ಇವಿಎಂ ನೆಲಕ್ಕೆ ಬಡಿದ ಜನಸೇನಾ ಪಕ್ಷದ ಅಭ್ಯರ್ಥಿ!

Update: 2019-04-11 06:33 GMT

ಅಮರಾವತಿ, ಎ.11: ಮೊದಲ ಹಂತದ ಮತದಾನದ ದಿನವೇ ಆಂಧ್ರಪ್ರದೇಶದಲ್ಲಿ ಅಹಿತಕರ ಘಟನೆ ನಡೆದಿದ್ದು, ಇವಿಎಂ ಯಂತ್ರವನ್ನು ನೆಲಕ್ಕೆಸೆದು ಹಾನಿಗೊಳಿಸಿದ ಪರಿಣಾಮ ಖ್ಯಾತ ನಟ ಪವನ್‌ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುಪ್ತಾ ಎಂಬುವವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಅನಂತಪುರ ಜಿಲ್ಲೆಯ ಗುಂಟ್ಕಲ್ ಕ್ಷೇತ್ರದ ಜನಸೇನಾ ಪಕ್ಷದ ಅಭ್ಯರ್ಥಿ ಮಧುಸೂದನ್ ಗುರುವಾರ ಬೆಳಗ್ಗೆ ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಚುನಾವಣಾ ನಿಯಮಗಳ ಪ್ರಕಾರ ಇವಿಎಂ ಯಂತ್ರದ ಕ್ರಮ ಸಂಖ್ಯೆಗಳ ಸಾಲಿನಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿ ಹೆಸರನ್ನು ಮೊದಲಿಗೆ ಮುದ್ರಿಸಬೇಕಿತ್ತು. ಆದರೆ, ಚುನಾವಣಾ ಅಧಿಕಾರಿಗಳು ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಅಭ್ಯರ್ಥಿಗಳ ಹೆಸರನ್ನು ಮೊದಲಿಗೆ ಮುದ್ರಿಸಿದ್ದು, ಮಧುಸೂದನ್ ಹೆಸರನ್ನು ಕೊನೆಯಲ್ಲಿ ಮುದ್ರಿಸಿದ್ದರು.

ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಅಭ್ಯರ್ಥಿಗಳ ಹೊರತಾಗಿ ಉಳಿದ ಅಭ್ಯರ್ಥಿಗಳ ಚಿಹ್ನೆಯನ್ನು ಅಸ್ಪಷ್ಟವಾಗಿ ಮುದ್ರಿಸಲಾಗಿತ್ತು. ಇದು ಜನಸೇನಾ ಅಭ್ಯರ್ಥಿ ಮಧುಸೂದನ್‌ರನ್ನು ಕೆರಳಿಸಿತ್ತು. ಪರಿಣಾಮ ಮತ ಚಲಾಯಿಸಲು ತೆರಳಿದ್ದ ಅವರು ಮತಗಟ್ಟೆ ಅಧಿಕಾರಿಗಳ ಬಳಿ ಈ ಬಗ್ಗೆ ತಕರಾರು ತೆಗೆದರಲ್ಲದೆ ಇವಿಎಂ ಮತಯಂತ್ರವನ್ನು ಎತ್ತಿ ನೆಲಕ್ಕೆ ಎಸೆದಿದ್ದಾರೆ. ಇದರಿಂದ ಇವಿಎಂ ಯಂತ್ರಕ್ಕೆ ಹಾನಿಯಾಗಿದೆ. ತಕ್ಷಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅನಂತಪುರ ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News