ಮಹೇಂದ್ರನ್ ಅವರ ಇಂದ್ರಜಾಲ

Update: 2019-04-09 18:31 GMT

ಇತ್ತೀಚಿನ ವರ್ಷಗಳಲ್ಲಿ ತಮಿಳು ಚಿತ್ರರಂಗಕ್ಕೆ ಅನೇಕ ಯುವ ನಿರ್ದೇಶಕರ ಪ್ರವೇಶವಾಗುತ್ತಿದೆ. ತಮಿಳುನಾಡಿನ ಕೆಳಸ್ತರದ ಸಮಾಜ, ಗ್ರಾಮೀಣ ಕ್ರೌರ್ಯ, ತರತಮದ ವಿರುದ್ಧ ಸಿಡಿದೇಳುವ ಯುವಸಮೂಹ ಇತ್ಯಾದಿ ವಸ್ತುಗಳನ್ನು ಆಧರಿಸಿ ರೂಪಿಸಿರುವ ಅನೇಕ ಚಿತ್ರಗಳು ಸಂಚಲನವನ್ನು ಮೂಡಿಸಿವೆ. ಆದರೆ ಹಿಂಸೆ, ರಕ್ತದೋಕುಳಿ, ತಲೆ ಚೆಂಡಾಡುವ ದೃಶ್ಯಗಳ ಮೂಲಕ ಪ್ರೇಕ್ಷಕರಿಗೆ ‘ಶಾಕ್’ ನೀಡುತ್ತಿರುವ ಅವರ ಪ್ರಯತ್ನಗಳನ್ನು ಹೋಲಿಸಿದರೆ ಮೂರು ದಶಕಗಳ ಹಿಂದೆಯೇ ಮಾನವ ಹಿಂಸೆಯನ್ನು ರಕ್ತವಿಲ್ಲದೆಯೇ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದ ಮಹೇಂದ್ರನ್ ಚಿತ್ರಗಳೇ ಈಗಲೂ ಹೆಚ್ಚು ಸೂಕ್ಷ್ಮವಾಗಿವೆ. ಸಿನೆಮಾ ಭಾಷೆಯನ್ನು ಮಾತನಾಡುತ್ತವೆ ಎನಿಸುತ್ತದೆ.


‘‘ಉದಿರಿ ಪೂಕ್ಕಳ್ ಚಿತ್ರದಲ್ಲಿ ಮಹೇಂದ್ರನ್ ಮಾಡಿದ ಸಾಧನೆಯ ಹತ್ತಿರಕ್ಕೆ ಬರುವಷ್ಟಾದರೂ ನನಗೆ ಸಾಧ್ಯವಾದರೆ, ನನಗೆ ಸಂತೋಷವಾಗುತ್ತದೆ. ಆ ಸಿನೆಮಾ ನೋಡಿ. ನನ್ನ ಮಾತುಗಳ ಅರ್ಥ ನಿಮಗಾಗುತ್ತದೆ.’’

-ಹೀಗೆ ಹೇಳಿದವರು ಚಲನಚಿತ್ರರಂಗದಲ್ಲಿ ಆಗತಾನೆ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದ ಮುಂದೆ ಖ್ಯಾತಿ ಪಡೆದ ನಿರ್ದೇಶಕ ಮಣಿರತ್ನಂ.

‘‘ಮಹೇಂದ್ರನ್ ಹೊಸ ಬಗೆಯ ವಾಸ್ತವ ಶೈಲಿಯನ್ನು ಅಳವಡಿಸಿ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿ ಅನೇಕ ಪೀಳಿಗೆಯ ನಿರ್ದೇಶಕರನ್ನು ಪ್ರಭಾವಿಸಿದ ದೃಷ್ಟಾರ. ನಮ್ಮಂಥ ಅನೇಕ ಕಿರಿಯರಿಗೆ ಸ್ಫೂರ್ತಿಯಾದ, ತಿದ್ದಿ ಬೆಳೆಸಿದ, ನಿರ್ದೇಶಕ’’ -ಇದು ತಮಿಳು ಚಿತ್ರರಂಗದಲ್ಲಿ ಇತ್ತೀಚಿನ ದಶಕಗಳಲ್ಲಿ ಪ್ರಸಿದ್ಧಿಗೆ ಬಂದಿರುವ ನಿರ್ದೇಶಕ ವೆಟ್ರಿಮಾರನ್ ಅವರ ಅಭಿಪ್ರಾಯ.

ತಮಿಳು ಚಿತ್ರರಂಗವನ್ನು ತಮ್ಮ ನಿರ್ದೇಶನದ ಮೂಲಕ ಹೊಸ ದಾರಿಯಲ್ಲಿ ಮುನ್ನಡೆಸಿದ ಅನೇಕ ಪ್ರತಿಭಾವಂತ ನಿರ್ದೇಶಕರ ಪಾಲಿಗೆ ಸ್ಫೂರ್ತಿಯ ಸೆಲೆಯಾದ ಜಾನ್ ಮಹೇಂದ್ರನ್ ಕಡಿಮೆ ಸಂಖ್ಯೆಯಲ್ಲಿ ಚಿತ್ರಗಳನ್ನು ನಿರ್ದೇಶಿಸಿದರೂ ಅಚ್ಚಳಿಯದ ಪ್ರಭಾವ ಬೀರಿದ ನಿರ್ದೇಶಕ.

ಜೆ. ಮಹೇಂದ್ರನ್ ಅವರು ತಮಿಳು ಚಿತ್ರರಂಗದ ಚರಿತ್ರೆಯಲ್ಲಿ ವಿಶೇಷವಾದ ಸ್ಥಾನ ಪಡೆಯಲು ಅನೇಕ ಕಾರಣಗಳಿವೆ. ಅರವತ್ತರ ದಶಕದಲ್ಲಿ ತಮಿಳು ಚಿತ್ರರಂಗ ಎಂಜಿಆರ್ ಮತ್ತು ಶಿವಾಜಿ ಗಣೇಶನ್ ಅವರ ದಟ್ಟ ಪ್ರಭಾವಕ್ಕೆ ಸಿಲುಕಿತ್ತು. ಇಬ್ಬರು ತಾರೆಗಳ ಸುತ್ತ ಇಡೀ ಚಿತ್ರರಂಗ ಪರಿಭ್ರಮಿಸುವ ಏಕತಾನತೆಯನ್ನು ಮೈಗೂಡಿಸಿಕೊಂಡಿತ್ತು. ಅಭಿಮಾನಿಗಳಿಗೆ ಆ ಏಕತಾನತೆಯೂ ಗುಂಗು ಹಿಡಿಸಿದ್ದ ಕಾಲ. ಎಂಜಿಆರ್ ಅವರ ಸಾಹಸ, ಪ್ರಣಯ, ಊರಿಗೆ ಉಪಕಾರ, ದುಷ್ಟರ ಸಂಹಾರ, ಅಸಹಾಯಕರಿಗೆ ಆಸರೆಯಾಗುವ ಪಾತ್ರಗಳನ್ನು, ಇನ್ನೊಂದೆಡೆ ಶಿವಾಜಿ ಗಣೇಶನ್ ಅವರ ಅಭಿನಯದಲ್ಲಿ ಸಂಸಾರ ವಿಘಟನೆ, ಪ್ರಣಯ ವೈಫಲ್ಯ, ಭಾವಾವೇಶದ ನಾಯಕರ ದುರಂತ ಕಥನಗಳನ್ನು ತಮಿಳು ಪ್ರೇಕಕರು ತಮ್ಮ ಭಾವಭಿತ್ತಿಯಲ್ಲಿ ಸೆರೆಮಾಡಿಕೊಂಡಿದ್ದರು. ಅಂತಹ ಸನ್ನಿವೇಶದಲ್ಲಿ ಅರವತ್ತರ ದಶಕದಲ್ಲಿ ತಮಿಳು ಪ್ರೇಕ್ಷಕರಿಗೆ ನವಿರು ಭಾವಗಳ, ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿದ, ಮಾನಸಿಕ ಸಂಘರ್ಷಗಳನ್ನು ಬಿಡಿಸಿ ಹೇಳುವ, ಸಮಾಜಕ್ಕೆ ಸಂಗತವಾದ ವಸ್ತುಗಳ, ಆದರೆ ಮನರಂಜನೆಗೆ ಕೊರತೆಯಿಲ್ಲದ ಚಿತ್ರಗಳನ್ನು ನಿರ್ದೇಶಿಸಿ ತಮಿಳು ಚಿತ್ರರಂಗ ಹೊರಳುದಾರಿ ಹಿಡಿಯಲು ಪ್ರಮುಖವಾಗಿ ಕಾರಣರಾದವರು ಸಿ.ವಿ.ಶ್ರೀಧರ್ ಮತ್ತು ಕೆ. ಬಾಲಚಂದರ್.

ಈ ಇಬ್ಬರ ಹಾದಿಯನ್ನೂ ತೊರೆದು ತಮಿಳು ಕಥನಗಳಿಗೆ ಸಂಸ್ಕೃತಿಯ ಸ್ಪರ್ಶವನ್ನು, ತಾಂತ್ರಿಕ ಶ್ರೀಮಂತಿಕೆಯ ಜೊತೆಗೆ ಕಲಾತ್ಮಕ ಸೊಬಗನ್ನು ತಂದು ಮನರಂಜನೆಯ ಕ್ಷಿತಿಜವನ್ನು ವಿಸ್ತರಿಸಿ, ತಂತ್ರಜ್ಞರು-ಕಲಾವಿದರ ವೃತ್ತಿ ಬದುಕನ್ನು ಉಜ್ವಲಗೊಳಿಸಿದ ತ್ರಿಮೂರ್ತಿಗಳೆಂದರೆ ಪಿ. ಭಾರತೀರಾಜಾ, ಜೆ. ಮಹೇಂದ್ರನ್ ಮತ್ತು ಬಾಲು ಮಹೇಂದ್ರ. ಈ ಮೂವರಿಗೂ ಕರ್ನಾಟಕದ ನಂಟು ಅವರ ವೃತ್ತಿ ಬದುಕಿನೊಡನೆ ತಳಕು ಹಾಕಿಕೊಂಡಿರುವುದೊಂದು ವಿಶೇಷ.

ಈ ತ್ರಿಮೂರ್ತಿಗಳಲ್ಲಿ ಪಿ. ಭಾರತೀರಾಜಾ ಬದುಕಿದ್ದಾರೆ. ಅವರು ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದು ಕನ್ನಡದ ತಾರಾ ನಿರ್ದೇಶಕ ಪುಟ್ಟಣ್ಣ ಕಣಗಾಲರಿಗೆ ಸಹಾಯಕರಾಗಿ. ತಮ್ಮ ಮೊದಲನೆಯ ‘ಪದಿನಾರು ವಯದಿನಿಲೆ’ ಚಿತ್ರದಿಂದ ಹಿಡಿದು ಬಹುತೇಕ ಚಿತ್ರಗಳ ಹೊರಾಂಗಣ ಚಿತ್ರೀಕರಣಕ್ಕೆ ಅವರು ಆರಿಸಿಕೊಂಡದ್ದು ಕರ್ನಾಟಕದ ಮೈಸೂರು, ಕೊಳ್ಳೇಗಾಲದ ಹಳ್ಳಿಗಳು, ತಲಕಾಡು, ಮೇಲುಕೋಟೆಯಂಥ ಸುಂದರತಾಣಗಳನ್ನು. ಇನ್ನು ಬಾಲುಮಹೇಂದ್ರ ಅವರು ತಮ್ಮ ವೃತ್ತಿಬದುಕನ್ನು ಆರಂಭಿಸಿದ್ದು ‘ಕೋಕಿಲ’ ಕನ್ನಡ ಚಿತ್ರದ ಮೂಲಕ. ಕೋಕಿಲ ಮೋಹನ್ ಅವರ ಕೊಡುಗೆ.

ಆದರೆ ಜೆ. ಮಹೇಂದ್ರನ್ ಮತ್ತು ಕರ್ನಾಟಕದ ನಂಟು ಇವರೆಲ್ಲರಿಗಿಂತಲೂ ವಿಶಿಷ್ಟವಾದದ್ದು. ಜಾನ್ ಅಲೆಕ್ಸಾಂಡರ್ ಆಗಿ ಜನಿಸಿ (25.07.1939), ಚಿತ್ರರಂಗ ಪ್ರವೇಶಿಸಿದ ನಂತರ ಮಹೇಂದ್ರನ್ ಹೆಸರಿಗೆ ಬದಲಾದ ಅವರು ಕಾರೈಕುಡಿಯಲ್ಲಿ ಬಿ.ಎ. ಓದುತ್ತಿರುವಾಗಲೇ ತಮಿಳು ಚಿತ್ರರಂಗದ ಸೃಜನಶೀಲ ಶೂನ್ಯವನ್ನು ಖಂಡಿಸುತ್ತಿದ್ದರು. ಪ್ರತಿಭಾವಂತ ವಿದ್ಯಾರ್ಥಿಯಾಗಿ, ಕಲಾ ಚಟುವಟಿಕೆಗಳಲ್ಲಿ ಆಸಕ್ತಿ ತಾಳಿದ ಅವರು ಒಮ್ಮೆ ಕಾಲೇಜಿನಲ್ಲಿ ಅತಿಥಿಯಾಗಿ ಬಂದ ತಮಿಳರ ಆರಾಧ್ಯ ದೈವ ಎಂಜಿಆರ್ ಸಮ್ಮುಖದಲ್ಲಿಯೇ ತಮಿಳು ಚಿತ್ರರಂಗದ ಕೊರತೆಗಳನ್ನು, ಅಲ್ಲಿನ ಏಕತಾನತೆಯನ್ನು ಟೀಕಿಸಿದರು. ಆಗತಾನೆ ‘ನಾಡೋಡಿ ಮನ್ನನ್’ ಚಿತ್ರದ ಅಭೂತಪೂರ್ವ ಯಶಸ್ಸಿನಲ್ಲಿ ತೇಲುತ್ತಿದ್ದ ಎಂಜಿಆರ್ ಟೀಕೆಗಳನ್ನು ಮೆಚ್ಚಿ ಮುಂದೆ ಪತ್ರಕರ್ತ ವೃತ್ತಿಯಲ್ಲಿದ್ದ ಮಹೇಂದ್ರನ್ ಅವರನ್ನು ಭೇಟಿಯಾದಾಗ ಕಲ್ಕಿ ಕೃಷ್ಣಮೂರ್ತಿ ಅವರ ಪ್ರಸಿದ್ಧ ಐತಿಹಾಸಿಕ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ (ಕಾವೇರಿಯ ಮಗ) ಆಧರಿಸಿದ ಚಿತ್ರಕತೆ ರಚಿಸಿಕೊಡಲು ಆಹ್ವಾನ ನೀಡಿದರು. ಆ ಕೃತಿಯ ಮೂಲಕ ತಮಿಳು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಓದಿನಲ್ಲಿ ತಲ್ಲೀನರಾದ ಮಹೇಂದ್ರನ್ ಚಿತ್ರಕತೆ ಬರೆಯುವುದನ್ನು ನಿಧಾನಿಸಿದರು. ಯೋಜನೆ ಕೈ ತಪ್ಪಿತು. ಎಂಜಿಆರ್ ಕೋರಿಕೆಯಂತೆ ಅವರ ನಾಟಕ ತಂಡಕ್ಕೆ ‘ಅನಾಥರು’ ಹೆಸರಿನ ನಾಟಕ ರಚಿಸಿಕೊಟ್ಟರು. ಅದನ್ನಾಧರಿಸಿ ನಟಿ ಸಾವಿತ್ರಿ ಅವರನ್ನು ನಾಯಕಿ ಪಾತ್ರದಲ್ಲಿ ಹಾಕಿಕೊಂಡು ಸಿನೆಮಾ ಮಾಡಲು ಹೊರಟ ಎಂಜಿಆರ್ ಮೂರು ದಿನಗಳ ಚಿತ್ರೀಕರಣದ ನಂತರ ನಿಲ್ಲಿಸಿದರು. ಆದರೆ ತಮ್ಮ ಚಿತ್ರ ‘ಕಾಂಚಿ ತಲೈವನ್’ ನಿರ್ದೇಶಕರ ಬಳಿ ಸಹಾಯಕರಾಗಿರಲು ಆಹ್ವಾನಿಸಿದರು. ಹೀಗೆ ಮಹೇಂದ್ರನ್ ಚಿತ್ರರಂಗಕ್ಕೆ ಬಂದರು.

ತಮ್ಮ ಓದು ಮತ್ತು ಬರವಣಿಗೆಯ ಅನುಭವವನ್ನು ತಮಿಳು ಚಿತ್ರರಂಗದಲ್ಲಿ ತೊಡಗಿಸಲು ಯತ್ನಿಸಿದ ಮಹೇಂದ್ರನ್ ‘ನಾಮ್ ಮೂವರ್’ (1966) ಚಿತ್ರಕ್ಕೆ ಚಿತ್ರಕತೆ ರಚಿಸುವ ಮೂಲಕ ಸಿನೆಮಾ ಸಾಹಿತಿಯಾಗಿ ಯಶಸ್ಸು ಕಂಡರು. ಆನಂತರ ಬಹುಬೇಡಿಕೆಯ, ಕಥಾ ಲೇಖಕ, ಸಂಭಾಷಣ ಕರ್ತೃ, ಚಿತ್ರಕಥಾ ಲೇಖಕರಾಗಿ ಪ್ರವರ್ಧಮಾನಕ್ಕೆ ಬಂದರು. ಶಿವಾಜಿ ಗಣೇಶನ್ ನಾಯಕರಾಗಿದ್ದ ‘ನಿರೈಕುಡಂ’ ಚಿತ್ರ(1969)ಕ್ಕೆ ಕತೆ ಬರೆದ ನಂತರ, ಆ ಮೇರು ನಟನ ಪ್ರತಿಭೆಗೆ ದೊಡ್ಡ ಭಿತ್ತಿ ಒದಗಿಸಿದ ತಂಗಪದಕ್ಕಂ(1974) ಚಿತ್ರಕ್ಕೆ ಕತೆ-ಸಂಭಾಷಣೆ ಬರೆದು ಸಿನೆಮಾದ ಅಭೂತಪೂರ್ವ ಯಶಸ್ಸಿನಲ್ಲಿ ಶಿವಾಜಿ ಗಣೇಶನ್ ಅವರೊಡನೆ ಸಮಪಾಲು ಪಡೆದರು. ಕತೆ-ಸಂಭಾಷಣೆಯಿಂದ ಅವರು ಪ್ರಖ್ಯಾತರಾದ ಮತ್ತೊಂದು ಚಿತ್ರ ಕಮಲ್ ಹಾಸನ್ ಅಭಿನಯದ ಮೊಗಂ ಮುಪ್ಪದು ವರುಷಂ(1976).

ಮಹೇಂದ್ರನ್ ಅವರು ತಮ್ಮ ನಿರ್ದೇಶನದ ಮೊದಲ ಚಿತ್ರ ‘ಮುಳ್ಳುಂ ಮಲರುಂ’(1978)ಗೆ ಆರಿಸಿಕೊಂಡದ್ದು ತಮ್ಮ ಕತೆಯನ್ನಲ್ಲ. ಅಣ್ಣ ತಂಗಿಯರ ನಡುವಿನ ಪ್ರೀತಿಯನ್ನು ಕುರಿತ ಉಮಾ ಚಂದ್ರನ್ ಅವರ ಕಾದಂಬರಿಯಲ್ಲಿನ ಒಂದು ಎಳೆಯನ್ನು ಎಳೆದುಕೊಂಡು ಚಿತ್ರಕತೆ ಬರೆದರು. ಆವರೆಗೂ ಖಳನ ಪಾತ್ರಗಳಲ್ಲೇ ಸೆರೆಯಾಗಿದ್ದ ರಜನಿಕಾಂತ್ ಅವರಿಗೆ ಈ ಚಿತ್ರದಲ್ಲಿ ನಾಯಕನ ಪಾತ್ರ ನೀಡಿದರು. ಆದರೆ ನಿರ್ಮಾಪಕ ವೇಣು ಚೆಟ್ಟಿಯಾರ್ ಈ ಆಯ್ಕೆಯನ್ನು ಒಪ್ಪಲಿಲ್ಲ. ಮಹೇಂದ್ರನ್ ಸಹ ತಮ್ಮ ನಿಲುವನ್ನು ಸಡಿಸಲಿಲ್ಲ. ಚೆಟ್ಟಿಯಾರ್ ಗೊಣಗಿಕೊಂಡೇ ಒಪ್ಪಿಗೆ ನೀಡಿದರು. ಆದರೆ ಆ ಗೊಣಗು ಮುಂದೆ ಚಿತ್ರ ಬಿಡುಗಡೆಯಾಗಿ ಸೂಪರ್‌ಹಿಟ್ ಆಗುವವರೆಗೆ ಮುಂದುವರಿದಿತ್ತು.

ಕುಡಿತ, ಜಗಳ, ಒರಟು ವರ್ತನೆಗೆ ಹೆಸರಾದ ಕಾರ್ಮಿಕ ಕಾಳಿ ಎಂಬ ವ್ಯಕ್ತಿಗೆ ಸೋದರಿ ವಳ್ಳಿಯ ಬಗ್ಗೆ ಅಪಾರ ಪ್ರೀತಿ. ಚಿಕ್ಕಂದಿ ನಿಂದಲೇ ಅನಾಥರಾದ, ಬಂಧುಗಳೇ ಇಲ್ಲದ ಅಣ್ಣ-ತಂಗಿಯರ ನಡುವಿನ ಬೆಸುಗೆ ಪ್ರೀತಿಯೊಂದೇ. ಈ ಪ್ರೀತಿ ಅನೇಕ ಪರೀಕ್ಷೆಗಳಿಗೆ ತುತ್ತಾಗಿ ಕೊನೆಗೆ ಮುಳ್ಳೂ ಅರಳುವ ಹಂತದಲ್ಲಿ ಹೊಸ ಅರ್ಥವನ್ನು ಕಂಡುಕೊಳ್ಳುತ್ತದೆ. ರಜನಿಕಾಂತ್ ಅವರಿಗೆ ತಮಿಳು ಚಿತ್ರರಂಗದಲ್ಲಿ ಅವಕಾಶ ನೀಡಿ ಆರಂಭದಲ್ಲಿ ಪ್ರೋತ್ಸಾಹಿಸಿದವರು ಬಾಲಚಂದರ್. ಆದರೂ ಅವರಲ್ಲಿ ಅಡಗಿದ್ದ ನಟನನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿದವರು ಮಹೇಂದ್ರನ್. ಅಷ್ಟೇ ಅಲ್ಲ ‘ಮುಳ್ಳುಂ ಮಲರುಂ’ ಚಿತ್ರದ ಯಶಸ್ಸಿನ ನಂತರ ರಜನಿಕಾಂತ್ ಅವರ ಭವಿಷ್ಯವೇ ಬದಲಾಯಿತು. ಅವರ ವೃತ್ತಿ ಬದುಕಿನ ಅತ್ಯುತ್ತಮ ನಟನೆಯ ಐದು ಚಿತ್ರಗಳಲ್ಲಿ ‘ಮುಳ್ಳುಂ ಮಲರುಂ’ ಕೂಡಾ ಒಂದು.

ಕರ್ನಾಟಕದ ಶೃಂಗೇರಿಯ ಸುತ್ತಮುತ್ತ ಹಸಿರು ಸಿರಿಯ ನಡುವೆ ಬಹುತೇಕ ಭಾಗ ಚಿತ್ರೀಕರಣಗೊಂಡ ‘ಮುಳ್ಳುಂ ಮಲರುಂ’ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿತು. ಪ್ರೀತಿ, ದ್ವೇಷ, ರೋಷ, ದುಡುಕು, ಸಿಡುಕು, ಅಹಂ... ಹೀಗೆ ಮನುಷ್ಯನ ನಾನಾ ಭಾವನೆಗಳನ್ನು ಈ ಚಿತ್ರ ನಿರೂಪಿಸಿದ ರೀತಿಯೇ ವಿಶೇಷವಾಗಿತ್ತು. ಸುಮಧುರವಾದ ಹಾಡುಗಳ ಜೊತೆಗೆ ತಮಿಳು ಸಂಸ್ಕೃತಿಯ ಸೊಬಗು ಈ ಚಿತ್ರದಲ್ಲಿ ಮೂಡಿ ಬಂದ ರೀತಿಗೆ ಜನರು ತಲೆದೂಗಿದರು. ವಿಮರ್ಶಕರ ಮೆಚ್ಚಿದರು. ಕುಡಿತದ ನಶೆಯಲ್ಲಿ ಲಾರಿಗೆ ಸಿಕ್ಕು ಆಸ್ಪತ್ರೆ ಸೇರಿದ ಕಾಳಿ, ಗುಣಮುಖನಾಗಿ ಬರುತ್ತಿರುವುದನ್ನು ಕಂಡು, ಓಡಿ ತಬ್ಬಿಕೊಳ್ಳುವ ತಂಗಿ, ಶಾಲು ಮುಚ್ಚಿದ, ಎಡಗೈ ಕತ್ತರಿಸಿದ ಭುಜವನ್ನು ಸವರಿ, ತೋಳು ಕಳೆದುಕೊಂಡ ಸತ್ಯದ ಅರಿವಾದಾಗ, ಅಣ್ಣ-ತಂಗಿಯರ ನಡುವಿನ ಭಾವ ಸಂಘರ್ಷವನ್ನು ಮಾತಿಲ್ಲದೆಯೇ ದೃಶ್ಯದಲ್ಲಿ ಕಟ್ಟಿಕೊಟ್ಟಿರುವ ರೀತಿಗೆ ಪ್ರೇಕ್ಷಕ ಸಮೂಹ ಬೆಚ್ಚಿದ ಪರಿಯೇ ಮಹೇಂದ್ರನಂಥ ಶಕ್ತಿಶಾಲಿ ನಿರ್ದೇಶಕನ ಆಗಮನಕ್ಕೆ ಸಾಕ್ಷಿಯಾಗಿತ್ತು. ಪ್ರೀತಿಸಿದವನನ್ನು ಮದುವೆಯಾಗಲು ಅಣ್ಣನನ್ನೇ ಧಿಕ್ಕರಿಸುವ ವಳ್ಳಿ, ಕೊನೆಗೆ ಅಣ್ಣನನ್ನು ಎಲ್ಲರೂ ತಿರಸ್ಕರಿಸಿದಾಗ ಆತನೆಡೆಗೆ ಓಡಿ ಬಂದು ನಿನ್ನನ್ನು ಬಿಟ್ಟು ಹೋಗುವುದಿಲ್ಲ ಎಂದು ತಬ್ಬಿಕೊಂಡಾಗ ಅಣ್ಣ-ತಂಗಿಯ ಕಣ್ಣೀರಿನ ಜೊತೆಯಲ್ಲಿಯೇ ಪ್ರೇಕ್ಷಕ ಸಮೂಹ ಒಂದಾದ ಪವಾಡ ಸಿನೆಮಾ ಮಂದಿರದಲ್ಲಿ ಜರುಗಿದ್ದನ್ನು ಅನೇಕರು ಇಂದಿಗೂ ಉದಾಹರಿಸುತ್ತಾರೆ. ಈ ಚಿತ್ರವನ್ನು ನೋಡಿದ ಕೆ. ಬಾಲಚಂದರ್ ರಜನಿಗೆ ಪತ್ರವೊಂದನ್ನು ಬರೆದು ‘‘ನಿನ್ನನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ನನಗೆ ಹೆಮ್ಮೆಯೆನಿಸಿದೆ’’ ಎಂದು ಶ್ಲಾಘಿಸಿದರಂತೆ!

ಸತ್ಯಜಿತ್ ರೇ ಅವರಿಂದ ಪ್ರಭಾವಿತರಾಗಿ, ಕನ್ನಡದ ಹೊಸ ಅಲೆ ಚಿತ್ರ ಗಳಿಂದಲೂ ಪ್ರೇರಣೆ ಪಡೆದು, ವಾಣಿಜ್ಯ ಚೌಕಟ್ಟಿನಲ್ಲಿಯೇ ವಾಸ್ತವವನ್ನು ಬಿಂಬಿ ಸುವ ಚಿತ್ರಗಳನ್ನು ರೂಪಿಸಬೇಕೆಂಬ ಹಂಬಲದ ಮಹೇಂದ್ರನ್ ಅವರ ಪ್ರತಿಭೆ ಮತ್ತಷ್ಟು ಎತ್ತರಕ್ಕೇರಿದ್ದು ಅವರ ಮುಂದಿನ ‘ಉದಿರಿ ಪೂಕ್ಕಳ್’ (1979-ಉದುರಿದ ಹೂಗಳು) ಸಿನೆಮಾದಲ್ಲಿ. ಹೊಸಬರು (ವಿಜಯನ್, ಕನ್ನಡದ ಅಶ್ಚಿನಿ), ಅಪರಿಚಿತರು (ಚಾರುಹಾಸನ್, ಸುಂದರರಾಜ್), ಸಣ್ಣ ಪಾತ್ರಗಳನ್ನು ನಿರ್ವಹಿಸುತ್ತಿದ್ದ ನಟ-ನಟಿಯರನ್ನೇ ಆಯ್ಕೆ ಮಾಡಿ ರೂಪಿಸಿದ ಈ ಚಿತ್ರ ಸಂಪೂರ್ಣ ಮಹೇಂದ್ರನ್ ಅವರ ಪ್ರತಿಭೆಯನ್ನೇ ಆಧರಿಸಿತ್ತು. ‘ಉದಿರಿ ಪೂಕ್ಕಳ್’ನ ಮಾಸದ ಸೌಂದರ್ಯವು ಅದರಲ್ಲಿರುವ ವಾಸ್ತವತೆ, ಪಾತ್ರ ಮತ್ತು ಸನ್ನಿವೇಶದ ವಿವರಗಳು ಮತ್ತು ನಿರೂಪಣೆಯ ಸೂಕ್ಷ್ಮ ಹಾಗೂ ನವಿರು ಸ್ಪರ್ಶದಲ್ಲಿದೆ. ಹಳ್ಳಿಯ ಫ್ಯೂಡಲ್ ದೊರೆಯ ಕ್ರೌರ್ಯ ಆತನನ್ನೇ ಬಲಿತೆಗೆದುಕೊಳ್ಳುವ ಈ ಚಿತ್ರದ ನಿರೂಪಣೆ ಆವರೆಗಿನ ತಮಿಳು ಚಿತ್ರರಂಗ ಕಂಡರಿಯದ ರೀತಿಯಲ್ಲಿತ್ತು. ಗ್ರಾಮೀಣ ಪರಿಸರದ ಮುಗ್ಧತೆಯ ಜೊತೆಗೆ ಹಳ್ಳಿಯ ನಾಯಕನ ಕ್ರೂರ ಮುಖಗಳನ್ನು, ಹೆಣ್ಣುಮಕ್ಕಳ ಅಸಹಾಯಕ ಪರಿಸ್ಥಿತಿಯನ್ನು ವಿವರವಾಗಿ ಕಟ್ಟುವ ಈ ಚಿತ್ರ ತಣ್ಣಗೆ ಹರಿಯುವ ನದಿಯಂತಿದೆ. ಯಜಮಾನ ಸುಂದರವಡಿವೇಲು (ಎಂಥ ಕ್ರೂರ ವ್ಯಂಗ್ಯ!) ಮುಖದಲ್ಲಿನ ಕ್ರೌರ್ಯ, ಆತನ ಹೆಂಡತಿಯೂ ಸೇರಿದಂತೆ ಅವನ ಸುತ್ತ ಇರುವ ಹೆಣ್ಣುಮಕ್ಕಳ ಸುಂದರ ಮುಖದಲ್ಲಿ ಎದ್ದು ಕಾಣುವ ಭಯದಲ್ಲಿ ಇಡೀ ಊರ ಪರಿಸರವೇ ಸಿಕ್ಕು ಒದ್ದಾಡುವಂತೆ ಅವರು ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಪಾತ್ರಗಳನ್ನು ಕಟ್ಟುವ, ಸಂಭಾಷಣೆಯನ್ನು ಬಳಸುವ ಮತ್ತು ದೃಶ್ಯಗಳನ್ನು ಸಂಯೋಜಿಸುವ ವಿಧಾನದಲ್ಲಿ ಮಹೇಂದ್ರನ್ ಅನುಸರಿಸಿರುವ ಕಲಾತ್ಮಕ ಸೂಕ್ಷ್ಮ ಇಡೀ ಚಿತ್ರದಲ್ಲಿ ಎದ್ದು ಕಾಣುತ್ತದೆ. ‘ತಂಗಪದಕ್ಕಂ’ನಂತಹ ಚಿತ್ರಗಳನ್ನು ಸಂಭಾಷಣೆಯಲ್ಲಿಯೇ ಕಟ್ಟಿ ನಿಲ್ಲಿಸಿದ ಮಹೇಂದ್ರನ್ ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಸಂಭಾಷಣೆಗೆ ಮಿತಿ ಹೇರಿ ಸಂಯಮ ಸಾಧಿಸಿದ್ದು ಅವರು ಸಿನೆಮಾದ ದೃಶ್ಯಶಕ್ತಿಯನ್ನು ಅರಿತದ್ದಕ್ಕೆ ಸಾಕ್ಷಿ. ಸುಂದರ ವಡಿವೇಲು ಪಾತ್ರ ಮಾಡಿರುವ ವಿಜಯನ್ ಎಂದೂ ಗಟ್ಟಿದನಿಯಲ್ಲಿ ಮಾತನಾಡುವುದಿಲ್ಲ. ಮುಖದಲ್ಲಿನ ನಗೆಯಿಂದಲೇ ಕ್ರೌರ್ಯವನ್ನು ಚಿಮ್ಮಿಸುತ್ತಾರೆ. ಬಳಕೆಯಾಗುವ ಒಂದೊಂದು ಸಂಭಾಷಣೆಯೂ ನೆನಪಲ್ಲಿ ಉಳಿಯುತ್ತದೆ. ವಡಿವೇಲುವಿನ ಎರಡನೇ ಹೆಂಡತಿ ತೊರೆದು ಹೋಗುವಾಗ ಅಡ್ಡಬಂದ ಗಂಡನಿಗೆ ಹೇಳುತ್ತಾಳೆ- ‘‘ನಿನ್ನ ಊಟದಲ್ಲಿ ವಿಷ ಹಾಕಿಬಿಡುತ್ತೇನೆ. ನನ್ನನ್ನು ಕೊಲೆಗಾರ್ತಿಯಾಗಿ ಮಾಡಬೇಡ.’’ ಪತಿಯನ್ನು ಧಿಕ್ಕರಿಸಲಾರದ ಸಾವಿರಾರು ಪಾತ್ರಗಳನ್ನು ಕಂಡ ಚಿತ್ರರಂಗಕ್ಕೆ ಇದೊಂದು ದೊಡ್ಡ ಆಘಾತವಾಗಿತ್ತು. ಲೇಖನದ ಆರಂಭದಲ್ಲಿ ಮಣಿರತ್ನಂ ಹೇಳಿರುವ ಮಾತುಗಳು ಅಕ್ಷರಶಃ ಸತ್ಯ ಎನಿಸುತ್ತವೆ.

ರಜನಿಕಾಂತ್ ದ್ವಿಪಾತ್ರದಲ್ಲಿ ಅಭಿನಯಿಸಿದ ‘ಜಾನಿ’ (1980) ಚಿತ್ರವೂ ದೊಡ್ಡ ಯಶಸ್ಸು ಕಂಡಿತು. ನಂತರ ನಿರ್ದೇಶಿಸಿದ ‘ನೆಂಜತ್ತೈ ಕಿಳ್ಳಾದೆ’ (1980) ಸುಹಾಸಿನಿಯವರನ್ನು ಪರಿಚಯಿಸಿತು. ಕನ್ನಡದ ಕೋಕಿಲ ಮೋಹನ್ ಅವರ ವೃತ್ತಿ ಬದುಕಿಗೆ ದೊಡ್ಡ ಬ್ರೇಕ್ ನೀಡಿತು. ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನಗೊಂಡ ಈ ಚಿತ್ರದಲ್ಲಿ ಮೊದಲ ಬಾರಿಗೆ ಕಬ್ಬನ್‌ಪಾರ್ಕ್‌ನ ಬೆಳಗಿನ ದೃಶ್ಯಗಳು ಅಪ್ಸರಲೋಕದಂತೆ ಕಂಡವು. ಕ್ಯಾಮರಾಮನ್ ಅಶೋಕ್ ಕುಮಾರ್ ತಮ್ಮೆಲ್ಲ ಪ್ರತಿಭೆಯನ್ನು ಬಸಿದು ಕಟ್ಟಿದ ಚಿತ್ರವಿದು. ಅನೇಕ ಪ್ರಶಸ್ತಿಗಳನ್ನು, ಅಪಾರ ಯಶಸ್ಸನ್ನು ಬಾಚಿಕೊಂಡ ಈ ಚಿತ್ರ ಮನರಂಜನೆಯ ಹೊಸ ನಿರೂಪಣಾ ಸಾಧ್ಯತೆಗಳನ್ನು ತೆರೆದುತೋರಿಸಿತು. ಸಣ್ಣ ತಪ್ಪೊಂದು ಬದುಕಿನಲ್ಲಿ ತರುವ ದುರಂತಗಳು ಮತ್ತು ಬದುಕು ನಿರಾಶೆಗಳ ನಡುವೆಯೂ ಹೊಸದೊಂದು ದಾರಿಯನ್ನು ಕಂಡು ಸಫಲವಾಗುವ ಆಶಾಭಾವವನ್ನು ನಿರೂಪಿಸುವ ರೀತಿಯೇ ಪ್ರೇಕ್ಷಕರಿಗೆ ಮುದ ನೀಡಿತ್ತು. ಸಾಂಪ್ರದಾಯಿಕ ಸಿನೆಮಾ ನಿರೂಪಣೆಗಳನ್ನು ಮೀರಿದ ಈ ಚಿತ್ರ ತಮಿಳು ಚಿತ್ರರಂಗದಲ್ಲಿ ತಂಗಾಳಿಯ ತೆರೆ ಎಬ್ಬಿಸಿತು.

ಮುಂದೆ ‘ನಂದು’ (1981) ಮತ್ತು ‘ಮೇಟ್ಟಿ’ (1982) ಅಂಥ ಹೊಸ ವಸ್ತುಗಳನ್ನು ನಿರ್ದೇಶಿಸಿದರು. ಮಹೇಂದ್ರನ್ ಅವರ ಕರ್ನಾಟಕದ ನಂಟು ಮತೆ ನವೀಕೃತವಾದದ್ದು ‘ಕೈ ಕುಡುಕ್ಕುಂ ಕೈ’ (1984-ಸಹಾಯಹಸ್ತ) ಚಿತ್ರದ ಮೂಲಕ. ಇದು ಪುಟ್ಟಣ್ಣ ಕಣಗಾಲರ ಕಥಾಸಂಗಮದ ಕೊನೆಯ ಕತೆ ‘ಮುನಿತಾಯಿ’ ಚಿತ್ರವನ್ನು ಆಧರಿಸಿದ ವಿಸ್ತೃತ ಕಥಾಚಿತ್ರ. ‘ಮುನಿತಾಯಿ’ ಚಿತ್ರದಲ್ಲಿ ಖಳನ ಪಾತ್ರವಹಿಸಿದ್ದ ರಜನಿಕಾಂತ್ ಈ ಚಿತ್ರದಲ್ಲಿ ನಾಯಕನ ಪಾತ್ರವಹಿಸಿದ್ದಾರೆ. ಈ ಚಿತ್ರವನ್ನು ನಿರ್ಮಿಸಿದ ನಟ ವಿಜಯಕುಮಾರ್ ಅವರು ರಜನಿಕಾಂತ್‌ಗೆ ನಾಯಕಿಯಾದ ಪಾತ್ರ ಅತ್ಯಾಚಾರಕ್ಕೊಳಗಾಗುವುದು ಸರಿಯಲ್ಲ, ಬದಲಿಸಬೇಕೆಂದು ಒತ್ತಾಯಿಸಿದರಂತೆ. ಆದರೆ ಅದನ್ನು ಅಂಗೀಕರಿಸದೇ ಮಹೇಂದ್ರನ್ ಮೂಲವನ್ನು ಬದಲಿಸದೆ ರೂಪಿಸಿದರು. ರಜನಿ ಅಭಿನಯವನ್ನು ಜನ ಮೆಚ್ಚಿದರೂ, ಮಹೇಂದ್ರನ್ ಅವರ ವೃತ್ತಿ ಬದುಕಿನಲ್ಲಿ ಮೊದಲ ವೈಫಲ್ಯ ಸಂಭವಿಸಿತು.

ಈ ಚಿತ್ರದ ನಂತರ ಮಹೇಂದ್ರನ್ 2006ರವರೆಗೆ ನಿರ್ದೇಶಕರಾಗಿ ತೊಡಗಿಸಿಕೊಂಡ ಮೂರು ಚಿತ್ರಗಳೂ ಯಶಸ್ಸು ಕಾಣಲಿಲ್ಲ. ಬೇರೆ ನಿರ್ದೇಶಕರಿಗಾಗಿ ಚಿತ್ರಕಥೆ-ಸಂಭಾಷಣೆ ರಚಿಸಿದ ನಾಲ್ಕು ಚಿತ್ರಗಳು ಸಹ ಮಹೇಂದ್ರನ್ ಅವರಿಗೆ ಖ್ಯಾತಿ ತರಲಿಲ್ಲ.

ಇತ್ತೀಚೆಗೆ ನಾನು ವಿಜಯ್ ನಾಯಕನಟನಾಗಿದ್ದ ‘ತೇರಿ’ (ಕಿಡಿ) ಚಿತ್ರವನ್ನು ನೋಡುತ್ತಿದ್ದೆ. ಅದರಲ್ಲಿ ಖಳನ ಪಾತ್ರ ಮಾಡಿರುವ ನಟನ ಹಾವ ಭಾವ, ನಟನಾ ಚಾತುರ್ಯವನ್ನು ಕಂಡು ವಿಸ್ಮಯಗೊಂಡಿದ್ದೆ. ಎಲ್ಲಿದ್ದ ಈ ಹಿರಿಯ ನಟ, ಇಷ್ಟರವರೆಗೆ ಎಂದು ಕುತೂಹಲದಿಂದ ಹುಡುಕಾಟ ನಡೆಸಿದಾಗ ಅದು ಮಹೇಂದ್ರನ್ ನಟಿಸಿದ ಮೊದಲನೆಯ ಚಿತ್ರವಾಗಿತ್ತು. ಕಾರ್ಮಿಕ ಮಂತ್ರಿ ವಣಮಾಮಲೈ ಪಾತ್ರದಲ್ಲಿನ ಅವರ ಅಭಿನಯ ಅಮೋಘವೆನಿಸಿತ್ತು. ಇಡೀ ದೇಹವನ್ನೇ ಅಭಿನಯದಲ್ಲಿ ದುಡಿಸಿಕೊಳ್ಳುವ ಮಾದರಿಗೆ ಅದು ಉದಾಹರಣೆಯಾಗಿತ್ತು. ಆನಂತರ ‘ನಿಮಿರ್’ ಮತ್ತು ಇತ್ತೀಚೆಗೆ ರಜನಿಕಾಂತ್ ಅವರ ‘ಪೇಟ್ಟ್ಟೈ’ ಚಿತ್ರದ ರಾಜಪಾಂಡಿ ಚಿತ್ರದಲ್ಲೂ ಗತ್ತಿನಿಂದ ನಟಿಸಿದ್ದರು. ಒಂದು ವೇಳೆ ಮಹೇಂದ್ರನ್ ನಿರ್ದೇಶಕರಾಗದಿದ್ದರೂ, ನಟರಾಗಿಯೂ ಪ್ರಸಿದ್ಧವಾಗುವಷ್ಟು ಪ್ರತಿಭೆ ಅವರಲ್ಲಿತ್ತೆಂದರೆ ಅತಿಶಯೋಕ್ತಿಯಲ್ಲ.

ರಜನಿಕಾಂತ್ ಅವರ ಒಂದು ಸಂಭಾಷಣೆ(ಕೆಟ್ಟ ಪಯನ್ ಸಾರ್ ಇಂದ ಕಾಳಿ)ಯಿಂದ ಸೂಪರ್‌ಸ್ಟಾರ್ ಪಟ್ಟ ನಿರ್ಮಿಸಿದ, ಸುಹಾನಿಸಿಯಂಥ ಸೂಕ್ಷ್ಮ ಕಲಾವಿದೆಯನ್ನು ನೀಡಿದ, ಶೋಭಾರಂಥ ಕಲಾವಿದೆಯನ್ನು ಅರಳಿಸಿದ, ಕೋಕಿಲ ಮೋಹನ್ ಅವರ ವೃತ್ತಿ ಬದುಕಿಗೆ ಚಿಮ್ಮುಹಲಗೆ ಒದಗಿಸಿದ, ಚಿತ್ರೀಕರಣ, ಕತೆ, ಕಲಾವಿದರ ಮೂಲಕ ಕರ್ನಾಟಕದೊಡನೆ ಗಾಢ ನಂಟು ಹೊಂದಿದ್ದ ಜೆ. ಮಹೇಂದ್ರನ್ ಪ್ರಭಾವ ಇನ್ನೂ ಹಲವು ದಶಕಗಳ ಕಾಲ ಉಳಿಯಲಿದೆ.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News