ಸರಣಿ ಸುಳ್ಳುಗಾರ್ತಿ ಸ್ಮೃತಿ ಇರಾನಿಯನ್ನು ಚುನಾವಣೆಯಿಂದ ಅನರ್ಹಗೊಳಿಸಿ: ಕಾಂಗ್ರೆಸ್

Update: 2019-04-12 15:59 GMT

ಹೊಸದಿಲ್ಲಿ,ಎ.12: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ‘ಸರಣಿ ಸುಳ್ಳುಗಾರ್ತಿ’ ಎಂದು ಶುಕ್ರವಾರ ಬಣ್ಣಿಸಿರುವ ಕಾಂಗ್ರೆಸ್,ಅವರು ತನ್ನ ಶೈಕ್ಷಣಿಕ ದಾಖಲೆಗಳನ್ನು ‘ಸುಳ್ಳಾಗಿಸಿದ್ದಾರೆ’ ಮತ್ತು ಚುನಾವಣಾ ಆಯೋಗಕ್ಕೆ ಪರಸ್ಪರ ವೈರುಧ್ಧ್ಯದ ಅಫಿದಾವತ್ತುಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿದೆ. ಇದಕ್ಕಾಗಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸುವಂತೆ ಅದು ಆಗ್ರಹಿಸಿದೆ.

ಇರಾನಿ ಅವರು ಕೇಂದ್ರ ಸಚಿವೆಯಾಗಿ ತನ್ನ ಪ್ರಭಾವ ಮತ್ತು ಅಧಿಕಾರವನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ ಎಂದೂ ಕಾಂಗ್ರೆಸ್ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿ ಅವರು ಆರೋಪಿಸಿದರು.

ತಾನು ಪದವೀಧರೆಯಲ್ಲ ಎಂಬ ಪ್ರತಿಪಕ್ಷದ ಪ್ರತಿಪಾದನೆಗಳನ್ನು ತಳ್ಳಿಹಾಕುತ್ತಿದ್ದ ಇರಾನಿ,ತಾನು ದಿಲ್ಲಿ ವಿವಿಯ ಪದವಿ ತರಗತಿಗೆ ನೋಂದಾಯಿಸಿಕೊಂಡಿದ್ದೆ,ಆದರೆ ಅದನ್ನು ಪೂರ್ಣಗೊಳಿಸಲಿಲ್ಲ ಎನ್ನುವುದನ್ನು ಗುರುವಾರ ಅಮೇಠಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಸಂದರ್ಭ ಒಪ್ಪಿಕೊಂಡಿದ್ದಾರೆ. ಅವರು ಹುದ್ದೆಯಿಂದ ಕೆಳಗಿಳಿಯಬೇಕು ಮತ್ತು ಅವರನ್ನು ಚುನಾವಣೆಗೆ ಅನರ್ಹಗೊಳಿಸಬೇಕು ಎಂದು ಚತುರ್ವೇದಿ ಹೇಳಿದರು.

ಇರಾನಿ ಪದವೀಧರೆ ಅಲ್ಲದಿರುವುದು ನಮ್ಮ ಸಮಸ್ಯೆಯಲ್ಲ. ಆದರೆ ಪದೇ ಪದೇ ಪ್ರಮಾಣ ಮಾಡಿ ನ್ಯಾಯಾಲಯಗಳಲ್ಲಿ ಸುಳ್ಳು ಹೇಳಿದ್ದಾರೆ. ಭಾರತದ ಜನರು ಈ ಸುಳ್ಳುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಈ ‘ಸರಣಿ ಸುಳ್ಳುಗಾರ್ತಿ’ಗೆ ಸೂಕ್ತ ರಾಜಕೀಯ ಉತ್ತರವನ್ನು ನೀಡುತ್ತಾರೆ ಎಂದರು.

ಇರಾನಿ ತನ್ನ ಶೈಕ್ಷಣಿಕ ದಾಖಲೆಗಳನ್ನು ಸುಳ್ಳು ಮಾಡಿದ್ದು ಮಾತ್ರವಲ್ಲ,ಚುನಾವಣಾ ಆಯೋಗಕ್ಕೆ ಪರಸ್ಪರ ವೈರುಧ್ಧ್ಯದ ಅಫಿದಾವಿತ್ ಗಳನ್ನು ಸಲ್ಲಿಸಿರುವುದೂ ಸ್ಪಷ್ಟವಾಗಿದೆ. ಇದು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಅಪರಾಧವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News