ಇಮ್ರಾನ್ ಖಾನ್ ರನ್ನು ಹೊಗಳಬೇಕೇ, ಬೇಡವೇ ಎಂಬ ಗೊಂದಲದಲ್ಲಿ 'ಭಕ್ತ'ರು: ಮೆಹಬೂಬಾ ಮುಫ್ತಿ

Update: 2019-04-10 08:18 GMT

ಹೊಸದಿಲ್ಲಿ, ಎ.10: ‘‘ನರೇಂದ್ರ ಮೋದಿ 2019ರ ಲೋಕಸಭಾ ಚುನಾವಣೆಗಳನ್ನು ಗೆದ್ದರೆ ಭಾರತದ ಜತೆಗೆ ಶಾಂತಿ ಮಾತುಕತೆಗಳಿಗೆ ಉತ್ತಮ ಅವಕಾಶವಿದೆ’’ ಎಂಬರ್ಥ ನೀಡುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಯ ಬೆನ್ನಲ್ಲೇ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಬಿಜೆಪಿಯನ್ನು ವ್ಯಂಗ್ಯವಾಡಿದ್ದಾರೆ.

ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪಿಡಿಪಿ ನಾಯಕಿ ಮೆಹಬೂಬಾ, ‘ಭಕ್ತರ’ ಗೊಂದಲದತ್ತ ಬೊಟ್ಟು ಮಾಡಿದ್ದಾರೆ. ‘‘ಭಕ್ತರು ತಲೆ ಕೆರೆದುಕೊಳ್ಳುತ್ತಿದ್ದಾರೆ ಹಾಗೂ ಇಮ್ರಾನ್ ಅವರನ್ನು ಹೊಗಳಬೇಕೋ ಅಥವಾ ಬೇಡವೋ ಎಂದು ಗೊಂದಲದಿಂದಿದ್ದಾರೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಓಮರ್ ಅಬ್ದುಲ್ಲಾ ಕೂಡ ಟ್ವೀಟ್ ಮಾಡಿ ‘‘ಇಮ್ರಾನ್ ಖಾನ್ ಅವರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಹೇಳಿದ್ದರೆ ಎಲ್ಲಾ ಚೌಕೀದಾರ್ ಹ್ಯಾಂಡಲ್ ಗಳು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಗೆ ಏನು ಮಾಡುತ್ತಿದ್ದವೆಂದು ಊಹಿಸಿ. ಈಗ ಯಾರು ‘ಟುಕ್ಡೆ, ಟುಕ್ಡೆ ಗ್ಯಾಂಗ್?’’ ಎಂದು ಕೇಳಿದ್ದಾರೆ.

ಪಕ್ಷದ ಸೋಲನ್ನು ಬಯಸುವವರನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ ಎಂದು ಬಿಜೆಪಿ ಈ ಹಿಂದೆ ಟೀಕಿಸುತ್ತಿದ್ದುದನ್ನು ಉಲ್ಲೇಖಿಸಿ ಪಕ್ಷವನ್ನು ಸರಣಿ ಟ್ವೀಟ್ ಗಳಲ್ಲಿ ಒಮರ್ ಅಬ್ದುಲ್ಲಾ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News