ನರೇಂದ್ರ ಮೋದಿ ಸಿನೆಮ ಬಿಡುಗಡೆ ತಡೆಗೆ ಆಕ್ಷೇಪ: ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ಹೊಸದಿಲ್ಲಿ, ಎ.12: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನೆಮವನ್ನು ಮತದಾನ ಮುಗಿಯುವವರೆಗೆ ಬಿಡುಗಡೆಗೊಳಿಸದಂತೆ ಚುನಾವಣಾ ಆಯೋಗ ತಡೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಎಪ್ರಿಲ್ 15ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
‘ಪಿಎಂ ನರೇಂದ್ರ ಮೋದಿ’ ಹೆಸರಿನ ಈ ಸಿನೆಮ ಎಪ್ರಿಲ್ 11ರಂದು ಬಿಡುಗಡೆಯಾಗಲಿದೆ ಎಂದು ಸಿನೆಮದ ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದರು. ಆದರೆ ಚುನಾವಣಾ ಆಯೋಗ ಮತದಾನ ಪ್ರಕ್ರಿಯೆ ಅಂತ್ಯಗೊಳ್ಳುವವರೆಗೆ ಸಿನೆಮ ಬಿಡುಗಡೆ ಮುಂದೂಡುವಂತೆ ಎಪ್ರಿಲ್ 10ರಂದು ಸೂಚಿಸಿತ್ತು. ಆಯೋಗದ ಈ ಕ್ರಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗಿದೆ ಎಂದು ನಿರ್ಮಾಪಕರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು.
ಸಂವಿಧಾನದ 324ನೇ ವಿಧಿಯಡಿ ಚುನಾವಣಾ ಆಯೋಗಕ್ಕೆ ಪೂರ್ಣಾಧಿಕಾರ ಇದ್ದರೂ, ಈ ಅಧಿಕಾರಕ್ಕೆ ಇತಿಮಿತಿಯಿದೆ. ಅಲ್ಲದೆ ಕಾನೂನಿನಂತೆ ಸಿನೆಮ ಬಿಡುಗಡೆಗೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಬಿಎಫ್‌ಸಿ(ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್)ಗೆ ಇದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಚುನಾವಣಾ ಆಯೋಗದ ಈ ಆದೇಶದಿಂದ ‘ಲಕ್ಷ್ಮೀಸ್ ಎನ್‌ಟಿಆರ್’ ಮತ್ತು ‘ಉದ್ಯಾಮ ಸಿಂಹಂ’ ಸಿನೆಮದ ಬಿಡುಗಡೆಯ ಮೇಲೆಯೂ ಪರಿಣಾಮ ಬೀರಿದೆ.