ಬುರ್ಖಾಧಾರಿ ಮತದಾರರ ಮುಖ ಪರಿಶೀಲಿಸಬೇಕು ಎಂದ ಬಿಜೆಪಿ ಅಭ್ಯರ್ಥಿ ಸಂಜೀವ್ ಬಲ್ಯನ್
Update: 2019-04-11 13:31 IST
ಲಕ್ನೋ, ಎ.11: ತಮ್ಮ ಲೋಕಸಭಾ ಕ್ಷೇತ್ರವಾದ ಮುಝಫ್ಫರ್ ನಗರದಲ್ಲಿ ಮತಗಳನ್ನು ಮೋಸದಿಂದ ಚಲಾಯಿಸಲಾಗುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಸಂಜೀವ್ ಬಲ್ಯನ್ ಆರೋಪಿಸಿದ್ದಾರೆ. ಬುರ್ಖಾಧಾರಿ ಮತದಾರರ ಮುಖಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿಸುವ ಕೆಲಸ ಮಾಡುತ್ತಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಬುರ್ಖಾಧಾರಿ ಮತದಾರರ ಮುಖಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿರುವ ಅವರು ತಮ್ಮ ದೂರಿನ ಬಗ್ಗೆ ತನಿಖೆ ನಡೆಸದೇ ಇದ್ದರೆ ತಾವು ಮರು ಮತದಾನಕ್ಕೆ ಆಗ್ರಹಿಸುವುದಾಗಿ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.
ಬಲ್ಯನ್ ಅವರು ಮುಝಫ್ಫರನಗರದಲ್ಲಿ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಅಜಿತ್ ಸಿಂಗ್ ಅವರನ್ನು ಎದುರಿಸುತ್ತಿದ್ದಾರೆ. ಮುಝಫ್ಫರ್ ನಗರ ಮತೀಯ ಸೂಕ್ಷ್ಮ ಕ್ಷೇತ್ರವಾಗಿದೆ.