ಇವಿಎಂ ಬಳಕೆಗೆ ಪ್ರತಿಪಕ್ಷಗಳ ಪ್ರತಿರೋಧ; ಮತಪತ್ರಕ್ಕಾಗಿ ಬೇಡಿಕೆ

Update: 2019-04-14 15:53 GMT

ಹೊಸದಿಲ್ಲಿ,ಎ.14: ವಿದ್ಯುನ್ಮಾನ ಮತದಾನ ಯಂತ್ರಗಳ ವಿರುದ್ಧ ರವಿವಾರ ತೀವ್ರ ದಾಳಿಯನ್ನು ನಡೆಸಿರುವ ಸಂಯುಕ್ತ ಪ್ರತಿಪಕ್ಷವು ಮತಪತ್ರಗಳ ಯುಗಕ್ಕೆ ಮರಳುವಂತೆ ಆಗ್ರಹಿಸಿದೆ. ಕನಿಷ್ಠ ಶೇ.೫೦ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳನ್ನು ಇವಿಎಮ್‌ಗಳ ಜೊತೆ ತಾಳೆ ಹಾಕುವುದು ಅತ್ಯಂತ ಅಗತ್ಯವಾಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತೊಮ್ಮೆ ಈ ಬೇಡಿಕೆಯನ್ನು ಮಂಡಿಸಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ವರಿಷ್ಠ ಎನ್.ಚಂದ್ರಬಾಬು ನಾಯ್ಡು ಅವರ ಅಧ್ವರ್ಯುತನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಪಕ್ಷಗಳು ಸ್ಪಷ್ಟಪಡಿಸಿದವು.

ರವಿವಾರ ಇಲ್ಲಿ ಪ್ರತಿಪಕ್ಷಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು ಅವರು,ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ಮುಂದುವರಿದ ದೇಶಗಳೂ ಚುನಾವಣೆಗಳಲ್ಲಿ ಮತಪತ್ರಗಳ ಬಳಕೆಯನ್ನೇ ಆಯ್ಕೆ ಮಾಡಿಕೊಂಡಿವೆ. ವಿವಿಪ್ಯಾಟ್ ಯಂತ್ರಗಳು ಇವಿಎಮ್‌ಗಳಿಗೆ ಅನಿವಾರ್ಯವಾಗಿವೆ. ಇವುಗಳ ಮೂಲಕ ಮಾತ್ರ ಮತದಾರರಲ್ಲಿ ವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯ ಎಂದು ಹೇಳಿದರು.

ಆಂಧ್ರಪ್ರದೇಶದಲ್ಲಿ ಮೊದಲ ಹಂತದ ಚುನಾವಣೆಗಳ ಸಂದರ್ಭದಲ್ಲಿ ನಾಯ್ಡು ಅವರು ದೋಷಪೂರಿತ ಮತಯಂತ್ರಗಳ ವಿಷಯವನ್ನೆತ್ತಿದ್ದರು ಮತ್ತು ಸಮಾನ ಸ್ಪರ್ಧೆಯ ಕಣಕ್ಕೆ  ವ್ಯತ್ಯಯವುಂಟಾಗುತ್ತಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇಂತಹ ಸಂವೇದನಾರಹಿತ,ಅವಾಸ್ತವಿಕ,ಬೇಜವಾಬ್ದಾರಿಯ ಮತ್ತು ನಿರರ್ಥಕ ಚುನಾವಣಾ ಆಯೋಗವನ್ನು ತಾನೆಂದೂ ಕಂಡಿರಲಿಲ್ಲ. ನೀವು ಪ್ರಜಾಪ್ರಭುತ್ವದ ಅಣಕವಾಡುತ್ತಿದ್ದೀರಾ? ಚುನಾವಣಾ ಆಯೋಗವು ಬಿಜೆಪಿಯ ಶಾಖಾ ಕಚೇರಿಯಾಗಿಬಿಟ್ಟಿದೆ ಎಂದು ಅವರು ಹೇಳಿದ್ದರು.

ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್,ಕಾಂಗ್ರೆಸ್ ನಾಯಕರಾದ ಕಪಿಲ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಸೇರಿದಂತೆ ಹಲವಾರು ಪ್ರತಿಪಕ್ಷ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಭೌತಿಕ ಪರಿಶೀಲನೆಯಿಲ್ಲದೆ ಆನ್‌ಲೈನ್‌ನಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು  ಕೈಬಿಡಲಾಗಿದೆ. ಪಕ್ಷಗಳು ಇಂತಹ ಉದ್ದ ಪಟ್ಟಿಗಳನ್ನೇ ಚುನಾವಣಾ ಆಯೋಗಕ್ಕೆ  ಸಲ್ಲಿಸಿವೆ. ಕನಿಷ್ಠ ಶೇ.50ರಷ್ಟು ವಿವಿಪ್ಯಾಟ್ ಸ್ಲಿಪ್‌ಗಳನ್ನು ತಾಳೆ ಹಾಕುವುದು ಈಗ ಹೆಚ್ಚು ಅಗತ್ಯವಾಗಿದೆ. ನಾವು ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಆಗ್ರಹಿಸುತ್ತೇವೆ ಎಂದು ಸಿಂಘ್ವಿ ಹೇಳಿದರು.

ಮೊದಲ ಹಂತದ ಚುನಾವಣೆಗಳ ಬಳಿಕ ಇವಿಎಮ್‌ಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ,ಆದರೆ ಚುನಾವಣಾ ಆಯೋಗವು ಈ ಬಗ್ಗೆ ಸಾಕಷ್ಟು ಗಮನ ಹರಿಸುತ್ತಿಲ್ಲ. ‘ಎಕ್ಸ್’ ಪಕ್ಷದ ಗುಂಡಿ ಒತ್ತಿದರೆ ‘ವೈ’ಪಕ್ಷಕ್ಕೆ ಮತ ಸೇರುತ್ತಿದೆ. ವಿವಿಪ್ಯಾಟ್ ಸ್ಲಿಪ್ ಏಳು ಸೆಕೆಂಡ್‌ಗಳ ಬದಲಿಗೆ ಕೇವಲ ಮೂರು ಸೆಕೆಂಡ್ ಕಾಲ ಪ್ರದರ್ಶಿತಗೊಳ್ಳುತ್ತದೆ ಎಂದರು.

ತನ್ಮಧ್ಯೆ ಕೇಜ್ರಿವಾಲ್ ಅವರು ಹೆಚ್ಚಿನ ಮತಗಳಿಕೆಗಾಗಿ ಇವಿಎಮ್‌ಗಳನ್ನು ತಿರುಚುತ್ತಿದೆ ಎಂದು ಆರೋಪಿಸಿ ಬಿಜೆಪಿಯ ವಿರುದ್ಧ ತೀವ್ರದಾಳಿಯನ್ನು ಆರಂಭಿಸಿದ್ದಾರೆ.

ಇವಿಎಮ್‌ಗಳ ಕಾರ್ಯವೈಖರಿಯ ಬಗ್ಗೆ ಪ್ರತಿಪಕ್ಷವು ತನ್ನ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದೆ. ಹಿಂದೆ ಪ್ರತಿ  ವಿಧಾನಸಭಾ ಕ್ಷೇತ್ರಕ್ಕೆ ಒಂದು ಇವಿಎಂ ಯಂತ್ರದಲ್ಲಿ ದಾಖಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್‌ಗಳ ಜೊತೆ ತಾಳೆ ಹಾಕಲಾಗುತ್ತಿತ್ತು. ಈ ಸಂಖ್ಯೆಯನ್ನು ಹೆಚ್ಚಿಸುವಂತೆ ಕೋರಿ ಪ್ರತಿಪಕ್ಷಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯವು ತಾಳೆ ಹಾಕಲಾಗುವ ವಿವಿಪ್ಯಾಟ್‌ಗಳ ಸಂಖ್ಯೆಯನ್ನು ಐದಕ್ಕೆ ಹೆಚ್ಚಿಸುವಂತೆ ಇತ್ತೀಚಿನ ತೀರ್ಪಿನಲ್ಲಿ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು. ಆದರೆ ಈ ತೀರ್ಪು ಪ್ರತಿಪಕ್ಷಕ್ಕೆ ತೃಪ್ತಿ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News