ಶೇ. 30ರಷ್ಟು ಇವಿಎಂಗಳಲ್ಲಿ ದೋಷ : ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆಕ್ರೋಶ

Update: 2019-04-11 07:46 GMT

ಹೈದರಾಬಾದ್, ಎ. 11 : ಆಂಧ್ರ ಪ್ರದೇಶದ ಎಲ್ಲಾ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು ಇಂದು ನಡೆಯುತ್ತಿರುವ ಸಂದರ್ಭದಲ್ಲಿ ಶೇ 30ರಷ್ಟು ಇವಿಎಂಗಳು ಬೆಳಗ್ಗೆ 10 ಗಂಟೆ ತನಕ ಕಾರ್ಯನಿರ್ವಹಿಸಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಕನಿಷ್ಠ ಶೇ 25ರಷ್ಟು ವಿವಿಪ್ಯಾಟ್ ಯಂತ್ರಗಳ ಚೀಟಿಯನ್ನು ಇವಿಎಂ ಮಾಹಿತಿಯೊಂದಿಗೆ ತಾಳೆ ನೋಡುವಂತೆ ಕೋರಿ ತಾವು ಸುಪ್ರೀಂ ಕೋರ್ಟಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. 

ಸುಪ್ರೀಂ ಕೋರ್ಟ್ ಇತ್ತೀಚೆಗೆ ಪ್ರತಿ ಕ್ಷೇತ್ರದ ಐದು ವಿವಿಪ್ಯಾಟ್ ಯಂತ್ರಗಳ ಚೀಟಿಗಳನ್ನು ಇವಿಎಂ ಮತಗಳ ಜತೆ ತಾಳೆ ನೋಡುವಂತೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

''ಇವಿಎಂಗಳನ್ನು ತಿರುಚುವ ಸಾಧ್ಯತೆಯಿರುವುದರಿಂದ ಮತಪತ್ರಗಳ ಬಳಕೆ ಮಾಡಬೇಕೆಂದು ನಾನು ಆಗ್ರಹಿಸಿದ್ದೆ ಆದರೆ ಚುನಾವಣಾ ಆಯೋಗ ಅದರತ್ತ ಗಮನ ಹರಿಸಿಲ್ಲ,'' ಎಂದು ಅವರು ಹೇಳಿದರು.

ಇಂದು ಬೆಳಿಗ್ಗೆ ಗುಂಟೂರು ಜಿಲ್ಲೆಯ ಅಮರಾವತಿಯ ವುಂಡುವಳ್ಳಿ ಮತಗಟ್ಟೆಯಲ್ಲಿ ತಮ್ಮ ಪತ್ನಿ ಭುವನೇಶ್ವರಿ, ಪುತ್ರ ನಾರಾ ಲೋಕೇಶ್ ಹಾಗೂ ಸೊಸೆ ನಾರಾ ಬ್ರಾಹ್ಮಣಿ ಜತೆಗೆ ಅವರು  ಮತ ಚಲಾಯಿಸಿದರು. ನಾರಾ ಲೋಕೇಶ್ ಮಂಗಳಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಆಂಧ್ರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ತಾಂತ್ರಿಕ ದೋಷಗಳಿಂದ ಇವಿಎಂಗಳು ಕಾರ್ಯಾಚರಿಸದೇ ಇರುವ ಬಗ್ಗೆ ಮಾಹಿತಿಯಿದೆ.  ಅನಂತಪುರ್ ಎಂಬಲ್ಲಿ ಬೆಳಿಗ್ಗೆ 9 ಗಂಟೆ ತನಕ ಮತದಾನ ಆರಂಭವಾಗಿರಲಿಲ್ಲ. ಗುಂಟೂರು, ಕಡನ ಹಾಗೂ ಕುರ್ನಾಲ್ ನಲ್ಲಿನ ಮತಗಟ್ಟೆಗಳಲ್ಲೂ ಇವಿಎಂ ದೋಷಗಳು ಸಮಸ್ಯೆ ಸೃಷ್ಟಿಸಿದ್ದವು ಎಂದರು.

ಮುಖ್ಯ ಚುನಾವಣಾ ಅಧಿಕಾರಿ ಗೋಪಾಲ ಕೃಷ್ಣ ದ್ವಿವೇದಿ ಸ್ವತಃ ತಡೆಪಳ್ಳಿ ಪಟ್ಟಣದ ಕ್ರಿಶ್ಚಿಯನ್ ಪೇಟ ಮುನಿಸಿಪಲ್ ಹೈಸ್ಕೂಲಿನ ಮತಗಟ್ಟೆಯಲ್ಲಿ ಮತಯಂತ್ರದ ದೋಷದಿಂದ  ಮತ ಚಲಾಯಿಸಲು ಸಾಧ್ಯವಾಗದೇ ಇದ್ದ ಘಟನೆ ನಡೆದಿದೆ.  ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದೇ ಇರುವುದಕ್ಕೆ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಬಳಸಲಾಗುತ್ತಿರುವ 45,000 ಇವಿಎಂಗಳ ಪೈಕಿ ಕೇವಲ 362 ಯಂತ್ರಗಳಲ್ಲಿ ದೋಷ ಕಂಡು ಬಂದಿದೆ ಎಂದು ನಂತರ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News