7 ಬಾರಿ ರಾಹುಲ್ ತಲೆಗೆ ಸ್ನೈಪರ್ ಗನ್ ನ ಲೇಸರ್ ಗುರಿಯಿರಿಸಿತ್ತು: ಗೃಹ ಸಚಿವರಿಗೆ ಕಾಂಗ್ರೆಸ್ ದೂರು

Update: 2019-04-11 08:28 GMT

ಹೊಸದಿಲ್ಲಿ, ಎ.11: ಉತ್ತರ ಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ವಾರ ತಮ್ಮ ನಾಮಪತ್ರ ಸಲ್ಲಿಸಲು ತೆರಳಿದ್ದ ಸಂದರ್ಭ ಅವರಿಗೆ ಒದಗಿಸಲಾಗಿದ್ದ ಭದ್ರತಾ ವ್ಯವಸ್ಥೆಯಲ್ಲಿ ಲೋಪವುಂಟಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಮೂವರು ಹಿರಿಯ ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದು, ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದ ಜತೆ ಮಾತನಾಡುತ್ತಿರುವ ವೇಳೆ ಹಸಿರು ಬಣ್ಣದ ಲೇಸರ್ ರಾಹುಲ್ ಗಾಂಧಿಯ ಎಡ ಹಣೆಯ ಪಕ್ಕ ಏಳು ಬಾರಿ ಗುರಿಯಿರಿಸಿತ್ತು, ಇದು ಸ್ನೈಪರ್ ಬಂದೂಕಿನಿಂದಾಗಿರಬಹುದು ಎಂದು ಅವರು ದೂರಿದ್ದಾರೆ.

ರಾಹುಲ್ ಅವರ ಈ ನಿರ್ದಿಷ್ಟ ಮಾಧ್ಯಮ ಸಂವಾದದ ವೀಡಿಯೋ ಕ್ಲಿಪ್ಪಿಂಗ್ ಅನ್ನೂ ಕಾಂಗ್ರೆಸ್ ಗೃಹ ಸಚಿವರಿಗೆ ನೀಡಿದ್ದು ಪತ್ರಕ್ಕೆ ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಜೈರಾಂ ರಮೇಶ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಸಹಿ ಹಾಕಿದ್ದಾರೆ.

“ಕಾಂಗ್ರೆಸ್ ಅಧ್ಯಕ್ಷರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಯೋಚನೆಯಿಂದಲೇ ನಮಗೆಲ್ಲರಿಗೂ ಅತ್ಯಂತ ಆಘಾತವಾಗಿದೆ'' ಎಂದು ಪತ್ರದಲ್ಲಿ ಬರೆದಿರುವ ನಾಯಕರು ರಾಹುಲ್ ತಂದೆ ರಾಜೀವ್ ಗಾಂಧಿ ಹಾಗೂ ಅಜ್ಜಿ ಇಂದಿರಾ ಗಾಂಧಿಯ ಹತ್ಯೆ ಘಟನೆಗಳನ್ನು ಉಲ್ಲೇಖಿಸಿ, “ರಾಹುಲ್ ಅವರ ಭದ್ರತೆಯಲ್ಲಿ ಲೋಪ ಬಹಳ ಕಳವಳಕಾರಿ” ಎಂದಿದ್ದಾರೆ.

“ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇದು ರಾಹುಲ್ ಅವರಿಗೆ ಬಾಹ್ಯ ರಕ್ಷಣೆ ಒದಗಿಸುವ ಜವಾಬ್ದಾರಿ ಹೊತ್ತಿರುವ ಉತ್ತರ ಪ್ರದೇಶ ಸರಕಾರದ ಕರ್ತವ್ಯ ಲೋಪವೂ ಆಗಿದೆ” ಎಂದು ಪತ್ರದಲ್ಲಿ ಬರೆದಿರುವ ಕಾಂಗ್ರೆಸ್ ನಾಯಕರು, ರಾಹುಲ್ ಅವರು ಅತ್ಯಂತ ಹೆಚ್ಚು ಆಪಾಯ ಎದುರಿಸುತ್ತಿರುವವರು ಆಗಿರುವುದರಿಂದ ಅವರ ಭದ್ರತೆಯ ಜವಾಬ್ದಾರಿ ಮೊದಲು ಕೇಂದ್ರ ಸರಕಾರ ಮತ್ತು ಗೃಹ ಸಚಿವಾಲಯದ್ದಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News