ವಿಶ್ವಕಪ್: 4ನೇ ಕ್ರಮಾಂಕದಲ್ಲಿ ಆಡಲು ರಾಹುಲ್ ಸಜ್ಜು

Update: 2019-04-12 18:47 GMT

  ಹೊಸದಿಲ್ಲಿ, ಎ.12: ಮುಂಬರುವ ವಿಶ್ವಕಪ್‌ನಲ್ಲಿ ಭಾರತದ ಬ್ಯಾಟಿಂಗ್ ಸರದಿಯ 4ನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೇ? ಎಂಬ ಪ್ರಶ್ನೆ ಉದ್ಬವಿಸಿದೆ. ಈ ಕ್ರಮಾಂಕದಲ್ಲಿ ಆಡಲು ಹಲವರು ಪೈಪೋಟಿ ನಡೆಸುತ್ತಿದ್ದಾರೆ. ಮೇ 30ರಿಂದ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಮೆಗಾ ಟೂರ್ನಿಗೆ 15 ಸದಸ್ಯರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ಸೋಮವಾರ ಸಭೆ ಸೇರಲಿದೆ. ನಾಲ್ಕನೇ ಕ್ರಮಾಂಕ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ 4ನೇ ಕ್ರಮಾಂಕದಲ್ಲಿ 11 ಆಟಗಾರರನ್ನು ಆಡಿಸಿದೆ. ಆದಾಗ್ಯೂ ಮುಂಬರುವ ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಕೆ.ಎಲ್.ರಾಹುಲ್, ರಾಯುಡು, ದಿನೇಶ್ ಕಾರ್ತಿಕ್, ರಿಷಭ್ ಪಂತ್ ಈ ಸ್ಥಾನದಲ್ಲಿ ಆಡಲು ಉತ್ಸುಕರಾಗಿದ್ದಾರೆ. ಪ್ರತಿಭಾವಂತ ಆಟಗಾರ ವಿಜಯ ಶಂಕರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಆಯ್ಕೆಗಾರರು ಶಂಕರ್‌ರನ್ನು 4ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯೂ ಇದೆ. ಇತ್ತೀಚೆಗೆ ಐಪಿಎಲ್ ಪಂದ್ಯದಲ್ಲಿ ಔಟಾಗದೆ 100 ರನ್ ಗಳಿಸಿರುವ ರಾಹುಲ್, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. ಈಗ ನಡೆಯುತ್ತಿರುವ ಐಪಿಎಲ್‌ನ 7 ಇನಿಂಗ್ಸ್ ಗಳಲ್ಲಿ ರಾಹುಲ್ 317 ರನ್ ಗಳಿಸಿದ್ದಾರೆ. 26 ರ ಹರೆಯದ ರಾಹುಲ್ 3 ಅರ್ಧಶತಕ ಹಾಗೂ 1 ಶತಕ ಗಳಿಸಿ ಟೂರ್ನಿಯಲ್ಲಿ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ 15ನೇ ಕ್ರಿಕೆಟಿಗ ಎನಿಸಿಕೊಂಡಿದ್ದರು. ರಾಹುಲ್ ಈ ತನಕ 14 ಏಕದಿನ ಪಂದ್ಯಗಳನ್ನು ಆಡಿದ್ದು 34.30ರ ಸರಾಸರಿಯಲ್ಲಿ 343 ರನ್ ಗಳಿಸಿದ್ದಾರೆ. ವಿಶ್ವಕಪ್‌ನಲ್ಲಿ ಆಡಲು ಅವಕಾಶ ನೀಡಿದರೆ ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ಧ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News