ಮತದಾನದ ವೇಳೆ ಟಿಡಿಪಿ-ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ: ಇಬ್ಬರು ಮೃತ್ಯು

Update: 2019-04-11 15:58 GMT

ಹೈದರಾಬಾದ್, ಎ. 11: ಆಂಧ್ರಪ್ರದೇಶದ ತಾಡಿಪಟ್ರಿಯಲ್ಲಿ ಗುರುವಾರ ಸಂಭವಿಸಿದ ಚುನಾವಣಾ ಸಂಬಂಧಿ ಹಿಂಸಾಚಾರದಲ್ಲಿ ತೆಲುಗುದೇಶಂ ಪಕ್ಷ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ.

ಬಣ ರಾಜಕೀಯಕ್ಕೆ ಸಾಕ್ಷಿಯಾಗಿರುವ ಅನಂತಪುರ ಜಿಲ್ಲೆಯ ತಾಡಿಪಟ್ರಿ ಕ್ಷೇತ್ರದ ಮೀರಾಪುರಂ ಗ್ರಾಮದಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರೊಂದಿಗಿನ ಘರ್ಷಣೆಯಲ್ಲಿ ಟಿಡಿಪಿ ಕಾರ್ಯಕರ್ತ ಸಿದ್ಧ ಭಾಸ್ಕರ ರೆಡ್ಡಿ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೈಎಸ್‌ಆರ್ ಕಾಂಗ್ರೆಸ್‌ನ ಕಾರ್ಯಕರ್ತ ಪುಲ್ಲಾ ರೆಡ್ಡಿ ಅನಂತರ ಮೃತಪಟ್ಟಿದ್ದಾರೆ ಎಂದು ಪಕ್ಷಗಳ ಮೂಲಗಳು ತಿಳಿಸಿವೆ.

ಎರಡೂ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಯಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದರು. ಘರ್ಷಣೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ಹಿಂಸಾಚಾರದಲ್ಲಿ ಕನಿಷ್ಠ ಇಬ್ಬರು ಗಾಯಗೊಂಡರು.

 ಕಡಪ ಜಿಲ್ಲೆಯ ಜಮ್ಮಲಮಡುಗುನಲ್ಲಿ ವೈರಿ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟದಲ್ಲಿ ತೊಡಗಿದರು. ಗುಂಟೂರು ಜಿಲ್ಲೆಯ ಯಲ್ಲಮಂಡದಲ್ಲಿ ಟಿಡಿಪಿ ಕಾರ್ಯಕರ್ತರು ಕಾರಿನ ಮೇಲೆ ದಾಳಿ ನಡೆಸಿದ ಪರಿಣಾಮ ನರಸರಾವ್‌ಪೇಟ್ ವಿಧಾನ ಸಭಾ ಕ್ಷೇತ್ರದ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಗೋಪಿರೆಡ್ಡಿ ಶ್ರೀನಿವಾಸ್ ರೆಡ್ಡಿ ಗಾಯಗೊಂಡರು.

 ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಬಳಿಕ ಆಂಧ್ರಪ್ರದೇಶದ ವಿಧಾನ ಸಭೆ ಸ್ಪೀಕರ್ ಹಾಗೂ ಗುಂಟೂರಿನ ಸಟ್ಟೇನಪಲ್ಲಿ ಟಿಡಿಪಿ ಅಭ್ಯರ್ಥಿ ಕೊಡೆಲಾ ಶಿವಪ್ರಸಾದ್ ರಾವ್ ಇನಿಮೆಟ್ಲಾ ಗ್ರಾಮದಲ್ಲಿರುವ ಮತಗಟ್ಟೆ ಒಳಗೆ ಪ್ರವೇಶಿಸಿ ಚಿಲಕ ಹಾಕಿಕೊಂಡರು. ವೈಎಸ್‌ಆರ್‌ಸಿಪಿ ಏಜೆಂಟರು ಇದನ್ನು ಪ್ರತಿಭಟಿಸಿದರು ಹಾಗೂ ಘೋಷಣೆಗಳನ್ನು ಕೂಗಿದರು. ಪೊಲೀಸರು ಕೊಡೆಲಾ ಅವರನ್ನು ಬಲವಂತವಾಗಿ ಹೊರಗೆ ಕರೆದು ತಂದರು.

 ಚಿತ್ತೂರು ಜಿಲ್ಲೆಯ ಬಂಡಾರ್ಲಪಲ್ಲಿ ಗ್ರಾಮದಲ್ಲಿ ಟಿಡಿಪಿ ಹಾಗೂ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಕಡಪ ಜಿಲ್ಲೆಯ ಜಮ್ಮಲಮಡಗುನಲ್ಲಿ ಟಿಡಿಪಿ ಹಾಗೂ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಪರಿಣಾಮ ಇಬ್ಬರು ಮಹಿಳಾ ಮತದಾರರು ಗಾಯಗೊಂಡರು.

ಕುರ್ನೂಲ್ ಜಿಲ್ಲೆಯ ಅಹೋಬಿಲಮ್‌ನಲ್ಲಿ ಟಿಡಿಪಿ ಹಾಗೂ ವೈಎಸ್‌ಆರ್‌ಸಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ಬಗ್ಗೆ ವರದಿಯಾಗಿದೆ. ಆಂಧ್ರಪ್ರದೇಶದ ಸಚಿವ ಭೂಮಾ ಅಖಿಲಾ ಪ್ರಿಯಾ ಅವರ ಪತಿ ಹಾಗೂ ಸಹೋದರಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News