ಹೈದರಾಬಾದ್ ನ ತ್ಯಾಜ್ಯ ರಾಶಿಯಲ್ಲಿ ಅಂಬೇಡ್ಕರ್ ರ ಭಗ್ನಗೊಂಡ ಪ್ರತಿಮೆ ಪತ್ತೆ

Update: 2019-04-14 18:01 GMT

   ಹೈದರಾಬಾದ್, ಎ.14: ಹೈದರಾಬಾದ್‌ನ ಪುಂಜಗುಟ್ಟ ಎಂಬಲ್ಲಿ ಸಂವಿಧಾನಶಿಲ್ಪಿ ಡಾ ಅಂಬೇಡ್ಕರ್ ಜಯಂತಿಯ ಮುನ್ನಾ ದಿನ ಸ್ಥಾಪಿಸಲಾಗಿದ್ದ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಧಿಕಾರಿಗಳ ಆದೇಶದ ಮೇರೆಗೆ ಅಲ್ಲಿಂದ ತೆರವುಗೊಳಿಸಿದ ಬಳಿಕ ಈ ಪ್ರತಿಮೆ ಭಗ್ನಗೊಂಡ ಸ್ಥಿತಿಯಲ್ಲಿ ತ್ಯಾಜ್ಯದ ರಾಶಿಯಲ್ಲಿ ಪತ್ತೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

 ಅಂಬೇಡ್ಕರ್ ಪ್ರತಿಮೆ ರಕ್ಷಣಾ ಸಮಿತಿಯು ಈ ಪ್ರತಿಮೆಯನ್ನು ಸ್ಥಾಪಿಸಿತ್ತು. ಆದರೆ ಹೈದರಾಬಾದ್ ಮಹಾನಗರ ಪಾಲಿಕೆಯ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ತಾವು ಅನುಮತಿ ಕೋರಿ ಪತ್ರ ಬರೆದಿದ್ದರೂ ಪಾಲಿಕೆಯಿಂದ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ ಎಂದು ಸಮಿತಿಯ ಮುಖಂಡ ಜಿ ವಿನೋದ್ ಕುಮಾರ್ ಹೇಳಿದ್ದು ಪ್ರತಿಮೆಯ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ನಡೆಸಿದರು. ಉದ್ವಿಗ್ನ ವಾತಾವರಣ ನೆಲೆಸುವ ಸಾಧ್ಯತೆಯನ್ನು ಮನಗಂಡು ಪೊಲೀಸರು ಕುಮಾರ್ ಸಹಿತ ಕನಿಷ್ಟ 8 ಮಂದಿಯನ್ನು ವಶಕ್ಕೆ ಪಡೆದರು ಎಂದು ವರದಿಯಾಗಿದೆ.

 ಅಂಬೇಡ್ಕರ್ ಜಯಂತಿಯ ಸಂದರ್ಭವೇ ಅವರ ಪ್ರತಿಮೆಯನ್ನು ಸ್ಥಳಾಂತರಿಸಿ ತ್ಯಾಜ್ಯದ ರಾಶಿಯಲ್ಲಿ ಎಸೆಯುವ ಮೂಲಕ ಅವರಿಗೆ ಹೈದರಾಬಾದ್ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಹೈದರಾಬಾದ್ ಪೊಲೀಸರು ಅವಮಾನ ಮಾಡಿದ್ದಾರೆ. ಪ್ರಕರಣದ ಬಗ್ಗೆ ಸರಕಾರ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಕುಮಾರ್ ಹೇಳಿದ್ದಾರೆ.

 ಈ ಪ್ರತಿಮೆಯನ್ನು ಅಲ್ಲಿಂದ ತೆರವುಗೊಳಿಸಿದ ಅಧಿಕಾರಿಗಳು ಇವನ್ನು ಯೂಸುಫ್‌ಗಢ ಎಂಬಲ್ಲಿರುವ ಕೋಟ್ಲ ವಿಜಯಭಾಸ್ಕರ ರೆಡ್ಡಿ ಒಳಾಂಗಣ ಕ್ರೀಡಾಂಗಣಕ್ಕೆ ಸಾಗಿಸಿದ್ದರು. ಬಳಿಕ ಈ ಪ್ರತಿಮೆ ಸಮೀಪದ ಜವಾಹರನಗರ ಡಂಪಿಂಗ್ ಯಾರ್ಡ್‌ನಲ್ಲಿ ಭಗ್ನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರತಿಮೆಯನ್ನು ಸಾಗಿಸುವ ಸಂದರ್ಭ ಅದಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೆ, ಪ್ರತಿಮೆ ವಾಹನದಿಂದ ಕೆಳಗೆ ಬಿದ್ದ ಕಾರಣ ಹಾನಿಗೊಂಡಿದೆ ಎಂಬುದು ಅಂಬೇಡ್ಕರ್ ಪ್ರತಿಮೆ ಸುರಕ್ಷಾ ಸಮಿತಿಯ ಸದಸ್ಯರ ಆರೋಪವಾಗಿದೆ.

ಘಟನೆಯ ಬಗ್ಗೆ ತೀವ್ರ ವಿಷಾಧ ವ್ಯಕ್ತಪಡಿಸಿರುವ ಹೈದರಾಬಾದ್ ಮಹಾನಗರಪಾಲಿಕೆ ಆಯುಕ್ತ ದಾನ ಕಿಶೋರ್, ಮೇಲಧಿಕಾರಿಗಳ ಅನುಮತಿ ಇಲ್ಲದೆ ಪ್ರತಿಮೆಯನ್ನು ಡಂಪಿಂಗ್ ಯಾರ್ಡ್‌ಗೆ ಸಾಗಿಸಿದ ಆರೋಪದಲ್ಲಿ ಡಂಪಿಂಗ್ ಯಾರ್ಡ್‌ನ ನಿರ್ವಾಹಕ ಬಾಲಾಜಿಯನ್ನು ಅಮಾನತುಗೊಳಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಪ್ರಕರಣದ ತನಿಖೆ ನಡೆಸಲು ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ.

 ಘಟನೆಯ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನಿಶ್ಯರ್ಥ ಕ್ಷಮೆ ಯಾಚಿಸಬೇಕು ಮತ್ತು ಅಂಬೇಡ್ಕರ್ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ತೆಲಂಗಾಣ ಎಸ್‌ಸಿ/ಎಸ್‌ಟಿ ಆಯೋಗ ಮಹಾನಗರಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರಿಗೆ ತಿಳಿಸಿದೆ. ಎಸ್‌ಸಿ/ ಎಸ್‌ಟಿ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News