ಪ್ರತಿ ಗ್ರಾಮದಲ್ಲಿ ಬ್ರಾಡ್ ಬ್ಯಾಂಡ್: 2013ರಲ್ಲಿ ಮೋದಿ ಹೇಳಿದ್ದೇನು?, ಅವರ ಸರಕಾರ ಮಾಡಿದ್ದೇನು ?

Update: 2019-04-09 14:02 GMT

2013ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆಗಳು ಮತ್ತು ಆ ಆಶ್ವಾಸನೆಗಳ ಸ್ಥಿತಿ-ಗತಿ, ಆಶ್ವಾಸನೆ ಈಡೇರಿಸುವಲ್ಲಿ ಮೋದಿ ನೇತೃತ್ವದ ಸರಕಾರ ಸಫಲವಾಗಿದೆಯೇ ಇಲ್ಲವೇ ಎನ್ನುವ ಬಗ್ಗೆ caravanmagazine.in ‘ಮೋದಿ ಮೀಟರ್’ ಎನ್ನುವ ವರದಿ ಸರಣಿಯನ್ನು ಪ್ರಕಟಿಸಿದೆ.

►ಗ್ರಾಮೀಣ ಪ್ರದೇಶಗಳನ್ನೂ ಡಿಜಿಟಲ್ ಇಂಡಿಯಾ ಭಾಗವಾಗಿಸಲು ಸರಕಾರವು ಬ್ರಾಡ್ ಬ್ಯಾಂಡ್ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ  ಹೈ-ಸ್ಪೀಡ್ ಅಂತರ್ಜಾಲ ಸೇವೆ ಒದಗಿಸಲು ಭಾರತ್ ನೆಟ್ ಆರಂಭಿಸಿತ್ತು. ಈ ಯೋಜನೆಯಂಗವಾಗಿ ಸರಕಾರ ಫೈಬರ್ ಆಪ್ಟಿಕ್ ಕೇಬಲ್ ಗಳನ್ನು ದೇಶದ ಎಲ್ಲಾ 2,50,000 ಗ್ರಾಮಗಳಿಗೆ ಪ್ರತಿ ಸೆಕೆಂಡ್ ಗೆ  199 ಮೆಗಾ ಬೈಟ್ ಬ್ಯಾಂಡ್ ವಿಡ್ತ್ ಸಾಮರ್ಥ್ಯದ ಅಂತರ್ಜಾಲ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿದೆ.

►ಡಿಸೆಂಬರ್ 2018ರೊಳಗಾಗಿ ಸರಕಾರ ಆಪ್ಟಿಕಲ್ ಫೈಬರ್ ಸಂಪರ್ಕವನ್ನು 1,16,000 ಗ್ರಾಮಗಳಿಗೆ ಒದಗಿಸಿದ್ದಾಗಿ ಹೇಳಿಕೊಂಡಿದ್ದರೂ ಗ್ರಾಮಗಳಲ್ಲಿ ಇಂಟರ್ನೆಟ್ ಸಂಪರ್ಕ ಏನೇನೂ ಸಮಧಾನಕರವಾಗಿಲ್ಲ. ಅಕ್ಟೋಬರ್ 2018ರ ಮಾಹಿತಿಯಂತೆ ಕೇವಲ 5,010 ಗ್ರಾಮ ಪಂಚಾಯತುಗಳಿಗೆ ಅಂತರ್ಜಾಲ ಸೇವೆ ಒದಗಿಸಲಾಗಿತ್ತು.

►ಕಾರ್ಯನಿರ್ವಹಿಸದ ಸಂಪರ್ಕ ಜಾಲಗಳು ಅಥವಾ ದೋಷಪೂರಿತ ಸಲಕರಣೆಗಳಿಂದಾಗಿ ಅಂತರ್ಜಾಲ ಸಂಪರ್ಕ ಒದಗಿಸುವಲ್ಲಿ ಸಮಸ್ಯೆಯಿದೆ. ಈ ತಳ ಮಟ್ಟದ ಸಮಸ್ಯೆಗಳನ್ನು ಭಾರತ್ ನೆಟ್ ಜವಾಬ್ದಾರಿ ಹೊತ್ತಿರುವ ಎರಡು ಸಂಸ್ಥೆಗಳಾದ ಭಾರತ್ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಲಿಮಿಟೆಡ್ ಹಾಗೂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಇನ್ನಷ್ಟು ಬಿಗಡಾಯಿಸಿವೆ. “ಗ್ರಾಮ ಪಂಚಾಯತುಗಳಿಗೆ ಸಂಪರ್ಕವೊದಗಿಸುವ ಆಪ್ಟಿಕಲ್ ಫೈಬರ್ ಗೆ ಸಂಬಂಧಿಸಿದ ಪರಿಹಾರಾತ್ಮಕ ಹಾಗೂ  ಸಮಸ್ಯೆ ನಿರ್ವಹಣೆ ಕೆಲಸ ಮಾತ್ರ ತನ್ನ ಜವಾಬ್ದಾರಿ ಎಂದು ಬಿಎಸ್ಸೆನ್ನೆಲ್ ಹೇಳುತ್ತಿದೆ ಹಾಗೂ ಉಳಿದ ನೆಟ್ವರ್ಕ್ ಪ್ರಕ್ರಿಯೆಗಳಾದ ವಿದ್ಯುತ್ ಪೂರೈಕೆ, ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಬಿಬಿಎನ್‍ಎಲ್ ಜವಾಬ್ದಾರಿ ಎಂದು ಅದು  ಹೇಳುತ್ತಿದೆ. ಅತ್ತ ಬಿಬಿಎನ್‍ಎಲ್ ಸಂಪರ್ಕ ಜಾಲದಲ್ಲಿ ಯಾವುದೇ ತಳಮಟ್ಟದ ವೈಫಲ್ಯಗಳನ್ನು ವರದಿ ಮಾಡುವ ಕ್ರಮವನ್ನು ಅಭಿವೃದ್ಧಿಪಡಿಸಲು ಸಂಸ್ಥೆ ವಿಫಲವಾಗಿದೆ'' ಎಂದು ಆಂತರಿಕ ಪತ್ರವೊಂದು ತಿಳಿಸಿದೆ.

►“ಲಭ್ಯ ಸಾಧನಗಳ ಪರಿಣಾಮಕಾರಿ ಬಳಕೆಯಾಗುವಂತೆ ಮಾಡಲು ನಮಗೆ ಸಾಧ್ಯವಾಗಿಲ್ಲ. ಬಹಳ ವೆಚ್ಚದಿಂದ ಈ  ಜಾಲವನ್ನು ರಚಿಸಿರುವುದರಿಂದ ಈ ಸಮಸ್ಯೆಯನ್ನು ಟೆಲಿಕಮ್ಯುನಿಕೇಶನ್ಸ್ ಇಲಾಖೆ ಗಂಭೀರತೆಯಿಂದ ಪರಿಗಣಿಸಬೇಕು ಎಂದು ಆಯೋಗ ನಿರ್ಧರಿಸಿತ್ತು. ಇಲಾಖೆಯು ಫೈಬರ್ ಅನ್ನು ಕೂಡಲೇ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಹಾಗೂ ಲೀಸ್ ಮಾಡುವ ವಿವಿಧ ವಿಧಾನಗಳ ಬಗ್ಗೆ ಪರಿಗಣಿಸಬೇಕು,'' ಎಂದು  ಫೆಬ್ರವರಿ 21, 2019ರಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದು ಉಲ್ಲೇಖವಾಗಿದೆ.

►ಇತ್ತೀಚಿನ ಸಮಯದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಇದು ರಿಲಯನ್ಸ್ ಜಿಯೋ ಹಾಗೂ ಇತರ ಸಂಸ್ಥೆಗಳೂ ತಮ್ಮ ಡಾಟಾ ದರಗಳನ್ನು ಇಳಿಸುವಂತೆ ಅನಿವಾರ್ಯಗೊಳಿಸಿದ ಜಿಯೋದ ತೀರಾ ಕಡಿಮೆಯೆನ್ನಬಹುದಾದ ಡಾಟಾ ದರಗಳಿಂದಾಗಿದೆ. ಸೆಪ್ಟಂಬರ್ 2016ರಲ್ಲಿ ಆರಂಭಗೊಂಡ ಈ ಕಂಪೆನಿಗೆ ಫೆಬ್ರವರಿ 2017ರಲ್ಲಿದ್ದಂತೆ 100 ಮಿಲಿಯನ್ ಗೂ ಅಧಿಕ ಚಂದಾದಾರರಿದ್ದಾರೆ. ಡಿಸೆಂಬರ್ 2018ರೊಳಗಾಗಿ ಜಿಯೋಗೆ 280 ಮಿಲಿಯನ್ ಬಳಕೆದಾರರಿದ್ದರು. 2019ರಲ್ಲಿ ದೇಶದ  ಇಂಟರ್ನೆಟ್ ಬಳಕೆದಾರರ ಸಂಖ್ಯೆ 500 ಮಿಲಿಯನ್ ಗಡಿ ದಾಟಿತ್ತು. ಜಿಯೋ ಲಭ್ಯಗೊಳಿಸಿದ ಹೆಚ್ಚು ಬ್ಯಾಂಡ್ ವಿಡ್ತ್ ಹಾಗೂ ಅಗ್ಗದ ಡಾಟಾ ಪ್ಲ್ಯಾನ್ ಗಳಿಂದ ಇದು ಸಾಧ್ಯವಾಗಿದೆಯೇ ಹೊರತು ಸರಕಾರದಿಂದ ಕೊಡಮಾಡಲಾದ ಬ್ರಾಡ್ ಬ್ಯಾಂಡ್ ಸಂಪರ್ಕದಿಂದ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News