ಆದಿವಾಸಿಗಳನ್ನೇಕೆ ಅಡವಿಯಿಂದ ದೂರ ಮಾಡುತ್ತೀರಿ?

Update: 2019-04-11 18:31 GMT

ಅಡವಿ ಹಕ್ಕುಗಳ ಕಾನೂನನ್ನು ಸವಾಲ್ ಮಾಡುತ್ತಾ ವನ್ಯಜೀವಿ ರಕ್ಷಕರು ಹಾಕಿದ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ 2019 ಫೆಬ್ರವರಿ 13ರಂದು ಆರ್ಡರ್ ನೀಡಿದೆ. ಇದರಿಂದ ಲಕ್ಷಾಂತರ ಮಂದಿ ಆದಿವಾಸಿಗಳು, ಇತರ ವನವಾಸಿಗಳ ಭೂಮಿಗಳಿಗೆ, ವಸತಿಗಳಿಗೆ ಜೀವನಾಧಾರಕ್ಕೆ ಭಾರೀ ಏಟು ತಗಲಲಿದೆ. ಅಡವಿ ಹಕ್ಕುಗಳ ಕಾನೂನು ಜಾರಿ ಮಾಡುವ ಜವಾಬ್ದಾರಿ ತೆಗೆದುಕೊಂಡ ಕೇಂದ್ರ ಸರಕಾರ ಈ ಕೇಸ್‌ನಲ್ಲಿ ಪ್ರಜೆಗಳ ಪರವಾಗಿ ವಾದಿಸದೆ ಹೋಗಿರುವುದು ಶೋಚನೀಯ. ರಾಜ್ಯ ಸರಕಾರಗಳು ಕೂಡಾ ಈ ಕಾನೂನನ್ನು ಜಾರಿ ಮಾಡುವುದರಲ್ಲಿ ಪೂರ್ತಿ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ.ವನ್ಯಜೀವಿ ರಕ್ಷಕರು, ಅರಣ್ಯಾಧಿಕಾರಿಗಳು ಹೇಳಿದ್ದೇ ನಿಜ ಎಂದು ಸರಕಾರಗಳು, ಕೋರ್ಟ್ ಭಾವಿಸುತ್ತಿರುವ ಕಾರಣದಿಂದ ಆದಿವಾಸಿಗಳ ಅಸ್ತಿತ್ವಕ್ಕೆ ಅಪಾಯ ಎದುರಾಗುತ್ತದೆ. 21 ರಾಜ್ಯಗಳ ಸರಕಾರಗಳನ್ನು ಅಡವಿ ಕಾನೂನುಗಳಡಿ ಪ್ರಜೆಗಳು ಇಟ್ಟುಕೊಂಡ ‘ಹಕ್ಕುಗಳ’ ಕ್ಲೇಮ್ಸ್, ಅವುಗಳ ಸ್ಥಿತಿಗತಿಗಳ ಮೇಲೆ ವರದಿ ಕೊಡಿ ಎಂದು ಆದೇಶಿಸುತ್ತಲೇ ಕ್ಲೇಮ್ಸ್ ತಿರಸ್ಕಾರಕ್ಕೆ ಗುರಿಯಾದವರನ್ನು ಆ ಸ್ಥಳದಿಂದ ತೊಲಗಿಸಿ ಎಂದು ಸುಪ್ರೀಂಕೋರ್ಟ್ ಆ ಆದೇಶದಲ್ಲಿ ಸೂಚಿಸಿದೆ. ಇಡೀ ದೇಶದಲ್ಲಿ ಸುಮಾರು 10 ಲಕ್ಷ ಮಂದಿಯ ಬದುಕುಗಳನ್ನು ಪ್ರಶ್ನಾರ್ಥಕಗೊಳಿಸಿದೆ.

ಸುಮಾರು 17 ವರ್ಷಗಳ ಹಿಂದೆ 2002ರಲ್ಲಿ ಸುಪ್ರೀಂಕೋರ್ಟ್ ಗೋದಾ ವರ್ಮನ್ ವರ್ಸಸ್ ಭಾರತ ಸರಕಾರದ ಕೇಸ್‌ನಲ್ಲಿ ಅಡವಿಯಲ್ಲಿ ಹಕ್ಕುಗಳನ್ನು ಕ್ರಮಬದ್ಧೀಕರಿಸದೇ ವಾಸಿಸುತ್ತಿರುವ ಪ್ರಜೆಗಳನ್ನು ತೊಲಗಿಸಬೇಕೆಂಬ ಸರ್ಕ್ಯುಲರ್ ಕೊಟ್ಟಾಗ ಸುಮಾರು 50 ಲಕ್ಷ ಬದುಕುಗಳು ಆತಂಕದಲ್ಲಿ ಬಿದ್ದವು. ಸರ್ಕ್ಯುಲರ್ ಬಂದ ತಕ್ಷಣವೇ ದೇಶದಲ್ಲಿ ಕೆಲವು ಕಡೆ ಅರಣ್ಯ ಇಲಾಖೆ ಆದಿವಾಸಿಗಳ ಮೇಲೆ ನಡೆಸಿದ ದೌರ್ಜನ್ಯಗಳು ಬೆಳಕಿಗೆ ಬಂದವು. ತಲೆ ತಲೆಮಾರುಗಳಿಂದ ಅಡವಿಯಲ್ಲಿ ವಾಸಿಸುತ್ತಿರುವ, ಅರಣ್ಯಾಧಾರಿತ ಬದುಕು ನಡೆಸುತ್ತಿರುವ ಪ್ರಜೆಗಳು ಭಾರತ ಇತಿಹಾಸದಲ್ಲಿ ಎಂದೂ ಇಲ್ಲದಷ್ಟು ಅಭದ್ರತೆಗೆ ಗುರಿಯಾಗಿದ್ದಾರೆ. ದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಏರ್ಪಟ್ಟು ಅಡವಿ ಹಕ್ಕುಗಳಿಗೋಸ್ಕರ ಇವರೆಲ್ಲಾ ಐತಿಹಾಸಿಕ ಆಂದೋಲನ ನಡೆಸಿದ್ದಾರೆ. ಈ ಜನಾಂದೋಲನದ ಫಲವಾಗಿ 2006ರಲ್ಲಿ ಭಾರತ ಸರಕಾರ ಗಿರಿಜನರು ಇತರ ಸಾಂಪ್ರದಾಯಿಕ ವನವಾಸಿಗಳಿಗೋಸ್ಕರ ‘ಅಡವಿ ಹಕ್ಕುಗಳು ಗುರುತಿಸುವ ಹಕ್ಕು-2006’ನ್ನು ಪಾರ್ಲಿಮೆಂಟ್ ಮೂಲಕ ಅನುಮೋದಿಸಿ ಪ್ರಕಟಿಸಿತು. ರಕ್ಷಿತಾರಣ್ಯಗಳಾದರೂ, ರಿಸರ್ವ್ ಅರಣ್ಯಗಳಾದರೂ, ಅಭಯಾರಣ್ಯಗಳಾ ದರೂ, ರಾಷ್ಟ್ರೀಯ ಪಾರ್ಕ್‌ಗಳಾದರೂ 2005 ಡಿಸೆಂಬರ್‌ನ ಹಿಂದಿನಿಂದಲೂ ಅವುಗಳಲ್ಲಿ ವಾಸಿಸುತ್ತಿರುವ ಆದಿವಾಸಿಗಳು ಇತರ ಅಡವಿ ನಿವಾಸಿಗಳಿಗೆ ಹಕ್ಕುಗಳನ್ನು ಮಾನ್ಯ ಮಾಡಿರೆಂದು ಈ ಕಾನೂನು ಹೇಳುತ್ತದೆ. ಭಾರತೀಯ ಇತಿಹಾಸದಲ್ಲಿ ಆದಿವಾಸಿಗಳಿಗೆ ಅನ್ಯಾಯ ನಡೆದಿದೆಯಾದ್ದರಿಂದ ಈ ಕಾನೂನು ಪ್ರಜೆಗಳಿಗೆ ನ್ಯಾಯ ಕೊಡಿಸುತ್ತದೆ ಎಂದು ಈ ಕಾನೂನಿನಲ್ಲೇ ಹೇಳಲಾಗಿದೆ. ವಸತಿ ಹಕ್ಕುಗಳು, ಸಾಗುವಳಿ ಮಾಡುವ ಹಕ್ಕುಗಳು, ಸಮಸ್ತ ಸಂಪಸ್ಮೂಲಗಳ ಮೇಲೆ ಹಕ್ಕುಗಳಂಥ 13 ರೀತಿಯ ಹಕ್ಕುಗಳನ್ನು ಗುರುತಿಸಿ, ಅನುಮೋದಿಸಿ ದಾಖಲಿಸಬೇಕೆಂದು ಈ ಕಾನೂನು ಹೇಳುತ್ತದೆ. 2008ರಿಂದ ಜಾರಿಯಾಗುತ್ತಿರುವ ಈ ಕಾನೂನಿನಿಂದ ಅಡವಿ ಇಲಾಖೆಗಳು, ಸರಕಾರದ ಅಧಿಕಾರದಿಂದ ಮುಕ್ತಿ ಹೊಂದಿ ತಾವು ಸ್ವತಂತ್ರವಾಗಿ ಜೀವಿಸಬಲ್ಲೆವು ಎಂಬ ಆಸೆ ಅಡವಿಯಲ್ಲಿ, ಅಡವಿಯೊಂದಿಗೆ, ಅಡವಿಯ ಮೇಲೆ ಆಧಾರಗೊಂಡು ಜೀವಿಸುತ್ತಿರುವ ಪ್ರಜೆಗಳೆಲ್ಲರಿಗೆ ಉಂಟಾಯಿತು.

ಅರಣ್ಯ ಎಂದರೆ ಮರಗಳು, ಪ್ರಾಣಿಗಳು ಅವುಗಳನ್ನು ಕಾಪಾಡುವ ಜವಾಬ್ದಾರಿ ನಮ್ಮದೇ ಎಂದು ಅರಣ್ಯದ ಮೇಲೆ ಅಧಿಕಾರವನ್ನು ಸ್ಥಾಪಿಸುವ ಅರಣ್ಯ ಇಲಾಖೆ ಈ ಕಾನೂನನ್ನು ಮನಃಪೂರ್ವಕವಾಗಿ ಸ್ವಾಗತಿಸಲಿಲ್ಲ. ವನ್ಯ ಜೀವಿಗಳಿಗೆ ಅಪಾಯ ಎಂದು ಭಾವಿಸಿದ ವನ್ಯಜೀವಿ ರಕ್ಷಕರು ಕೂಡಾ ಈ ಕಾನೂನನ್ನು ಕೊನೆಗಾಣಿಸುವ ಪ್ರಯತ್ನ, ಪ್ರಚಾರಗಳನ್ನು ಕಾನೂನು ಜಾರಿಯಾದ ದಿನವೇ ಆರಂಭಿಸಿದರು. ಕೋರ್ಟ್‌ನಲ್ಲಿ ಕೇಸ್ ಹಾಕಿದರು. ಅರಣ್ಯ ಹಕ್ಕುಗಳ ಗುರುತಿಸುವ ಕಾನೂನಿನ ಮೂಲಕ ಉಂಟಾಗುವ ನಷ್ಟಗಳ ಕುರಿತು ಅವಾಸ್ತವಿಕ ಪ್ರಚಾರ ಕೈಗೊಂಡರು.

ವನವಾಸಿ ಆಂದೋಲನಕಾರರು ಇಂತಹ ಪ್ರಚಾರಗಳಿಗೆ ಸೊಪ್ಪು ಹಾಕದೆ ಅತ್ತ ಕೋರ್ಟಿನಲ್ಲಿ ಕಾನೂನಿನ ಆವಶ್ಯಕತೆ ಕುರಿತು ವಾದಿಸುತ್ತಾ, ಇತ್ತ ಗ್ರಾಮಗಳಲ್ಲಿ ಆದಿವಾಸಿ ಪ್ರಜೆಗಳಲ್ಲಿ ಜಾಗೃತಿ ಮೂಡಿಸಿದರು. ಎರಡೂ ತೆಲುಗು ರಾಜ್ಯಗಳಲ್ಲಿ ಅರಣ್ಯ ಹಕ್ಕುಗಳನ್ನು ಗುರುತಿಸುವ ಕಾನೂನು ಜಾರಿಗೋಸ್ಕರ ಚಳವಳಿ ನಡೆಸಿದರು.

 ಈ ಕಾನೂನಿನ ಮೂಲಕ ವ್ಯಕ್ತಿಗತ, ಸಾಮೂಹಿಕ ಕ್ಲೇಮ್ಸ್ ಇಟ್ಟುಕೊಳ್ಳಬೇಕು. ಗ್ರಾಮ ಸಭೆಗಳನ್ನು ಯಶಸ್ವಿಯಾಗಿ ಉಪಯೋಗಿಸಿ ತೀರ್ಮಾನಗಳನ್ನು ಮಾಡಬೇಕು. ಗ್ರಾಮ ಅರಣ್ಯ ಗಡಿಗಳನ್ನು ಗುರುತಿಸಿ, ಅದರಲ್ಲಿನ ಭೂಭಾಗದ ಮೇಲೆ ಸಾಮೂಹಿಕ ಹಕ್ಕುಗಳಿಗೋಸ್ಕರ ಕ್ಲೇಮ್ಸ್ ಮಾಡಿಕೊಳ್ಳಬೇಕು. ಈ ಕಾನೂನು ಜಾರಿಯ ಜವಾಬ್ದಾರಿ ಪೂರ್ತಿಯಾಗಿ ಗಿರಿಜನ ಕಲ್ಯಾಣ ಇಲಾಖೆಯದು.

ಆದರೆ ಪ್ರಜೆಗಳಿಗೆ ಅನುಕೂಲವಾಗಿ ಪ್ರಜೆಗಳ ಪರವಾಗಿ ನಿಲ್ಲುವ ಗಿರಿಜನ ಕಲ್ಯಾಣ ಇಲಾಖೆ ಈ ಕಾನೂನನ್ನು ಯಶಸ್ವಿಯಾಗಿ ಜಾರಿ ಮಾಡಿತೆ? ಮೀಸಲು ಅರಣ್ಯಗಳಲ್ಲಿ ಸಾಗುವಳಿ ಮಾಡುತ್ತಿದ್ದವರು, ಅಭಯಾರಣ್ಯದಲ್ಲಿದ್ದ ಪ್ರಜೆಗಳು, ಡ್ಯಾಂಗಳು, ಮೈನಿಂಗ್‌ಗಳಿಂದ ನಿರಾಶ್ರಿತರಾದ ಆದಿವಾಸಿಗಳು ಕಾನೂನಿಲ್ಲಿ ಹೇಳಿದಂತೆ ಕ್ಲೇಮ್ಸ್ ಇಟ್ಟುಕೊಂಡರು. ಸಮಷ್ಟಿ ಅರಣ್ಯ ಸಂಪನ್ಮೂಲಗಳ ಮೇಲೆ ಅರಣ್ಯ ರಕ್ಷಣಾ ಸಮಿತಿಗಳಿಗಲ್ಲದೆ ಗ್ರಾಮಸಭೆಗಳಿಗೆ ಹಕ್ಕುಗಳಿರಬೇಕೆಂದು ಸರಕಾರಗಳ ಮೇಲೆ ಒತ್ತಡ ತಂದರು. ಅರಣ್ಯ ರಕ್ಷಣಾ ಸಮಿತಿಗಳನ್ನು ರದ್ದು ಮಾಡಿ, ಅರಣ್ಯ ರಕ್ಷಣೆಯ ಜವಾಬ್ದಾರಿ ಗ್ರಾಮಸಭೆಗೆ ಬಿಡಬೇಕೆಂದು ಹಟಹಿಡಿದರು.

ಇಷ್ಟು ದೊಡ್ಡದಾಗಿ ಚಳವಳಿ ಮುಂದುವರಿದರೂ ಅರಣ್ಯ ಇಲಾಖೆ ಹೆಜ್ಜೆ ಹೆಜ್ಜೆಗೂ ಅಡ್ಡಿ ಮಾಡುತ್ತಲೇ ಬಂದಿದೆ. ಕಾನೂನು ರೀತ್ಯಾ ಪ್ರಜೆಗಳು 10 ಎಕರೆಗಳ ಒಳಗೆ ಎಷ್ಟು ಎಕರೆಗಳ ಸಾಗುವಳಿ ಮಾಡಿಕೊಂಡರೋ, ಅಷ್ಟು ಎಕರೆಗಳ ಮೇಲೆ ಹಕ್ಕುಗಳಿಗೋಸ್ಕರ ಅರ್ಜಿ ಹಾಕಿಕೊಂಡರು. ಆದರೆ ಸರ್ವೇ ಗಳನ್ನು ತಪ್ಪುಗಳ ಕಂತೆಯಾಗಿ ಬದಲಿಸಲಾಯಿತು. ಅರಣ್ಯ ಇಲಾಖೆ ಏನನ್ನು ಹೇಳಿದರೂ ಅದೇ ಸರಿ ಎಂಬಂತೆ ಗಿರಿಜನ ಕಲ್ಯಾಣ ಇಲಾಖೆ ವರ್ತಿಸಿತು. ಜನರ ಪರವಾಗಿ ಕೆಲಸ ಮಾಡಬೇಕಾದ ಗಿರಿಜನ ಕಲ್ಯಾಣ ಇಲಾಖೆ ಪ್ರೇಕ್ಷಕನ ಪಾತ್ರ ವಹಿಸಿತು.

ಹಾಗಾಗಿ ಐದು ಎಕರೆಗಳ ಭೂಮಿ ಇರುವವರಿಗೆ 50 ಸೆಂಟ್ಸ್ ಭೂಮಿ ಬಂದಿತು. ಆತಂಕಗೊಂಡ ಪ್ರಜೆಗಳು ರೀ ಸರ್ವೇಗೋಸ್ಕರ ಮತ್ತೆ ಹೋರಾಟ ಮಾಡಿದರು. ಅಡವಿ ಹಕ್ಕುಗಳನ್ನು ಗುರುತಿಸುವ ಕಾನೂನಿನ ಮೂಲಕ ಗ್ರಾಮಸಭೆಗಳಿಗೆ ಮುಖ್ಯ ಪಾತ್ರ ಸಿಕ್ಕಿತು. ಆದರೆ ಗ್ರಾಮ ಸಭೆಗಳ ಮಹತ್ವ ಇಲ್ಲದಂತಾಗಿಸಲು ಅಧಿಕಾರಿಗಳು ಗಟ್ಟಿ ಪ್ರಯತ್ನ ಮಾಡಿದರು. ಅಡವಿ ನಾಶ ಆಗಿಹೋಗಿದೆ ಎಂದು ಲೆಕ್ಕಗಳ ತೋರಿಸುತ್ತಾ, ಅರಣ್ಯ ಹಕ್ಕುಗಳ ಕಾನೂನು ಸಮರ್ಪಕವಾಗಿ ಜಾರಿ ಆಗದಂತೆ ಮಾಡುವುದರಲ್ಲಿ ಅರಣ್ಯ ಇಲಾಖೆ ಮೇಲುಗೈ ಸಾಧಿಸಿತು.

ಕ್ಲೇಮ್ಸ್ ಹಾಕುವುದರಲ್ಲಿ ಸಕ್ರಿಯ ಪಾತ್ರ ವಹಿಸಿದ ಆದಿವಾಸಿ ನಾಯಕರು ಕಾನೂನು ಮೂಲಕ ನ್ಯಾಯ ಸಿಗುವವರೆಗೂ ರಾಜಕೀಯ ಆಂದೋಲನವನ್ನು ನಿರ್ಮಿಸದೇ ಹೋಗಿದ್ದು ವಿಷಾದಕರ. 2008ರಿಂದ ವನ್ಯಜೀವಿ ರಕ್ಷಕರು ಸುಪ್ರಿಂಕೋರ್ಟ್‌ನಲ್ಲಿ ಈ ಕಾನೂನನ್ನು ನಿರ್ವೀರ್ಯಗೊಳಿಸುವುದಕ್ಕಾಗಿ ಪೆಟಿಶನ್ ಹಾಕಿದರು. ಆದರೆ ಕೇಂದ್ರ, ರಾಜ್ಯ ಸರಕಾರಗಳು ತಾವು ತಂದ ಕಾನೂನನ್ನು ತಾವೇ ಗೌರವಿಸದೆ ‘ವನ್ಯಜೀವಿ ರಕ್ಷಕ’ರು ಮಾಡುತ್ತಿರುವ ವಾದಗಳಿಗೆ ಉತ್ತರ ಹೇಳುವುದಷ್ಟಕ್ಕೇ ಸೀಮಿತರಾಗಿದ್ದಾರೆ. ಯಾವ ಪ್ರಜೆಗಳಿಗೆ ಈ ಕಾನೂನಿನ ಮೂಲಕ ನ್ಯಾಯ ಸಿಗಬೇಕೋ ಅವರ ಪರವಾಗಿ ಗಟ್ಟಿಯಾಗಿ ವಾದಿಸದೆ, ಈ ಕಾನೂನನ್ನು ಎಷ್ಟು ಬೇಗನೆ ನಿರ್ವೀರ್ಯಗೊಳಿಸಿದರೆ ಅಷ್ಟು ಒಳ್ಳೆಯದು ಎಂಬ ಭಾವನೆ ಸರಕಾರಕ್ಕೆ ಇರುವುದು ಖಚಿತವಾಗುತ್ತಿದೆ.

ಇತ್ತೀಚೆಗೆ ವಿವಿಧ ರಾಜ್ಯಸರಕಾರಗಳು ಅಫಿದವಿತ್ ಮೂಲಕ ಸಮರ್ಪಿಸಿದ ಆಧಾರಗಳ ಮೇರೆಗೆ ಸುಪ್ರೀಂಕೋರ್ಟ್ ಅರಣ್ಯ ಹಕ್ಕುಗಳನ್ನು ಗುರುತಿಸುವ ಕಾನೂನಿನ ಮೂಲಕ ತಿರಸ್ಕರಿಸಲ್ಪಟ್ಟ ಕ್ಲೇಮ್ಸ್‌ನಲ್ಲಿ ಇರುವವರನ್ನು ಜುಲೈ 27, 2019ಕ್ಕೆಲ್ಲಾ ತೊಲಗಿಸಬೇಕೆಂದು ಆರ್ಡರ್ ಕೊಟ್ಟಿದೆ. ಈ ಆರ್ಡರ್ ಮೂಲಕ ಸುಮಾರು 10 ಲಕ್ಷ ಮಂದಿ ತಮ್ಮ ಭೂಮಿಗಳಿಂದ ನಿರ್ವಸಿತರಾಗುತ್ತಿದ್ದಾರೆ. ಅವರನ್ನು ಅವರ ಭೂಮಿಯಿಂದ ತೊಲಗಿಸಲು ಕ್ರಮ ಕೈಗೊಳ್ಳುವ ಅವಕಾಶ ಅರಣ್ಯ ಇಲಾಖೆಗೆ ಮತ್ತೆ ಸಿಕ್ಕಂತಾಯಿತು.

ಆಂಧ್ರಪ್ರದೇಶದಲ್ಲಿ 66,351 ಕ್ಲೇಮ್ಸ್, ತೆಲಂಗಾಣದಲ್ಲಿ 82,875 ಕ್ಲೇಮ್ಸ್ ತಿರಸ್ಕೃತವಾಗಿರುವುದಾಗಿ ಎರಡು ರಾಜ್ಯ ಸರಕಾರಗಳು ಅಫಿದವಿತ್‌ನಲ್ಲಿ ಹೇಳಿಕೊಂಡಿವೆ. ಅಂದರೆ ಸುಮಾರು ಒಂದೂವರೆ ಲಕ್ಷ ಪ್ರಜೆಗಳ ಬದುಕು ಮತ್ತೆ ತೀವ್ರ ದಮನಕ್ಕೆ ಗುರಿಯಾಗುತ್ತಿವೆ. ಸುಮಾರು ಶೇ. 40 ಕ್ಲೇಮ್ಸ್ ರಿಜೆಕ್ಟ್ ಆಗಿರುವುದಾಗಿ ಸರಕಾರಗಳು ಪ್ರಕಟಿಸುತ್ತಿವೆ. ಅಂದರೆ ಅರಣ್ಯ ಹಕ್ಕುಗಳ ಕಾನೂನು ಸಮರ್ಪಕವಾಗಿ ನಡೆದಿದೆಯೇ ಎಂಬ ಸಂಶಯ ನಮಗೆ ಉಂಟಾಗದೇ ಇರದು. ಅದರಲ್ಲೂ ಐದನೇ ಶೆಡ್ಯೂಲ್ ಆಸುಪಾಸಿನಲ್ಲಿ ಆದಿವಾಸಿಗಳು ಮಾತ್ರವೆ ಕ್ಲೇಮ್ಸ್ ಹಾಕಿಕೊಂಡಿದ್ದಾರೆ. 2005ಕ್ಕೆ ಮೊದಲು ಇದ್ದಂತೇ ಆಧಾರಗಳನ್ನು ತೋರಿಸಿದ್ದಾರೆ. ಈ ಕಾರಣಗಳಿಂದ ಬೋಗಸ್‌ಗಳಿರುವ ಸಾಧ್ಯತೆ ಇಲ್ಲ. ಹಾಗಿರುವಾಗ ಕ್ಲೇಮ್ಸ್ ಏತಕ್ಕೆ ತಿರಸ್ಕರಿಸಲ್ಪಟ್ಟಿವೆಯೆಂದು ವಿವರಣೆ ಕೊಟ್ಟಿಲ್ಲ. ಕಾನೂನು ಜಾರಿಗೆ ಬೇಕಾದ ರೂಲ್ಸ್‌ಗಳಲ್ಲಿ ಅಡವಿ ಹಕ್ಕುಗಳ ಕಮಿಟಿ ಗ್ರಾಮಸಭಾ, ಸಬ್ ಡಿವಿಜನಲ್ ಕಮಿಟಿ, ಜಿಲ್ಲಾ ಕಮಿಟಿ, ರಾಜ್ಯ ಕಮಿಟಿಗಳಿಗೆ ಸ್ಪಷ್ಟವಾದ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ.

ಅಡವಿ ಹಕ್ಕುಗಳ ಗುರುತಿಸುವ ಕಾನೂನು ಪ್ರಕಾರ ತಿರಸ್ಕರಿಸಲ್ಪಟ್ಟ ಕ್ಲೇಮ್ಸ್ ಪುನಃ ಗ್ರಾಮಸಭೆಗೆ ಹೋಗಬೇಕು.ಒಬ್ಬ ಕ್ಲೇಮ್ಸ್‌ದಾರನಿಗೆ ಅರ್ಜಿ ತಿರಸ್ಕತವಾದಾಗ ಅದಕ್ಕೆ ಕಾರಣಗಳೇನೆಂದು ಸಬ್‌ಡಿವಿಜನ್ ಕಮಿಟಿ ಆನಂತರ ಜಿಲ್ಲಾ ಲೆವೆಲ್ ಕಮಿಟಿಯನ್ನು ಗ್ರಾಮಸಭೆ ಕೇಳಬೇಕು. ಕಾರಣ ತಿಳಿದುಕೊಳ್ಳಬೇಕು. ಮತ್ತೆ ಅರ್ಜಿ ಅಥವಾ ಅಫೀಲ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಬೇಕು. ತಿರಸ್ಕರಿಸಲ್ಪಟ್ಟವರು 2005ಕ್ಕಿಂತ ಮೊದಲಿನಿಂದ ಇದ್ದಲ್ಲಿ ಸೂಕ್ತ ಆಧಾರಗಳೊಂದಿಗೆ ಮತ್ತೆ ಕ್ಲೇಮ್ಸ್ ಹಾಕಿಕೊಳ್ಳಬೇಕು. ಮತ್ತೆ ಸರ್ವೇ ನಡೆಯಬೇಕು. ಕ್ಲೇಮ್ಸ್ ಇಟ್ಟುಕೊಂಡವರಿಗೆ ಪೂರ್ಣ ನ್ಯಾಯ ಸಿಗುವವರೆಗೆ ಕಾನೂನು ಪರವಾದ ಹಕ್ಕುಗಳ ಗುರುತಿಸುವ ಪ್ರಕ್ರಿಯೆ ನಡೆಯಬೇಕು.
ಈ ಪ್ರಕ್ರಿಯೆಗಳೆಲ್ಲವನ್ನು ಜಿಲ್ಲಾ ಮಟ್ಟದ ಕಮಿಟಿ ಪೂರ್ತಿ ಮಾಡಿದೆಯಾ? ಏತಕ್ಕೆ ತಿರಸ್ಕರಿಸುತ್ತಿದ್ದಾರೆಂದು ಆಯಾ ಗ್ರಾಮಗಳಲ್ಲಿ ತಿಳಿಯಪಡಿಸಲಾಗಿದೆಯೆ? ಕೋರ್ಟಿಗೆ ಈ ವಿವರಗಳನ್ನೆಲ್ಲಾ ಕೊಡಲಾಗಿದೆಯೇ? ಈ ಕಾನೂನನ್ನು ಸಮರ್ಪಕವಾಗಿ ಜಾರಿ ಮಾಡುವ ಜವಾಬ್ದಾರಿ ನೆತ್ತಿಗೇರಿಸಿಕೊಂಡ ಗಿರಿಜನರ ಕಲ್ಯಾಣ ಇಲಾಖೆ ಏಕೆ ವೌನವಾಗಿದೆ. ವನ್ಯಜೀವಿ ರಕ್ಷಕರ ಪರವಾಗಿ ವಕಾಲತ್ತು ಏಕೆ ಮಾಡುತ್ತಿದೆ? ಆದಿವಾಸಿಗಳ ಭೂ ಭಾಗದ ಶೆಡ್ಯೂಲ್ಡ್ ಪ್ರಾಂತದಲ್ಲಿ ಗೌರವದಿಂದ ಬದುಕುವ ಹಕ್ಕನ್ನು ಹೊಂದಿರುವ ಆದಿವಾಸಿಗಳು ಅವರ ಭೂಮಿಗಳಲ್ಲೇ ಆಕ್ರಮಣದಾರರಾಗಿ ಏಕೆ ಗುರುತಿಸಲ್ಪಡುತ್ತಾರೆ?
ಅಡವಿ ಹಕ್ಕುಗಳ ಗುರುತಿಸುವ ಕಾನೂನು ಸೆಕ್ಷನ್ 4(5) ಪ್ರಕಾರ ಹಕ್ಕುಗಳನ್ನು ಗುರುತಿಸುವ ಪ್ರಕ್ರಿಯೆ ಪೂರ್ತಿ ಆಗುವವರೆಗೆ ಯಾರನ್ನೂ ಅಲ್ಲಾಡಿಸುವಂತಿಲ್ಲ. ಅಡವಿ ಹಕ್ಕುಗಳನ್ನು ಗುರುತಿಸುವ ಕಾನೂನಿನಲ್ಲಿ ರಿಜೆಕ್ಟ್ ಆದವರನ್ನು ತೊಲಗಿಸಿ ಎಂದು ಎಲ್ಲೂ ಹೇಳಿಲ್ಲ. ಹಾಗಾದರೆ ಈ ಪ್ರಕ್ರಿಯೆ ಪೂರ್ತಿಯಾದ ವರದಿ ಆಯಾ ಪ್ರಜೆಗಳಿಗೆ ಏಕೆ ತಿಳಿಸಲಿಲ್ಲ? ಇಷ್ಟರೊಳಗೆ ಮರಗಳ ಪಾಲನೆ ಹೆಸರಿನಲ್ಲಿ ಈಗಾಗಲೇ ಅನೇಕ ಹಳ್ಳಿಗಳಲ್ಲಿ ಆದಿವಾಸಿಗಳ ಭೂಮಿಗಳಲ್ಲಿ ಬಲವಂತದಿಂದ ಸಸಿಗಳನ್ನು ಪೋಷಣೆ ಕೈಗೊಂಡಿದ್ದಾರೆ. ಹಕ್ಕುಗಳ ಪ್ರಕ್ರಿಯೆ ಪೂರ್ತಿ ಆಗದೆಯೆ ಸಾಗುವಳಿ ಮಾಡಿಕೊಳ್ಳುತ್ತಿರುವ ಭೂಮಿಗೆ ಪೂರ್ತಿಯಾಗಿ ಕಾನೂನು ರೀತ್ಯಾ ಹಕ್ಕುಗಳು ಬಾರದೇನೇ ಅನೇಕ ಮಂದಿ ಆದಿವಾಸಿಗಳು ಈಗಾಗಲೇ ಹಿಂಸೆಗೆ ಗುರಿಯಾಗಿದ್ದಾರೆ. ಈಗ ಕ್ಲೇಮ್ಸ್ ತಿರಸ್ಕರಿಸಲ್ಪಟ್ಟ ಸಾವಿರಾರು ಮಂದಿಯ ಪರಿಸ್ಥಿತಿ ಹೇಗಿರುತ್ತೋ ಊಹಿಸುವುದು ಕಷ್ಟವಿಲ್ಲ.
  
ತಲೆ ತಲೆಮಾರುಗಳಿಂದ ಅಡವಿ ಧ್ವಂಸವಾಗದಂತೆ ಕಾಪಾಡುತ್ತಿರುವುದು ಆದಿವಾಸಿಗಳೇ. ಈ ಹಿನ್ನೆಲೆಯಲ್ಲಿ ಜೀವಿಸುತ್ತಿರುವ ಪ್ರದೇಶದಿಂದ ಅವರನ್ನು ತೊಲಗಿಸುವ ಪ್ರಕ್ರಿಯೆ ಕೈಗೊಂಡರೆ ಕಾರ್ಪೊರೇಟ್ ಶಕ್ತಿಗಳಿಗೆ ಸಂಪನ್ಮೂಲಗಳ ಲೂಟಿ ಮಾಡುವುದಕ್ಕೆ ಪೂರ್ತಿಯಾಗಿ ಅಡ್ಡಿ ಆತಂಕಗಳಿಲ್ಲದಂತಾಗುತ್ತದೆ.ಇದರಲ್ಲಿ ಸಂಶಯವಿಲ್ಲ.

(ಕೃಪೆ:ಆಂಧ್ರಜ್ಯೋತಿ)

Writer - ಮಧು, ಕನ್ನಡಕ್ಕೆ: ಕಸ್ತೂರಿ

contributor

Editor - ಮಧು, ಕನ್ನಡಕ್ಕೆ: ಕಸ್ತೂರಿ

contributor

Similar News