ಶತಮಾನ ದಾಟಿದರೂ ಉತ್ಸಾಹ ಕುಗ್ಗದ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ

Update: 2019-04-09 18:30 GMT

ಕೇವಲ ಒಂದು ಶಾಸಕ ಸ್ಥಾನಕ್ಕಾಗಿ ಮೈಮೇಲಿನ ಅಂಗಿಯನ್ನು ಬದಲಾಯಿಸಿದಂತೆ ರಾತ್ರೋರಾತ್ರಿ ಪಕ್ಷಗಳನ್ನು ಬದಲಾಯಿಸುತ್ತ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತುಗಳನ್ನಾಡುತ್ತ ರಾಜಕಾರಣವೆಂದರೆ ಅಧಿಕಾರ, ಅವಕಾಶವಾದ ಎಂಬಂತಹ ಮಾತುಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತ ಹೇಸಿಗೆ ಬರುವ ರೀತಿಯಲ್ಲಿ ಇರುವವರ ನಡುವೆ ಸಾಮಾಜಿಕ ಕ್ಷೇತ್ರದಲ್ಲಿ ಇಂದಿಗೂ ದಣಿವಿಲ್ಲದೆ ನಿಸ್ವಾರ್ಥದಿಂದ ಬದುಕನ್ನು ನಡೆಸುತ್ತ ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿ ಇತರರಿಗೆ ಮಾದರಿಯಾಗಿ ನಮ್ಮಾಂದಿಗಿರುವವರು 100 ವರ್ಷ ದಾಟಿದ್ದರೂ ಎಲ್ಲಿಯೂ ಎಂದಿಗೂ ರಾಜಿಯಾಗದ ಬಹು ಎತ್ತರದ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರು.

ಹಾರೋಹಳ್ಳಿ ಶ್ರೀನಿವಾಸ ಅಯ್ಯರ್ ದೊರೆಸ್ವಾಮಿ 1918ರ ಎಪ್ರಿಲ್ 10 ರಂದು ಜನಿಸಿದರು. ಇವರ ತಾಯಿ ಪಾರ್ವತಮ್ಮ. 5ನೇ ವಯಸ್ಸಿನಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡ ಇವರು ತಾತನ ಆರೈಕೆಯಲ್ಲಿ ತುಂಬು ಕುಟುಂಬದಲ್ಲಿ ಬೆಳೆದವರು. 10ನೇ ವಯಸ್ಸಿನಲ್ಲಿಯೇ ಗಾಂಧೀಜಿಯವರ ‘ಮೈ ಅರ್ಲಿ ಲೈಫ್’ ಎಂಬ ಪುಸ್ತಕದಿಂದ ಪ್ರಭಾವಿತರಾಗಿದ್ದರು. ವಿವಿ.ಪುರಂನಲ್ಲಿ ಹೈಯರ್ ಪ್ರೈಮರಿ ಶಿಕ್ಷಣ ಮುಗಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು.

ಅಣ್ಣ ಎಚ್. ಎಸ್. ಸೀತಾರಾಮು, ಸರ್ದಾರ್ ವೆಂಕಟರಾಮಯ್ಯ, ಎ. ಜಿ. ರಾಮಚಂದ್ರ ರಾಯರು ಮುಂತಾದವರ ಮಾರ್ಗದರ್ಶನದಿಂದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಚ್.ಎಸ್. ದೊರೆಸ್ವಾಮಿ ಸೆರೆಮನೆ ವಾಸವನ್ನ್ನೂ ಅನುಭವಿಸುತ್ತಾರೆ.

ಮೈಸೂರಿನಲ್ಲಿ ನೆಲೆಸಿ ಸಾಹಿತ್ಯ ಮಂದಿರ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ದೇಶದ ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಮಸ್ಯೆಗಳು, ನಮ್ಮ ಆರ್ಥಿಕ ಸಮಸ್ಯೆಗಳು, ಕೋಮು ಸೌಹಾರ್ದ ಕುರಿತಂತಹ ಕೃತಿಗಳನ್ನು ಪ್ರಕಟಿಸಿದರು. ಇದರೊಂದಿಗೆ ‘ಪೌರವಾಣಿ’ ಎನ್ನುವ ಪತ್ರಿಕೆಯ ಸಂಪಾದಕರಾಗಿಯೂ ದೊರೆಸ್ವಾಮಿಯವರು ಸೇವೆ ಸಲ್ಲಿಸಿದರು.

ಅಖಂಡ ಕರ್ನಾಟಕ ರಚನೆಯ ಹಿನ್ನೆಲೆಯಲ್ಲಿ ನಡೆದ ಏಕೀಕರಣದ ಹೋರಾಟದಲ್ಲಿ ಇವರದು ಪ್ರಮುಖವಾದಂತಹ ಪಾತ್ರ. ಎಚ್.ಎಸ್. ದೊರೆಸ್ವಾಮಿ ಆಚಾರ್ಯ ವಿನೋಭಾ ಭಾವೆ ನೇತೃತ್ವದಲ್ಲಿ ನಡೆದ ಭೂದಾನ ಚಳವಳಿಯಲ್ಲಿ ತೊಡಗಿಕೊಂಡು ಹಲವಾರು ಕಡೆ ಪಾದಯಾತ್ರೆ ನಡೆಸಿ, ಭೂ ಮಾಲಕರ ಮನವೊಲಿಸಿ ಬಡವರಿಗೆ ಭೂಮಿ ದೊರಕಿಸಿಕೊಟ್ಟಿದ್ದಾರೆ.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ ಎರಡನೇ ಸ್ವಾತಂತ್ರ್ಯ ಸಂಗ್ರಾಮವೆಂದೇ ಬಿಂಬಿಸಲ್ಪಟ್ಟ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡ ಎಚ್.ಎಸ್. ದೊರೆಸ್ವಾಮಿ ನಾಲ್ಕು ತಿಂಗಳ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ.

 ದೊರೆಸ್ವಾಮಿ ದಣಿವಿಲ್ಲದ ಹೋರಾಟಗಾರ ಎನ್ನುವುದಕ್ಕೆ ಒಂದಲ್ಲ, ಎರಡಲ್ಲ, ಹತ್ತಾರು ಉದಾಹರಣೆಗಳನ್ನು ಕೊಡಬಹುದು. ಹೆಂಡದ ಅಂಗಡಿಗಳನ್ನು ಮುಚ್ಚಿಸಲು ಬೆಂಗಳೂರಿನಲ್ಲಿ ಇವರು ನಡೆಸಿದಂತಹ ಹೋರಾಟಗಳು, ಹತ್ತು ಹಲವಾರು ದಲಿತರ ಮೇಲೆ ದೌರ್ಜನ್ಯಗಳಾದಾಗ ಸಾಮರಸ್ಯ ಸ್ಥಾಪಿಸುವ ಸಲುವಾಗಿ ಅವರು ಮಾಡಿದ ಕಾರ್ಯಗಳು ಮೆಚ್ಚುವಂಥದ್ದು. ಸಹಕಾರಿ ಧುರೀಣರಾಗಿ ಹನುಮಂತನಗರ ಸಹಕಾರಿ ಬ್ಯಾಂಕಿನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಡವರ ಮನೆಯ ಮಕ್ಕಳ ಶಿಕ್ಷಣಕ್ಕಾಗಿ ಹನುಮಂತನಗರದಲ್ಲಿ ಭಾರತ ವಿದ್ಯಾಮಂದಿರ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲು ಕಾರಣಕರ್ತರಾದರು. ದಲಿತರ ಕೇರಿಗಳಲ್ಲಿ ಶಾಲೆಗಳನ್ನು ತೆರೆಸಿದರು. ಸ್ವಚ್ಛತೆಯ ಬದುಕನ್ನು ಅವರಿಗೆ ತಿಳಿಸಿದ್ದಾರೆ.

ಕಾರವಾರದಲ್ಲಿ ಕೈಗಾ ಅಣುಸ್ಥಾವರದ ಸ್ಥಾಪನೆಯ ವಿರುದ್ಧ ಎರಡು ವರ್ಷಗಳ ಕಾಲ ಕಾರವಾರ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಂಚರಿಸಿ ಜನರಲ್ಲಿ ಕೈಗಾ ಅಣುಸ್ಥಾವರದ ಸ್ಥಾಪನೆಯಿಂದ ಆಗುವಂತಹ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

 ಪಿ.ವಿ. ನರಸಿಂಹರಾಯರ ಸರಕಾರ ಡಂಕೆಲ್ ಪ್ರಸ್ತಾವನೆಗೆ ಯಾವುದೇ ರೀತಿಯ ಮಾತುಕತೆಗಳಾಗದೆ, ಲೋಕಸಭೆಯಲ್ಲಿ ಮತ್ತು ರಾಜ್ಯ ಸಭೆಯಲ್ಲಿ ವಿಷಯ ಚರ್ಚಿಸಿ ಅಭಿಪ್ರಾಯ ಪಡೆಯದೆ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ್ದು ತಪ್ಪು. ಇದರಿಂದ ನಮ್ಮ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕೈಪಿಡಿ ಬರೆದು ಮುದ್ರಿಸಿ ಹಂಚಿದರು.

ಕರ್ನಾಟಕ ರಾಜ್ಯದಲ್ಲಿ ಹಲವಾರು ದಶಕಗಳಿಂದ ಸರಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದನ್ನು ವಿರೋಧಿಸುತ್ತಲೇ ಬಂದಿದ್ದಾರೆ.

ಬಾಲಸುಬ್ರಹ್ಮಣ್ಯರವರು ತಮ್ಮ ವರದಿಯಲ್ಲಿ ರಾಜ್ಯದಲ್ಲಿ ಒಟ್ಟು 4 ಲಕ್ಷ ಎಕರೆ ಸರಕಾರಿ ಜಮೀನು, ಅರಣ್ಯ ಪ್ರದೇಶ, ಗೋಮಾಳ ಕಬಳಿಕೆಯಾಗಿರುವ ವಿಚಾರವನ್ನು ವರದಿಯಲ್ಲಿ ತಿಳಿಸಿದ್ದರು.

 ಎಚ್.ಎಸ್. ದೊರೆಸ್ವಾಮಿ, ನ್ಯಾ. ಸಂತೋಷ್ ಹೆಗ್ಡೆ, ಮಾಜಿ ಸ್ಪೀಕರ್ ಕೃಷ್ಣ, ಯಲ್ಲಪ್ಪರೆಡ್ಡಿ, ಎಸ್.ಕೆ. ಕಾಂತ ಎಲ್ಲರೂ ನಿರಂತರವಾಗಿ ಹೋರಾಟವನ್ನು ಮಾಡಿ ಸರಕಾರದ ಕಣ್ಣುಗಳನ್ನು ತೆರೆಸಿ ಅಂತಿಮವಾಗಿ ಕಬಳಿಕೆಯಾಗಿರುವ ಭೂಮಿಯನ್ನು ಸರಕಾರ ಭೂಗಳ್ಳರಿಂದ ವಶಪಡಿಸಿಕೊಳ್ಳಲು ಬೇಕಾದಂತಹ ಕಾನೂನುಗಳನ್ನು ರೂಪಿಸಲು, ಭೂಮಿ ಹಂಚಿಕೆ ಮಾಡಲು ವಿಶೇಷ ಜಿಲ್ಲಾಧಿಕಾರಿಗಳಿಗೆ ಇದ್ದ ಅಧಿಕಾರ ಮೊಟಕುಗೊಳಿಸುವುದು, ಭೂ ಒತ್ತುವರಿ ಪ್ರಕರಣಗಳಲ್ಲಿ ತನಿಖೆ ನಡೆಸಿ ಮೊಕದ್ದಮೆಗಳನ್ನು ಹೂಡಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ ಹೀಗೆ ಹತ್ತು ಹಲವಾರು ರೀತಿಯ ಕಾರ್ಯಗಳು ಅನುಷ್ಠಾನಕ್ಕೆ ಬರಲು ದೊರೆಸ್ವಾಮಿ ನಡೆಸಿದ ಹೋರಾಟ ಬಹು ದೊಡ್ಡದು. ಇದಕ್ಕಾಗಿ ಇವರು ಭೂಕಬಳಿಕೆ ವಿರುದ್ಧದ ಹೋರಾಟದ ಸಮಿತಿಯನ್ನು ರಚಿಸಿ ಹಲವಾರು ಸಂಘ ಸಂಸ್ಥೆಯನ್ನು ರಚಿಸಿ ಹಲವಾರು ಸಂಘ- ಸಂಸ್ಥೆಗಳು, ಸಾರ್ವಜನಿಕ ವ್ಯಕ್ತಿಗಳನ್ನು ಹೋರಾಟಗಾರರನ್ನು ಇದರಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಪುರಭವನದ ಮುಂಭಾಗದಲ್ಲಿ ಸತತವಾಗಿ 39 ದಿನಗಳ ಕಾಲ ನಡೆಸಿದ ಹೋರಾಟ ಒಂದು ದೊಡ್ಡ ಚರಿತ್ರೆಯೇ ಆಗಿದೆ. ದೊರೆಸ್ವಾಮಿಯವರು ಕಬಳಿಕೆದಾರರ ವಿರುದ್ಧ ನಡೆಸಿದಂತಹ ಹೋರಾಟದ ಫಲವಾಗಿ ಸುಮಾರು 50 ಸಾವಿರ ಎಕರೆ ಜಮೀನನ್ನು ಭೂಗಳ್ಳರಿಂದ ಹಿಂಪಡೆದುಕೊಂಡು ಸರಕಾರ ತನ್ನ ಸಾಧೀನಕ್ಕೆ ಪಡೆದುಕೊಂಡಿದೆ. ಇದರ ಮೌಲ್ಯ ಸಾವಿರಾರು ಕೋಟಿ. ರೂ.

  ಅಣ್ಣ ಹಝಾರೆ ನಡೆಸಿದ ಜನಲೋಕಪಾಲ್ ಮಸೂದೆಯ ಒತ್ತಾಯದ ಹೋರಾಟದಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ಪಾಲ್ಗೊಂಡಿದ್ದರು. ಸಂತೋಷ್ ಹೆಗ್ಡೆಯವರ ಜೊತೆಯಲ್ಲಿ ಇವರೂ ಅನೇಕ ದಿನಗಳ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಏಕೀಕರಣದ ಹೋರಾಟ, ಮೈಸೂರು ಚಲೋ ಚಳವಳಿ, ತದನಂತರ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಂದಿರುವ ಸರಕಾರಗಳು ಅದರ ನೇತೃತ್ವ ವಹಿಸಿದ ನಾಯಕರು ಮತ್ತು ಸರಕಾರ ಕೈಗೊಂಡಂತಹ ನಿರ್ಧಾರಗಳು, ಇವುಗಳಿಂದ ಜನರ ಮೇಲಾಗಿರುವ ಪರಿಣಾಮಗಳು ಇವುಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಶಕ್ತಿಯುಳ್ಳವರು ದೊರೆಸ್ವಾಮಿ. ಇಂದಿಗೂ ಕಾಡುತ್ತಿರುವ ಬಡತನ ಸಮಸ್ಯೆ, ಜನರ ಬದುಕನ್ನು ಹಿಂಡುತ್ತಿರುವ ಭ್ರಷ್ಟಾಚಾರದ ಪಿಡುಗು, ಸಮಾಜದಲ್ಲಿ ನಿವಾರಣೆಯಾಗದೇ ಉಳಿದಿರುವ ಅಸ್ಪಶ್ಯತೆಯ ವಿಚಾರಗಳಿಗೆ ಸ್ಪಂದಿಸುತ್ತಲೇ ಇದ್ದಾರೆ.

ತಮ್ಮ ಜೀವಿತದ ಅವಧಿಯಲ್ಲಿ ಭೂ ರಹಿತರಿಗೆ ರಾಜ್ಯ ಸರಕಾರ ತನ್ನ ಅಧಿಕಾರದಲ್ಲಿರುವ ಸರಕಾರಿ ಜಮೀನುಗಳನ್ನು ಒಂದು ಕುಟುಂಬಕ್ಕೆ ಕನಿಷ್ಟ 2 ಎಕರೆಯ ಲೆಕ್ಕದ್ದಲ್ಲಿ ಉಚಿತವಾಗಿ ನೀಡಬೇಕು. ಪ್ರತಿಯೊಬ್ಬರೂ ಭೂ ಮಾಲಕರಾಗಬೇಕು ಎಂಬುದು ಇವರ ಪಟ್ಟು.

‘‘ಸಮಾಜ ಸೇವೆ ಮಾಡಲು ಬರುವವರು ಬಡತನವನ್ನು ಅಪ್ಪಿಕೊಳ್ಳಲು ಸಿದ್ಧರಿರಬೇಕು’’ ಎನ್ನುವ ಗಾಂಧೀಜಿ ಮಾತಿನಂತೆ ದೊರೆಸ್ವಾಮಿ ತಮ್ಮ ಬದುಕನ್ನು ಅತ್ಯಂತ ಸರಳವಾಗಿ ಸಂತೃಪ್ತಿಯಿಂದ ನಡೆಸಿ ಸಂಭ್ರಮದಿಂದ ಹೋರಾಟಗಳಲ್ಲಿ ಇಂದಿಗೂ ಮುಂಚೂಣಿಯಲ್ಲಿದ್ದಾರೆ. ಅವರ ಜೀವನ ಶೈಲಿಯೇ ಆದರ್ಶಪ್ರಾಯ. ನಮ್ಮಾಂದಿಗಿರುವ ಬದ್ಧತೆಯ ಈ ಹೋರಾಟಗಾರರಿಗೆ ಭಗವಂತ ಮತ್ತಷ್ಟು ಆರೋಗ್ಯ, ಆಯುಷ್ಯ ನೀಡಿ ಕಾಪಾಡಲಿ.

Writer - ಕೆ.ಎಸ್.ನಾಗರಾಜ್, ಬೆಂಗಳೂರು

contributor

Editor - ಕೆ.ಎಸ್.ನಾಗರಾಜ್, ಬೆಂಗಳೂರು

contributor

Similar News