕಾಂಗ್ರೆಸ್‌ನಲ್ಲಿದ್ದಾರೆ. ಈ ಚುನಾವಣೆ ಏನಿದ್ದರೂ ನಿಷ್ಕ್ರಿಯ ಸಂಸದ ಮತ್ತು ಸಕ್ರಿಯ ಯುವಕನ ನಡುವಿನ ಹೋರಾಟ.

ಇದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್‌ರ ಅಭಿಪ್ರಾಯ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದ ಕುರಿತಂತೆ ‘ವಾರ್ತಾಭಾರತಿ’ ಜತೆ ಅವರು ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

► ಬಿರುಸಿನ ಪ್ರಚಾರ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಕಾರ್ಯಕರ್ತರು, ನಾಯಕರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಸುಳ್ಯ, ಉಳ್ಳಾಲ, ಗುರುಪುರದಲ್ಲಿ ಈಗಾಗಲೆ ಪಕ್ಷದ ಅಭ್ಯರ್ಥಿ ಮಿಥುನ್ ರೈ ಪ್ರಚಾರ ಕಾರ್ಯ ನಡೆಸಿದ್ದು, ಇಂದು ಬೆಳ್ತಂಗಡಿಯಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. 16 ಬ್ಲಾಕ್‌ಗಳಲ್ಲಿ ಒಂದೊಂದು ಒಂದು ದಿನದಂತೆ ಅಭ್ಯರ್ಥಿಯಿಂದ ಪ್ರಚಾರ ನಡೆಯುತ್ತಿದೆ. ಬೂತ್ ಮಟ್ಟದ ಕಾರ್ಯಕರ್ತರು ಕೂಡಾ ಮನೆಮನೆಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದು, ಪ್ರಸಕ್ತ ಎರಡನೇ ಸುತ್ತಿನ ಪ್ರಚಾರ ನಡೆಸುತ್ತಿದ್ದಾರೆ.

► ಈ ಬಾರಿ ಬದಲಾವಣೆ

ಕಾಂಗ್ರೆಸ್‌ನಿಂದ ಯುವ ಅಭ್ಯರ್ಥಿಯನ್ನು ನೀಡಲಾಗಿದೆ. ಹಾಗಾಗಿ ಯುವಕರಿಂದಲೂ ಬೆಂಬಲ ಸಿಗುತ್ತಿದೆ. ಪಕ್ಷದಲ್ಲಿ ಭಿನ್ನಮತವಿಲ್ಲದೆ ಒಗ್ಗಟ್ಟಿನಿಂದ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಯುತ್ತಿದೆ.

► ಬಿಜೆಪಿ ಶೂನ್ಯ ಸಾಧನೆ

28 ವರ್ಷಗಳಲ್ಲಿ ಬಿಜೆಪಿಯಿಂದ ನಾಲ್ಕು ಮಂದಿ ಸಂಸದರಾಗಿದ್ದಾರೆ. ಎಂಸಿಎಫ್, ಎನ್‌ಎಂಪಿಟಿ, ಬಂದರು, ವಿಮಾನ ನಿಲ್ದಾಣ ಎಲ್ಲವೂ ಕಾಂಗ್ರೆಸ್ ಸಂಸದರ ಸಾಧನೆಯೆ ಹೊರತು ಬಿಜೆಪಿಯ ಸಂಸದರಿಂದ 28 ವರ್ಷಗಳ ಹೆಗ್ಗುರುತು ಅವರದ್ದು ಎಂಬುದು ಏನೂ ಇಲ್ಲ. ಹಾಗಾಗಿ ಜನರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯುವಕ, ಉತ್ಸಾಹಿ, ಸಂಘಟಕನಾಗಿದ್ದು ಈ ಬಾರಿ ಗೆಲ್ಲಲಿದ್ದಾರೆ. ಪಕ್ಷದ ಕಾರ್ಯಕರ್ತರು, ಬೂತ್ ಮಟ್ಟದಿಂದಲೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಕೆಲವು ಏರಿಯಾಗಳಲ್ಲಿ ಪ್ರಚಾರ ಕಾರ್ಯದಲ್ಲಿ ನಾವು ಹಿಂದೆ ಬಿದ್ದಿರಬಹುದು. ಆದರೆ ನಮ್ಮ ಕಾರ್ಯಕರ್ತರು ಮನೆಮನೆ ಭೇಟಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಯುತ್ತಿದೆ.

► ಬಿಲ್ಲವರಿಗೆ ಭರ್ಜರಿ ಅವಕಾಶ

ಕ್ಷೇತ್ರದಲ್ಲಿ ಬಿಲ್ಲವರ ಸಂಖ್ಯೆಗೆ ಹೋಲಿಸಿದರೆ, ಬಿಲ್ಲವರಿಗೆ ಕಾಂಗ್ರೆಸ್ ಕೊಟ್ಟ ಅವಕಾಶ ಇತರ ಯಾರಿಗೂ ನೀಡಿಲ್ಲ. ಬಿಜೆಪಿಯಿಂದ ಯಾವುದೆ ರೀತಿಯ ಅವಕಾಶ ದೊರಕಿಲ್ಲ. ಕರಾವಳಿಯ ಇತಿಹಾಸದಲ್ಲಿ ಬಿಜೆಪಿಯಿಂದ ಲೋಕಸಭೆ, ರಾಜ್ಯಸಭೆಗೆ ಕಳುಹಿಸಿದ ಇತಿಹಾಸವಿಲ್ಲ. ಕಾಂಗ್ರೆಸ್‌ನಿಂದ ಏಳು ಮಂದಿಯನ್ನು ಲೋಕಸಭೆಗೆ ಕಳುಹಿಸಿದ್ದೇವೆ. 2 ಮಂದಿಯನ್ನು ರಾಜ್ಯಸಭೆಗೆ, ಕೆಪಿಸಿಸಿ ಅಧ್ಯಕ್ಷರನ್ನಾಗಿಸಿದ್ದೇವೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಸಿದ್ದೇವೆ. ಮುಖ್ಯಮಂತ್ರಿ ಮಾಡಿದ್ದೇವೆ. ಬಿಜೆಪಿಯವರು ಯಾರನ್ನು ಮಾಡಿದ್ದಾರೆ? ನಾವು ಈ ಬಾರಿಯೂ ಇಬ್ಬರಿಗೆ ಟಿಕೆಟ್ ನೀಡಿದ್ದೇವೆ. ಅವರು 28ರಲ್ಲಿ ಒಂದು ಟಿಕೆಟ್ ಕೂಡಾ ನೀಡಿಲ್ಲ. ಬಿಜೆಪಿ ಬಿಲ್ಲವರಿಗೆ ಏನೂ ಮಾಡಿಲ್ಲ. ಆದರೂ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಜನಾರ್ದನ ಪೂಜಾರಿ, ಎಸ್. ಬಂಗಾರಪ್ಪ, ದೇವರಾಯ ನಾಯಕ್, ಎಚ್.ಎ.ರಾಮುಲು, ಕೆ.ಜಿ.ಶಿವಪ್ಪ, ವಿನಯ ಕುಮಾರ್ ಸೊರಕೆ ಇಷ್ಟು ಮಂದಿಯನ್ನು ನಾವು ಸಂಸತ್‌ಗೆ ಕಳುಹಿಸಿದ್ದೇವೆ. ಜನಾರ್ದನ ಪೂಜಾರಿ, ಎಚ್.ಆರ್.ಬಸವರಾಜು ಮತ್ತು ಹರಿಪ್ರಸಾದರನ್ನು ರಾಜ್ಯಸಭೆಗೆ ಕಳುಹಿಸಿದ್ದೇವೆ. ಜನರ್ದಾನ ಪೂಜಾರಿಯನ್ನು ಮತ್ತೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರನ್ನಾಗಿಸಿದ್ದೇವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿಸಿದ್ದೇವೆ. ಹರಿಪ್ರಸಾದ್‌ರನ್ನು ಎಐಸಿಸಿ ಪ್ರ.ಕಾರ್ಯದರ್ಶಿಯನ್ನಾಗಿಸಿದ್ದೇವೆ. ಬಂಗಾರಪ್ಪರನ್ನು ಮುಖ್ಯಮಂತ್ರಿಯನ್ನಾಗಿಸಿದ್ದೇವೆ. ಈ ಬಾರಿಯೂ ಇಬ್ಬರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಇಂತಹ ಒಂದು ಉದಾಹರಣೆ ನೀಡಲಿ.

► ಯುವಕರ ಮತ

ಬಿಲ್ಲವ ಸಮುದಾಯ ಮತಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೆ ಮತಗಳು ಬೀಳುತ್ತಿವೆ. ಯುವಕರಿಂದ ವ್ಯತ್ಯಾಸ ಆಗಿರಬಹುದು. ಮಾನಸಿಕವಾಗಿ ಹಿಂಸೆ ನೀಡಿ ಯುವಕರನ್ನು ಸೆಳೆದುಕೊಂಡಿದ್ದರು. ಅದು ಈ ಬಾರಿ ಬದಲಾವಣೆ ಆಗಲಿದೆ. ಹಿಂದಿನ ಚುನಾವಣೆಯಲ್ಲಿ ನಾವು 1.40 ಲಕ್ಷ ಮತಗಳ ಅಂತರದಿಂದ ಹಿಂದಿದ್ದೆವು. ಈ ಬಾರಿ ಚುನಾವಣೆಯಲ್ಲಿ ಯುವಕರು ಮತ್ತು ವಿದ್ಯಾರ್ಥಿ ವರ್ಗ ಬೆಂಬಲಿಸುತ್ತಿದೆ. ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ನಾವು ಹಿಂದೆ ಇದ್ದೆವು. ಈ ಬಾರಿ ಅದನ್ನು ಸರಿಪಡಿಸಿಕೊಂಡು ನಾವು ಚುನಾವಣೆಯಲ್ವಿ ಗೆಲ್ಲಲಿದ್ದೇವೆ.

► ಮಿಥುನ್ ವಿರುದ್ಧ ಅಪಪ್ರಚಾರ

ಮಿಥುನ್ ರೈ ದೊಡ್ಡ ದೈವಭಕ್ತ, ಸಾತ್ವಿಕ, ಸರಳ ಜೀವಿ. ಅನಾವಶ್ಯಕವಾಗಿ ಅವರ ವಿರುದ್ಧ ಬಿಜೆಪಿಯವರು ಅಪಪ್ರಚಾರ ಮಾಡಿದ್ದಾರಷ್ಟೆ. ಕಾಲೇಜಿನಲ್ಲಿ ಸಹಜವಾಗಿ ನಡೆಯುವ ಸಣ್ಣ ಪುಟ್ಟ ಗಲಾಟೆಗಳನ್ನೆ ದೊಡ್ಡದಾಗಿ ಬಿಂಬಿಸಿ ಪಟ್ಟ ಕಟ್ಟಲಾಗಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಅಪಪ್ರಚಾರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ.

ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಗಳಿಸಲಿದ್ದಾರೆ. ಗೆಲುವಿನ ಅಂತರ ಹೆಚ್ಚಿ ಲ್ಲವಾದರೂ, 20ರಿಂದ 40 ಸಾವಿರ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ.

ಬಿಲ್ಲವ ಯುವಕರನ್ನು ಜೈಲಿಗೆ ಕಳುಹಿಸಿದೊಂದೇ ಬಿಜೆಪಿ ಸಾಧನೆ

ಯುವಕರ ಕೈಗೆ ಕತ್ತಿ ನೀಡಿ ಅವರಿಂದ ಗಲಭೆ, ದೊಂಬಿ, ಹತ್ಯೆ ಮಾಡಿಸಿ ಬಳ್ಳಾರಿ ಜೈಲಿಗೆ ಕಳುಹಿಸಿದ್ದು ಬಿಜೆಪಿ ಮಾಡಿದ ಸಾಧನೆ. ಆದರೆ ಲೋಕಸಭೆ, ರಾಜ್ಯಸಭೆಗೆ ಬಿಲ್ಲವ ಸಮುದಾಯದ ನಾಯ ಕರನ್ನು ಕಳುಹಿಸಿದ ಕೀರ್ತಿ ಕಾಂಗ್ರೆಸ್‌ನದ್ದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಮಾರ್, ಗೋಪಾಲ ಪೂಜಾರಿ, ವಸಂತ ಬಂಗೇರರಿಗೆ ಟಿಕೆಟ್ ನೀಡಿ ಮೂರು ಮಂದಿ ಸೋತರೂ ಪಕ್ಷ ಅನೇಕ ವರ್ಷಗಳಿಂದ ಬಿಲ್ಲವರು ನಮಗೆ ಬೆಂಬಲ ನೀಡಿದ್ದಾರೆಂಬ ಒಲವಿನೊಂದಿಗೆ ಶೋಷಿತ ಸಮಾಜ, ಗೆಲ್ಲಲು ಆಗದಿದ್ದರೂ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ನನ್ನನ್ನು ವಿಧಾನ ಪರಿಷತ್‌ಗೂ, ಡಾ.ಜಯಮಾಲಾರನ್ನು ವಿಧಾನ ಪರಿಷತ್‌ನಲ್ಲಿ ಸಭಾ ನಾಯಕಿ ಮಾಡಿದರು. ಅವರು ಪ್ರಸಕ್ತ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇಷ್ಟೆಲ್ಲಾ ಬಿಲ್ಲವರಿಗೆ ಪ್ರಾತಿನಿಧ್ಯ ನೀಡಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ. ಜೈಲಿಗೆ ಕಳುಹಿಸಿದ ಕೀರ್ತಿ ಮಾತ್ರವೆ ಬಿಜೆಪಿಯದ್ದು. ಬಿಲ್ಲವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News